About Us       Contact

ಮುಂಬಯಿ, ಫೆ.01: ಕರಾವಳಿಯ ಅತ್ಯಂತ ಪ್ರಾಚೀನ ದುರ್ಗಾ ದೇವಾಲಯಗಳಲ್ಲಿ ಒಂದೆಣಿಸಿದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಅಲ್ಲಿನ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಈಗ ನವೀಕರಣ ಗೊಂಡು ಇದೇ ಫೆ.06 ರಿಂದ 12 ರವರೆಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಸಂಭ್ರಮದಲ್ಲಿದೆ.

ದೇವಾಲಯದ ಪ್ರಾಚೀನತೆ-ವೈಶಿಷ್ಟ ್ಯ
ದುರ್ಗಾಪರಮೇಶ್ವರಿಯ ಮಹಿಷಾಸುರ ಅಥವಾ ಮಹಿಷಮರ್ದಿನಿ ರೂಪವೇ ಹೆಚ್ಚಿನ ದೇವಾಲಯಗಳಲ್ಲಿ ಆರಾಧಿಸಲ್ಪಡುತ್ತಿದೆ. ಜಿಲ್ಲೆಯ ಹೆಚ್ಚಿನ ದುರ್ಗಾ ದೇವಾಲಯಗಳು ಎಂಟು-ಒಂಬತ್ತನೆಯ ಶತಮಾನದಲ್ಲಿ ಸ್ಥಾಪಿಸಲ್ಪಟ್ಟವೆಂದು ಇತಿಹಾಸಕಾರರು ಹೇಳುತ್ತಾರೆ. ಎಂಟನೆಯ ಶತಮಾನದ ಬೆಳ್ಮಣ್ಣ್ಣು (ಪಕ್ಕದ ಊರು) ತಾಮ್ರಶಾಸನದಲ್ಲಿ ಅಲ್ಲಿನ ಮಹಿಷಮರ್ದಿನಿ ದೇವಾಲಯದ ಉಲ್ಲೇಖ ಇರುವÀ ಕಾರಣ ಅದಕ್ಕಿಂತಲೂ ಪೂರ್ವದಲ್ಲಿ ದುರ್ಗಾ ದೇವಾಲಯಗಳು ಇದ್ದವೆನ್ನುವುದನ್ನು ಊಹಿಸಬಹುದು. ಅದರಂತೆ ಮುಂಡ್ಕೂರಿನ ದುರ್ಗಾ ದೇವಿಯ ಗರ್ಭಗೃಹದಲ್ಲಿರುವ ಶಿಲಾವಿಗ್ರಹ ಒಂಬತ್ತನೆಯ ಶತಮಾನದ್ದೆಂದು ಇತಿಹಾಸಕಾರರು ಅಭಿಪ್ರಾಯಪಟ್ಟರೂ ಇದಕ್ಕಿಂತ ಒಂದೆರಡು ಶತಮಾನ ಪೂರ್ವದಲ್ಲಿಯೂ ಇದ್ದಿರಬಹುದಾಗಿದೆ. ಒಟ್ಟಿನಲ್ಲಿ ಈ ದೇವಾಲಯಕ್ಕೆ 1200 ವರ್ಷಗಳಿಗಿಂತ ಹೆಚ್ಚಿನ ಪ್ರಾಚೀನತೆ ಇರುವುದಕ್ಕೆ ಯಾವ ಸಂಶಯವೂ ಇಲ್ಲ.

ಕರಾವಳಿಯ ಪ್ರಾಚೀನ ದೇವಿ ದೇವಸ್ಥಾನಗಳ ವಿಗ್ರಹಗಳು ಮಹಿಷಮರ್ದಿನಿ ರೂಪದಲ್ಲಿರುವುದು ಹೆಚ್ಚು. ಮುಂಡ್ಕೂರಿನ ದೇವಿಯ ವಿಗ್ರಹವೂ ಮಹಿಷಮರ್ದಿನಿ ರೂಪವಾಗಿದೆ. ಕೋಣನ ರೂಪದ ಮಹಿಷನನ್ನು ತ್ರಿಶೂಲದಿಂದ ವಧಿಸುವ, ಅಥವಾ ಅದರ ಮುಸುಡು ಇಲ್ಲವೆ ಬಾಲವನ್ನು ಒಂದು ಕೈಯಲ್ಲಿ ಹಿಡಿದು ಮರ್ದಿಸುವ ದೇವಿಯ ಶಿಲಾವಿಗ್ರಹಗಳು ಕಾಲಾನುಕ್ರಮದಲ್ಲಿ ಮೊದಲ ಘಟ್ಟದ ವಿಗ್ರಹಗಳು. ಬಹುಶಃ ನಂತರದ ಹಂತದಲ್ಲಿ ಮಹಿಷನ ಬದಲಿಗೆ ಮಹಿಷಾಸುರ ಅಂದರೆ ಮಾನವರೂಪಿ ದಾನವನನ್ನು ವಧಿಸುವ ದೇವಿಯ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.

ಮುಂಡ್ಕೂರಿನ ದೇವಿಯ ಮೂಲವಿಗ್ರಹ ಎರಡೂವರೆ ಅಡಿ ಎತ್ತರದ, ನೆಟ್ಟಗೆ ನಿಂತ ಭಂಗಿಯ ವಿಗ್ರಹವಾಗಿರುವುದರಿಂದ ದೇವಿಯು ಮಹಿಷನ ವಧೆಯ ನಂತರ ಕೋಪವನ್ನು ನಿಗ್ರಹಿಸಿ ಶಾಂತಳಾದ ಸ್ಥಿತಿಯ ರೂಪವಾಗಿದೆ ಎನ್ನಬಹುದು. ಮಹಿಷನನ್ನು ಬಾಲದಿಂದ ಹಿಡಿದು ತ್ರಿಶೂಲದಿಂದ ತಿವಿದು ನಿಗ್ರಹಿಸಿರುವುದು ದೇವಿಯ ಪರಮಶಕ್ತಿಯನ್ನು ಸೂಚಿಸುವಂತಿದೆ.
ಇಲ್ಲಿನ ಮೂಲವಿಗ್ರಹ ಕ್ರಿಸ್ತಶಕ 9ನೆಯ ಶತಮಾನದ್ದು ಎಂದು ಡಾ. ಪಿ. ಗುರುರಾಜ ಭಟ್ಟರು ತಮ್ಮ `ಸ್ಟಡೀಸ್ ಇನ್ ತುಳುವ ಹಿಸ್ಟರಿ ಅಂಡ್ ಕಲ್ಚರ್' (1975) ಗ್ರಂಥದಲ್ಲಿ, ಇದರ ಚಿತ್ರವನ್ನು ಕೊಟ್ಟು, ಪ್ರತಿಮಾಲಕ್ಷಣವನ್ನು ಆಧರಿಸಿ ಹೇಳಿದ್ದಾರೆ. ದೇವಾಲಯ ನಿರ್ಮಾಣ ಆಗುವುದಕ್ಕಿಂತಲೂ ಪೂರ್ವದಲ್ಲಿ ದುರ್ಗಾದೇವಿಯ ಆರಾಧನೆ ಈ ಸ್ಥಳದಲ್ಲಿ ಇದ್ದಿರುವುದು ಸಹಜ.

ಡಾ| ಗುರುರಾಜ ಭಟ್ ತಮ್ಮ Antiquities of South Kanara' (1969) ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ: Mundukuru: Mundukuru is a part of the Karkala Taluk and has long been a renowned place of Brahminical culture. It was included in the territory of the Chautas during medieval times. The shrine of Mahisha-mardini at Mundukuru happens to be an important monument of the place, which calls for our close observation from the standpoint of the study of religion. The slim figure of Mahisha-mardini of about 2 ½ in height, piercing the head of Mahisha with the end of Trishhula may be regarded as a ninth* Century Icon.” (ಈ ಕಾಲವನ್ನು ಇಲ್ಲಿ ಅಂದರೆ 1969ರಲ್ಲಿ ಬೇರೆ ರೀತಿ ಕೊಟ್ಟಿದ್ದ ಡಾ| ಭಟ್ ನಂತರದ 1975ರ ತಮ್ಮ ಡಾಕ್ಟರೇಟ್ ಅಧ್ಯಯನದಲ್ಲಿ ಕೊಟ್ಟಿರುವ 9ನೆಯ ಶತಮಾನ ಎಂಬ ಕಾಲವನ್ನೇ ಪರಿಗಣಿಸಲಾಗಿದೆ).

ಭಾರ್ಗವಿ
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಭಾರ್ಗವ ಮುನಿಗಳಿಂದ ಪ್ರತಿಷ್ಠಾಪಿತವಾಗಿದೆ. ಭಾರ್ಗವ ಗೋತ್ರದ ತಪಸ್ವಿ ಒಬ್ಬರಿಂದ ಸ್ಥಾಪಿಸಲ್ಪಟ್ಟದ್ದು ಎಂದು ಅನುಸಂಧಾನ ಮಾಡಿಕೊಳ್ಳಬಹುದಾಗಿದೆ. ಈಗಲೂ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿಯು ಭಾರ್ಗವ ಗೋತ್ರದ ಕುಟುಂಬಗಳಿಗೆ ಕುಲದೇವರಾಗಿದ್ದಾಳೆ. ಭಾರ್ಗವ ಮುನಿಯಿಂದ ಪ್ರತಿಷ್ಠಾಪಿತವಾಗಿದೆ ಎನ್ನುವುದನ್ನು ಸಮರ್ಥಿಸುವಂತೆ `ಸ್ಕಾಂದ ಪುರಾಣ'ದಲ್ಲಿ ಒಂದು ಉಲ್ಲೇಖವಿದೆಯೆಂದು ವಿದ್ವಾಂಸರಾದ ದಿ. ವೇದಮೂರ್ತಿ ಇನ್ನಾ ಕೃಷ್ಣಾಚಾರ್ಯರು ದಾಖಲಿಸಿದ್ದಿದೆ:

ಜನಾಃ ಶುೃಣುತಮೇವಾಕ್ಯಂ ಸರ್ವೇಷಾಂ ವಃ ಸುಖಾವಹಾಮ್ |
ದೈತ್ಯ ದಾನವ ಘಾತಾಯ ದೇವೀ ಸಂಸ್ಥಾಪಿತಾಮಯಾ ||
ಸೇವ್ಯಾ ಭಗವತೀದೇವೀಂ ಮುಂಡಘ್ನೇ ನಗರೋತ್ತಮೇ |
ಭವತಾಂಚ ಮನೋಭೀಷ್ಟಂ ಕರಿಷ್ಯತಿ ಶುಭಪ್ರದಾ ||
`ಎಲ್ಲರೂ ಸುಖಿಗಳಾಗಿ ಬಾಳುವುದಕ್ಕೋಸ್ಕರ ಜನರು ನನ್ನ ಈ ಮಾತನ್ನು ಕೇಳಿರಿ. ದೈತ್ಯದಾನವರ ನಾಶಕ್ಕಾಗಿ, ತಮ್ಮೆಲ್ಲರ ಮನಸ್ಸಿನ ಇಷ್ಟಾರ್ಥಗಳ ನೆರವೇರಿಕೆಗಾಗಿ, ನಿಮ್ಮಿಂದ ದೇವಿಯ ಸೇವೆ ಮಾಡಲ್ಪಡುವುದಕ್ಕಾಗಿ ಶುಭಪ್ರದಳಾದ ಶ್ರೀದೇವಿಯ ಮೂರ್ತಿ ಮುಂಡ್ಕೂರು ಎಂಬ ಉತ್ತಮ ನಗರದಲ್ಲಿ ನನ್ನಿಂದ ಸಂಸ್ಥಾಪಿಸಲ್ಪಟ್ಟಿತು. ಕಷ್ಟಗಳು ಬಂದಾಗ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಿಯನ್ನು ಮನಸಾರೆ ಪ್ರಾರ್ಥಿಸಿದಾಗ ಇಷ್ಟಾರ್ಥಗಳು ಸಿದ್ಧಿಸುವುದು' - ಇದು ಭಾರ್ಗವ ಋಷಿಗಳ ವಾಣಿಯಾಗಿದೆ.

ಕ್ಷೇತ್ರ ಪುರಾಣ
ಮುಂಡಕೂರು ಎಂಬ ಹೆಸರನ್ನು ಆಧರಿಸಿ ಈ ಪ್ರದೇಶದಲ್ಲಿ ಜಗಜ್ಜನನಿಯಿಂದ ಮುಂಡಾಸುರನ ವಧೆ ಆಯಿತು ಎನ್ನುವ ಪುರಾಣವು ಇಲ್ಲಿನ ಸ್ಥಳಪುರಾಣದೊಂದಿಗೆ ಸೇರಿಕೊಂಡಿದೆ. ಇಲ್ಲಿ ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲ ಅರ್ಚಕರಾಗಿ ಕ್ಷೇತ್ರದ ಸಾನ್ನಿಧ್ಯ ವೃದ್ಧಿಗೆÉ ಕಾರಣರಾಗಿದ್ದ ದಿ. ವೇ| ಮೂ. ಜಯರಾಮ ಆಚಾರ್ಯ ಅವರು ವಿದ್ವಾಂಸರೂ ಸಂಶೋಧಕರೂ ಆಗಿದ್ದುದರಿಂದ ಐತಿಹ್ಯ, ಪುರಾಣ, ಇತಿಹಾಸ, ಪಾರ್ದನ ಇವೆಲ್ಲ ಮೂಲಗಳನ್ನು ಸಂಗ್ರಹಿಸಿ ಒಂದು ಅತ್ಯುತ್ತಮ ಕ್ಷೇತ್ರ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ಮುಂದಿನ ಜನಾಂಗಕ್ಕೆ ದಕ್ಕದೆ ಹೋಗಬಹುದಾಗಿದ್ದ ಹಲವು ಕಟ್ಟುಕಟ್ಟಲೆಗಳನ್ನು ದಾಖಲಿಸಿದ್ದಾರೆ. ಅವರು ಈ ಕ್ಷೇತ್ರದ ಪರಿಚಯ ಪುಸ್ತಕವನ್ನು ಸ್ವತಃ ಬರೆದುದ್ದಲ್ಲದೆ ಸುಪ್ರಭಾತವನ್ನು (ವಿದ್ವಾನ್ ಸಾಣೂರು ಭೀಮ ಭಟ್) ಮತ್ತು ಯಕ್ಷಗಾನ ಪ್ರಸಂಗಗಳನ್ನು (ಹರಿದಾಸ ಗೋವಿಂದ ಭಾಗವತರು ಮತ್ತು ಸೀತಾನದಿ ಗಣಪಯ್ಯ ಶೆಟ್ಟರು) ವಿದ್ವಾಂಸರಿಂದ ಬರೆಯಿಸಿ ಮುದ್ರಿಸಿದ್ದಾರೆ. ಜತೆಗೆ ಕಾಂತಾಬಾರೆ ಬೂದಬಾರೆಯರ ಜೀವನಚರಿತ್ರೆಯನ್ನು ತಿಳಿಯಲು ಇಬ್ಬರು ಪಾಡ್ದನ ಗಾಯಕರನ್ನು ಕರೆಯಿಸಿ ಹಾಡಿಸಿ ದಾಖಲಿಸಿಕೊಂಡಿದ್ದಾರೆ. ಈ ಎಲ್ಲ ಮೂಲಗಳಿಂದ ನಾವು ಈ ಕ್ಷೇತ್ರದ ಬಗ್ಗೆ ಈ ಕೆಳಗಿನ ವಿಷಯಗಳನ್ನು ತಿಳಿಯಬಹುದು.

ಕರವೀರಪುರದ ಸುರಥ ಮಹಾರಾಜನಿಗೆ ನೂರಾರು ದೇವಿ ಮಂದಿರಗಳನ್ನು ಸ್ಥಾಪಿಸುವ ಆಕಾಂಕ್ಷೆಯಿತ್ತಂತೆ. ಮಹಾಮುನಿಯಾದ ಭಾರ್ಗವನೊಂದಿಗೆ ಸಂಚಾರ ಮಾಡುತ್ತಾ, ಮುಂಡಾಸುರನನ್ನು ಶ್ರೀದೇವಿ ವಧಿಸಿದ್ದ ಮುಂಡಕೂರಿಗೆ ಬಂದು, ಆ ಸ್ಥಳದಲ್ಲಿ ಒಂದು ದೇವಿ ಮಂದಿರವನ್ನು ಕಟ್ಟಿಸಲು ಮನಮಾಡಿದನು. ಭಾರ್ಗವರು ವಿಧಿಪೂರ್ವಕವಾಗಿ, ಮಹಾದೇವಿಯ ಮೂರ್ತಿಯನ್ನು ಪಶ್ಚಿಮಾಭಿಮುಖವಾಗಿ, ಶಾಂಭವಿ ತೀರದಲ್ಲಿ ಸ್ಥಾಪಿಸಿದರು.

ಪಾರ್ದನಗಳ ಕಾಲದಲ್ಲಿ
ಮಧ್ಯಯುಗದಲ್ಲಿ ಇಲ್ಲಿನ ಮೂರು ಗ್ರಾಮಗಳಿಗೆ ಮುಂಡ್ಕೂರು ರಾಜಧಾನಿಯಾಗಿದ್ದು ಇಲ್ಲಿ ದುಷ್ಟನಾದ ವೀರವರ್ಮನೆಂಬ ಬಲ್ಲಾಳ ಆಡಳಿತಗಾರನೊಬ್ಬನಿದ್ದ. ಅವನ ಕೈಕೆಳಗೆ ಶಿದ್ಧ ಮುಂಗ್ಲಿ, ಶಿವ ಮುಂಗ್ಲಿ ಎಂಬ ದುಷ್ಟರಿದ್ದರು. ಪಕ್ಕದ ಮೂಲ್ಕಿ ಸಾಮಂತರಸರ ರಾಜ್ಯದಲ್ಲಿದ್ದ ಅವಳಿ ವೀರರಾದ ಕಾಂತಬಾರೆ ಬೂದಬಾರೆಯರು ಪ್ರತಿನಿತ್ಯ ಶಾಂಭವಿ ನದಿ ದಾಟಿ ಮುಂಡ್ಕೂರು ದೇವಿಯ ದರ್ಶನ ಮಾಡಿ ಹೋಗುತ್ತಿದ್ದರು. ಅದು ವೀರವರ್ಮನಿಗೆ ಅಸಹನೆ ಉಂಟು ಮಾಡಿದರೂ ಸಹಿಸಿಕೊಂಡಿದ್ದ.
ದುಷ್ಟ ವ್ಯಸನಗಳಿಗೆ ಒಳಗಾಗಿದ್ದ ಅವÀನು ತನ್ನಲ್ಲಿದ್ದ ಸಂಪತ್ತನ್ನು ಸಂಪೂರ್ಣವಾಗಿ ಕಳೆದುಕೊಂಡು, ಭಂಡಾರವನ್ನು ತುಂಬಿಸಲು ಪ್ರಜೆಗಳನ್ನು ಸುಲಿಗೆ ಮಾಡಲಾರಂಭಿಸಿದನು. ತನ್ನ ಜಟ್ಟಿಗಳನ್ನು ಕಳುಹಿಸಿ, ಊರಿನ ಜನರ ದ್ರವ್ಯಗಳನ್ನು ಬಲಾತ್ಕಾರದಿಂದ ತರಿಸಿಕೊಂಡನು. ಇಷ್ಟು ಮಾತ್ರವಲ್ಲದೆ ಕೇರಳದ ಮಾಂತ್ರಿಕರನ್ನು ಕರೆಸಿ, ದೇವಿಯ ಆಲಯದ ಕ್ಷೇತ್ರ ರಕ್ಷಕರಾಗಿದ್ದ ರಕ್ತೇಶ್ವರಿ ಮತ್ತು ಧೂಮಾವತಿಯವರನ್ನು ಸ್ತಂಭನಗೊಳಿಸಿ, ದೇವರ ಸಾನ್ನಿಧ್ಯವನ್ನೂ ಕುಗ್ಗಿಸಿ ದೇವಾಲಯದಲ್ಲಿದ್ದ ವಿಪುಲ ಸಂಪತ್ತನ್ನು ದೋಚಿಸಿದನು. ಶ್ರೀದೇವಿ ವಿಗ್ರಹದ ಮುಖವನ್ನು ಪೂರ್ವಾಭಿಮುಖ ಮಾಡಿದನು. ಆದರೆ ಇಂತಹ ನೀಚ ಕಾರ್ಯ ಮಾಡಿದ ಮಾಂತ್ರಿಕರು ಕುರುಡರಾಗಿ ಬವಣೆಪಟ್ಟರಂತೆ.

ಕೊನೆಗೆ ವೀರವರ್ಮ ಮತ್ತು ಮುಂಗ್ಲಿದ್ವಯರನ್ನು ಕಾಂತಬಾರೆ ಬೂದ ಬಾರೆಯರು ವಧಿಸಿ ಜನರಿಗೆ ನೆಮ್ಮದಿ ನೀಡುತ್ತಾರೆ. ಕಾಂತಬಾರೆ ಬೂದಬಾರೆಯರಿಗೆ ದೇವಿಯೇ ಖಡ್ಗವೊಂದನ್ನು ನೀಡಿದಳೆಂದು ಐತಿಹ್ಯವಿದೆ. ಅದರ ಕುರುಹಾಗಿ, ದೇವಾಲಯದ ಪಶ್ಚಿಮದ ಬೈಲಿನಲ್ಲಿ ಕಲ್ಲೊಂದನ್ನು ನೆಡಲಾಗಿದೆ. ಕಾಂತಬಾರೆ ಬೂದಬಾರೆಯರ ಕಥೆಯನ್ನು ದೇವಾಲಯದ ಗೋಡೆಯೊಂದರಲ್ಲಿ ಬರೆಸಲಾಗಿದೆ. ಈ ದೇವಾಲಯವು ಎಲ್ಲ ಜಾತಿಯವರಿಗೂ ಸಮಾನವಾಗಿ ಆರಾಧ್ಯವಾಗಿದೆ. ಅನ್ಯಧರ್ಮೀಯರೂ ಇಲ್ಲಿ ಇಷ್ಟಾರ್ಥ ಸಿದ್ಧಿಯಾಗಿ ಹೂವಿನಪೂಜೆ ಇತ್ಯಾದಿ ಸೇವೆಗಳನ್ನು ಕೊಡುವುದಿದೆ.

ನವೀಕರಣಗಳು
ಈ ದೇವಾಲಯವು ಪ್ರಾಚೀನ ಕಾಲದಲ್ಲಿಯೇ ಆಗಮೋಕ್ತವಾಗಿ ರಚಿಸಲ್ಪಟ್ಟಿತ್ತು ಎನ್ನುವುದು 2006 ರಲ್ಲಿ ಗರ್ಭಗುಡಿಯನ್ನು ಬಿಚ್ಚಿ ಹೊಸದಾಗಿ ನಿರ್ಮಿಸಿದಾಗ ಅಡಿಯಲ್ಲಿ ಸಿಕ್ಕಿದ ನಿಧಿಕುಂಭ ಮತ್ತಿತರ ಷಢಾಧಾರಗಳಿಂದ ಖಚಿತವಾಗಿದೆ. ಕಾಲಾನುಕ್ರಮದಲ್ಲಿ ದೇವಾಲಯದ ವಿವಿಧ ಭಾಗಗಳು ನವೀಕರಣಗೊಂಡು ಇಂದಿನ ಭವ್ಯ ದೇವಾಲಯ ರೂಪುಗೊಂಡಿದೆ.

ಈಗ ಮತ್ತೆ ನವೀಕರಣಗೊಂಡು ಬ್ರಹ್ಮಕಲಶಾಭಿಷೇಕಕ್ಕೆ ಸಿದ್ಧವಾಗಿ ನಿಂತಿರುವ ಈ ಭವ್ಯ ದೇವಾಲಯದ ಒಳಸುತ್ತಿನಲ್ಲಿ ನೈಋತ್ಯ ಭಾಗದಲ್ಲಿ ಶ್ರೀ ಮಹಾಗಣಪತಿ ಗುಡಿಯಿದೆ. ಎದುರು ಭಾಗದ ಅಂಬೆಲದ ಬದಿಯಲ್ಲಿ ಧೂಮಾವತಿ, ವಾರಾಹಿ ಮತ್ತು ವ್ಯಾಘ್ರಚಾಮುಂಡಿ ದೈವಗಳ ಸಾನ್ನಿಧ್ಯವಿದೆ. ಹೊರಾಂಗಣದ ಆಗ್ನೇಯ ಭಾಗದಲ್ಲಿ ರಕ್ತೇಶ್ವರೀ ಸಾನ್ನಿಧ್ಯವಿದೆ. ನೈಋತ್ಯ ಭಾಗದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ, ಶ್ರೀಮನ್ಮಧ್ವಾಚಾರ್ಯರ ಮತ್ತು ವಾದಿರಾಜ ಸ್ವಾಮಿಗಳ (ಯತಿತ್ರಯರ) ಮಂದಿರವಿದೆ. ಈಶಾನ್ಯದಲ್ಲಿ ನವಗ್ರಹ ಮಂದಿರವಿದೆ. 2006ರಲ್ಲಿ ಹಳೆಯ ದೇವಾಲಯವನ್ನು ಸಮಗ್ರವಾಗಿ ಶಿಲಾಮಯವಾಗಿ ಪುನ:ರ್ ನಿರ್ಮಿಸಲಾಗಿದ್ದು ಈಗ ಮತ್ತೊಮ್ಮೆ ಉಪಯುಕ್ತವಾದ ಬದಲಾವಣೆಗಳನ್ನು ಮಾಡಿ ಹೊಸ ಕಟ್ಟಡಗಳನ್ನು ರಚಿಸಲಾಗಿದೆ.

ಇವುಗಳಲ್ಲಿ ಮುಖ್ಯವಾಗಿ ಯಾಗಶಾಲೆಯನ್ನು ಸಮಗ್ರವಾಗಿ ಮರುನಿರ್ಮಾಣ ಮಾಡಲಾಗಿದೆ. ಆಗ್ನೇಯ ಭಾಗದಲ್ಲಿ ನೆಲ ಅಂತಸ್ತಿನಲ್ಲಿ ಪಾಕಶಾಲೆ, ಕಛೇರಿ ಇತ್ಯಾದಿಗಳು, ಮೇಲಿನ ಎರಡು ಮಹಡಿಗಳಲ್ಲಿ ಭೋಜನ ಶಾಲೆಗಳುಳ್ಳ ನೂತನ ಕಟ್ಟಡ ರಚಿಸಲಾಗಿದೆ. ನೈಋತ್ಯದಲ್ಲಿ (ಗುರುಕುಲದ ಎದುರು) ಯಾತ್ರಿಕರ ವಿಶ್ರಾಂತಿಗೃಹ ನಿರ್ಮಿಸಲಾಗಿದೆ. ಹೊರಾಂಗಣಕ್ಕೆ ಹೊಸ ರೀತಿಯಲ್ಲಿ ಎತ್ತರವಾದ ಚಪ್ಪರ ಹಾಕಲಾಗಿದ್ದು, ಪಶ್ಚಿಮದ ಭಾರ್ಗವೀ ಸಭಾಗೃಹದ ಪಕ್ಕದಲ್ಲಿ ಒಂದು ಅತಿಥಿಗೃಹ ನಿರ್ಮಿಸಲಾಗಿದೆ. ಒಳಾಂಗಣಕ್ಕೆ ಹೊಸ ಹಾಸುಕಲ್ಲುಗಳನ್ನು ಹಾಕುವುದು, ಮುಖ್ಯ ಅಡಿಗೆ ಕೋಣೆ, ಕಟ್ಟೆಪೂಜೆಯ ಮಂಟಪ ಇತ್ಯಾದಿ ನವೀಕರಣ ಕಾರ್ಯಗಳಲ್ಲದೆ, ಗರ್ಭಗುಡಿಗೆ ತಾಗಿಕೊಂಡಂತಿದ್ದ ಅಲ್ಯೂಮಿನಿಯಮ್ ಚಪ್ಪರವನ್ನು ಗರ್ಭಗುಡಿಯ ಪಾವಿತ್ರ್ಯ ಮತ್ತು ಸಾನ್ನಿಧ್ಯಕ್ಕೆ ಪೂರಕವಾಗಿ ಗರ್ಭಗೃಹ ಸೂರ್ಯರಶ್ಮಿಗೆ ತೆರೆದುಕೊಳ್ಳುವಂತೆ ರಚಿಸಲಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಭ್ರಮದಲ್ಲಿ ಪಾಲುಗೊಳ್ಳಲು ಸ್ವಪರಿವಾರದೊಂದಿಗೆ ಆಗಮಿಸುವಂತೆ ದೇವಸ್ಥಾನ ಮಂಡಳಿಯು ತಿಳಿಸಿದೆ. 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal