Print

ಬದುಕು ಧರ್ಮವಾಗದೆ ಧರ್ಮವೇ ಬದುಕಾಗಬೇಕು - ಡಾ| ಸುನೀತಾ ಎಂ.ಶೆಟ್ಟಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.25, 2018: ಸಮಾಜ ಮತ್ತು ಮನೆಯಲ್ಲಿ ಸಾಮರಸ್ಯದ ಕೌಟುಂಬಿಕ ಬದುಕು ರೂಪಿಸಲು ಹೆಣ್ಣಿನಿಂದ ಮಾತ್ರ ಸಾಧ್ಯ. ಹೆಣ್ಣಾದವಳು ಬದುಕಿನ ಅನ್ಯಾಯ, ಕಷ್ಟನಷ್ಟಗಳನ್ನು ನುಂಗಿ ಸದಾ ಹಸನ್ಮುಖಿಯಾಗಿ ಸಮಾಜವನ್ನು ಎದುರಿಸುತ್ತಳೆ. ಆದರೆ ಪುರುಷರು ಹಾಗಲ್ಲ. ಹೆಣ್ಣಿನ ಭಾವನಾತ್ಮಕ ಜೀವನಕ್ಕೆ ಅಕ್ಷರದ ಅರಿವು ಬೇಕಾಗಿಲ್ಲ. ಬರೇ ವಿಶ್ವಾಸದ ಸಾಮರ್ಥ್ಯ ಅವಶ್ಯವಾಗಿದೆ. ಆದುದರಿಂದ ಗಂಡಿಗೆ ಹೆಣ್ಣಿನ ಮೇಲಿನ ವಿಶ್ವಾಸ ಬಲವಾದಗ ಬದುಕು ಸುಗಮವಾಗಬಲ್ಲದು. ಇದನ್ನು ಮಹಿಳೆ ಗಾಢವಾಗಿ ಅರ್ಥೈಸಿಕೊಂಡು ಮುನ್ನಡೆದಾಗ ಬದುಕು ಹಸನಾಗುವುದು. ಬದುಕು ಎಂದಿಗೂ ಧರ್ಮ ಆಗಿಸದೆ ಧರ್ಮವೇ ಬದುಕು ಆಗಿಸಬೇಕು. ಅದಕ್ಕಾಗಿ ಸ್ತ್ರೀಯರು ಅನ್ಯಾಯ ಆದಾಗ ಕಣ್ಣೀರು ಹಾಕದೆ ಅದನ್ನು ದಿಟ್ಟತನದಿಂದ ಪ್ರತಿಭಟಿಸಬೇಕು. ಹೋರಾಟ ಮಾಡಿ ಸತ್ಯಾಸತ್ಯತೆಗೆ ನ್ಯಾಯ ಗಿಟ್ಟಿಸಿ ಕೊಳ್ಳಬೇಕು. ಇದೇ ಸ್ತ್ರೀ ಸಬಲೀಕರಣ ಎಂದು ಮಹಾನಗರದಲ್ಲಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು.

 

 

 

 

ಕಳೆದ ಭಾನುವಾರ ಸಂಜೆ ಸಾಂತಾಕ್ರೂಜ್‍ನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗವು ಮುಂಬಯಿಯ ತುಳು ಕನ್ನಡಿಗರ ಸಂಸ್ಥೆಗಳ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಸದಸ್ಯೆಯರನ್ನೊಳಗೊಂಡು ಆಯೋಜಿಸಿದ್ದ ಸ್ತ್ರೀ ಸಬಲೀಕರಣ, ಸಂಸ್ಕೃತಿ, ಸವಾಲು ವಿಚಾರಿತ `ಒಲುಮೆ' ವಿನೂತನ ಕಾರ್ಯಕ್ರಮದಲ್ಲಿ `ವರ್ತಮಾನದ ಮಹಿಳೆ-ತಲ್ಲಣ-ಪರಿಹಾರ' ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಿ ಸುನೀತಾ ಶೆಟ್ಟಿ ಮಾತನಾಡಿದರು.

ಮಹಿಳೆಯರ ಕೂಡುವಿಕೆಯ ಇಂತಹ ಒಂದು ವೇದಿಕೆ ಮುಂಬಯಿಯಲ್ಲೇ ಪ್ರಥಮವಾಗಿದೆ. ಕಾರ್ಯಕ್ರಮ ಆಯೋಜಿಸಿದ ಬಿಲ್ಲವರ ಅಸೋಸಿಯೇಶನ್‍ನ ಮಹಿಳಾ ವಿಭಾಗ ಅಭಿನಂದನೀಯ. ನನ್ನ 62 ವರ್ಷಗಳ ಮುಂಬಯಿ ಜೀವನ ಸವಾಲುವಾಗಿಯೇ ಎದುರಿಸಿದ್ದೇನೆ. ನನ್ನ ಪತಿಯ ಸಹಯೋಗ ನನ್ನ ಸಬಲೀಕರಣಕ್ಕೆ ಪುಷ್ಠಿ ನೀಡಿದ್ದು ಸಮಸ್ಯೆಗಳನ್ನು ಮೆಟ್ಟಿನಿಲ್ಲುವಂತೆ ಮಾಡಿದ ಕಾರಣ ನಾನು ಇಷ್ಟೊಂದು ಮಟ್ಟಕ್ಕೆ ಬೆಳೆಯಲು ಪೂರಕವಾಗಿದೆ. ಅಂತೆಯೇ ಪುರುಷರು ಸ್ತ್ರೀಯರಲ್ಲಿ ಆತ್ಮವಿಶ್ವಾಸ ವೃದ್ಧಿಸಿಕೊಂಡಾಗ ಸಮಾನತೆಯ ಬದುಕು ರೂಪುಗೊಳ್ಳುವುದು. ಇದರಿಂದ ಸ್ತ್ರೀ ಸಬಲೀಕರಣ ಸಾಮರ್ಥ್ಯವುಳ್ಳದ್ದಾಗುವುದು ಎಂದೂ ಸುನೀತಾ ಶೆಟ್ಟಿ ತಿಳಿಸಿದರು.

ತೀಯಾ ಸಮಾಜ ಮುಂಬಯಿ ಸಂಸ್ಥೆಯ ದಿವಿಜಾ ಚಂದ್ರಶೇಖರ್, ಮೊಗವೀರ ಮಾಸಿಕದ ಮಾಜಿ ಸಂಪಾದಕಿ ಡಾ| ಜಿ.ಪಿ ಕುಸುಮ, ಪ್ರಶಸ್ತಿ ಪುರಸ್ಕೃತ ಕವಯತ್ರಿ ಅನಿತಾ ಪಿ.ಪೂಜಾರಿ ತಾಕೋಡೆ ಪಾಲ್ಗೊಂಡು ತಮ್ಮ ವಿಚಾರಗಳನ್ನು ಮಂಡಿಸಿದರು.

ದಿವಿಜಾ ಚಂದ್ರಶೇಖರ್ ವಿಚಾರ ಮಂಡಿಸಿಸ್ತ್ರೀಯರ ಮೈಮಾಟ, ಬಟ್ಟೆಬರೆ, ಸೌಂದರ್ಯದಿಂದ ಜೀವನ ಬದಲಾಯಿಸಲಾಗದು. ಅದು ಮನಸ್ಥೈರ್ಯ ಮತ್ತು ವಿಶ್ವಾಸದಿಂದ ಮಾತ್ರ ಎದುರಿಸಬಹುದು. ಕಾಲಕ್ಕೆ ತಕ್ಕಂತೆ ಬದಲಾದಾಗ ಮಾತ್ರ ಆಧುನಿಕತೆ ಎದುರಿಸಲು ಸಾಧ್ಯ. ನಾವೆಲ್ಲರೂ ಸಂಪ್ರದಾಯಸ್ಥವುಳ್ಳವರು ಆದುದರಿಂದ ಆಧುನಿಕತೆ ಜೊತೆಗೆ ಸಂಪ್ರದಾಯಗಳನ್ನು ರೂಢಿಸಿ ಮುನ್ನಡೆದಾಗ ನಮ್ಮ ಬದುಕು ನೆಮ್ಮದಿಯುತವಾಗುವುದು ಎಂದರು.

 

 

 

 

ತಲ್ಲಣ ಎನ್ನುವುದು ಭಯವಾಗಿದೆ. ಇದು ಎಲ್ಲಾ ವರ್ಗವನ್ನೂ, ಕ್ಷೇತ್ರವನ್ನೂ ಆವರಿಸಿದ್ದು ಭಯಮುಕ್ತ ಬದುಕಿಗೆ ನಾವು ಪಣತೊಡಬೇಕು. ಪುರುಷ ಸಮಾನವಾಗಿ ಬದುಕು ರೂಪಿಸುವ ಪ್ರಯತ್ನ ಮಾಡಿದಾಗಲೇ ಸ್ತ್ರೀಶಕ್ತ ಸಮಾಜ ನಿರ್ಮಾಣ ಸಾಧ್ಯವಾಗುವುದು ಎಂದು ಜಿ.ಪಿ ಕುಸುಮ ತಿಳಿಸಿದರು.

ಅನಿತಾ ಪೂಜಾರಿ ಬಣ್ಣದಲೋಕದ ಬದುಕಿನಲ್ಲಿ ಹೊಂದಾಣಿಕೆಯ ಜೀವನಕ್ಕೆ ಸ್ಪಂದಿಸಬೇಕು. ಅದಕ್ಕಾಗಿ ಜೀವನದಲ್ಲಿ ಮೊದಲಾಗಿ ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಬೇಕು. ಪುರುಷ ಪ್ರಧಾನ ಸಮಾಜ ಎಂದೆಣಿಸುವುದಕ್ಕಿಂತ ಸ್ತ್ರೀ ಸಮಾನ ಸಮಾಜ ಕಟ್ಟುವ ಕನಸನ್ನು ನನಸಾಗಿಸುವ ಪ್ರಯತ್ನ ಮಾಡುವ ಅಗತ್ಯ ಪ್ರತೀಯೊಬ್ಬ ಮಹಿಳೆಯದ್ದಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಬಳಿಕ ನಡೆಸಲ್ಪಟ್ಟ `ಒಲುಮೆ' ವಿನೂತನ ಕಾರ್ಯಕ್ರಮಕ್ಕೆ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ್ ಡಿ.ಕೋಟ್ಯಾ ನ್ ಹಿಂಗಾರ ಅರಳಿಸಿ ಕಳಶೆಯಲ್ಲಿರಿಸಿ ವಿಧ್ಯುಕ್ತವಾಗಿ ಒಲುಮೆ'ಗೆ ಚಾಲನೆಯನ್ನಿತ್ತರು. ಈ ಸಂದರ್ಭದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಬಿಎಸ್‍ಕೆಬಿ ಅಸೋಸಿಯೇಶನ್‍ನ ಮಹಿಳಾ ಕಾರ್ಯಾಧ್ಯಕ್ಷೆ ಪ್ರೇಮ ಎಸ್.ರಾವ್, ಗಾಣಿಗ ಸಮಾಜ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ತಾರಾ ಎನ್.ಭಟ್ಕಳ್, ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಸರೋಜಿನಿ ಶೆಟ್ಟಿಗಾರ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮಹಿಳಾ ಕಾರ್ಯಾಧ್ಯಕ್ಷೆ ರಾಜೀವಿ ಕಾಂಚನ್, ದೇವಾಡಿಗ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಜಯಂತಿ ಆರ್.ಮೊೈಲಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ, ಕುಲಾಲ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಮಮತಾ ಎಸ್.ಗುಜರನ್, ತೀಯಾ ಸಮಾಜ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಲತಾ ಡಿ.ಉಳ್ಳಾಲ್, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬ ಯಿ ಮಹಿಳಾ ಕಾರ್ಯಾಧ್ಯಕ್ಷೆ ಶುಭಾ ಎಸ್.ಆಚಾರ್ಯ, ರಜಕ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಸರೋಜಿನಿ ಡಿ.ಕುಂದರ್, ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಮಹಿಳಾ ಕಾರ್ಯಾಧ್ಯಕ್ಷೆ ಶಾರದಾ ಶ್ಯಾಮ ಶೆಟ್ಟಿ, ಸಾಫಲ್ಯ ಸೇವಾ ಸಂಘ ಮುಂಬಯಿ ಮಹಿಳಾ ಕಾರ್ಯಾಧ್ಯಕ್ಷೆ ಶೋಭಾ ವಿ.ಬಂಗೇರ ಉಪಸ್ಥಿತರಿದ್ದರು.

ಅಸೋಸಿಯೇಶನ್‍ನ ಪದಾಧಿಕಾರಿಗಳನೇಕರು ಉಪಸ್ಥಿತರಿದ್ದು ಅಸೋಸಿಯೇಶನ್‍ನ ಗೌ| ಪ್ರ| ಧರ್ಮಪಾಲ ಜಿ.ಅಂಚನ್ ಪ್ರಸ್ತಾವನೆಗೈದರು. ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಸ್ವಾಗತಿಸಿ ಅತಿಥಿಗಳಿಗೆ ಸ್ಮರಣಿಕೆಗಳನ್ನುತ್ತು ಸತ್ಕರಿಸಿ ಗೌರವಿಸಿದರು. ಅಸೋಸಿಯೇಶನ್‍ನ ಗೌ| ಜೊತೆ ಕಾರ್ಯದರ್ಶಿ ಆಶಾಲತಾ ಎಸ್.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಅನಿತಾ ಪಿ.ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿವಿಧ ಸಂಸ್ಥೆಗಳ ಮಹಿಳಾ ಸದಸ್ಯೆಯರ ತಂಡಗಳು ವೈವಿಧ್ಯಮಯ ನೃತ್ಯಾವಳಿ, ಸಂಗೀತ ಯೋಗ, ಜಾನಪದ ಗಾಯನ ಮತ್ತಿತರ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಮಹಿಳಾ ವಿಭಾಗದ ಗೌ| ಪ್ರ| ಕಾರ್ಯದರ್ಶಿ ಸುಮಿತ್ರಾ ಎಸ್.ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.