About Us       Contact

ಲೇಖನ : ಧನಂಜಯ ಗುರ್ಪುರ

ಗುರುಪುರ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಾಯಿ ಬಿಟ್ಟಿತೆಂದರೆ ರೈತರ ಉದ್ಧಾರದ ಮಾತೆತ್ತುತ್ತವೆ. ಸರ್ಕಾರಗಳು ರೈತರಿಗೆ ಪ್ರಕಟಿಸಿರುವ ನೀತಿಗಳು ಸಾಲುಸಾಲಾಗಿವೆ. ಅವುಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೊಂಡಿವೆ ಅಥವಾ ಯಾವ ಭಾಗದ ರೈತರು ಫಲಾನುಭವಿಗಳಾಗಿದ್ದಾರೆಂಬ ಅಂಕಿಅಂಶ ಸಂಗ್ರಹಿಸಿದರೆ ಎಲ್ಲೂ ಫಲಪ್ರದ ಉತ್ತರ ಸಿಗಲಿಕ್ಕಿಲ್ಲ. ಒಂಡೆದೆ ರೈತರ ಉದ್ಧಾರದ ಮಾತನ್ನಾಡುವ ಅಥವಾ ಯೋಜನೆ ಪ್ರಕಟಿಸುವ ಸರ್ಕಾರಗಳು ಕೈಗಾರಿಕೋದ್ಯಮಕ್ಕೆ ಆದ್ಯತೆ ನೀಡುತ್ತಲೇ, ಉದ್ಯಮಿಗಳಿಗೆ ಕೃಷಿ ಭೂಮಿ ಒದಗಿಸುವ ದುಸ್ಸಾಹಸಕ್ಕಿಳಿದಿವೆ. ಪರಿಣಾಮ, ಈಗ ಹಳ್ಳಿಗಾಡಿನ ಕೃಷಿಭೂಮಿಯಲ್ಲೂ ಕಾಂಕ್ರೀಟು ಕಟ್ಟಡಗಳು ತಲೆ ಎತ್ತಿವೆ. `ಗೈಲ್' ಕಂಪೆನಿಯ ಗ್ಯಾಸ್ ಪೈಪ್‍ಲೈನ್ ಇಂತಹದೊಂದು ಕೈಗಾರಿಕೋದ್ಯಮದ ಭಾಗವಾಗಿದೆ.


ಹಳ್ಳಿಯಲ್ಲಿ ಕೃಷಿಭೂಮಿ ಸ್ವಾಧೀನಪಡಿಸಿಕೊಂಡು ಕಾರ್ಯಗತಗೊಳ್ಳುತ್ತಿರುವ ಯೋಜನೆಗೆ ಕೆಲವೆಡೆ ಕಂಡು ಬಂದಿರುವ ರೈತರ ವಿರೋಧವನ್ನೂ ಲೆಕ್ಕಿಸದೆ ಯೋಜನೆ ಸಾಗಿದೆ. ಭತ್ತ ಬೆಳೆಯುವ ಗದ್ದೆ, ಕಂಗುತೆಂಗಿನ ತೋಟ, ಫಲವತ್ತಾದ ಗೇರು ತೋಪು ಹಾಗೂ ಫಲವಸ್ತುಗಳ ಮರಮಟ್ಟಿನ ಭಾಗದಲ್ಲಿ ಸಾಗುತ್ತಿರುವ ಈ ಯೋಜನೆಯಡಿ ಸಾವಿರಾರು ಮರಗಳು ಧರಾಶಾಯಿಯಾಗಿವೆ.


ಮರವೂರು, ಗುರುಪುರ, ಅಮ್ಮುಂಜೆ, ಕಲಾಯಿ, ಅಬ್ಬೆಟ್ಟು, ಮೇರೆಮಜಲು, ಫರಂಗಿಪೇಟೆ, ಪಾವೂರಾಗಿ ಸಾಗುವ ಕೊಚ್ಚಿ ಮೂಲದ ಕಂಪೆನಿಯ ಈ ಗ್ಯಾಸ್ ಪೈಪ್‍ಲೈನಿಗಾಗಿ ಪ್ರಸ್ತುತ ಒಂದರ ಬದಲು ಮೂರು ಕೊಳವೆ ಅಳವಡಿಸಬಹುದಾದಷ್ಟು ಜಾಗ ಸ್ವಾಧೀನಪಡಿಸಿಕೊಂಡು ಸಮತಟ್ಟು ಮಾಡಲಾಗುತ್ತಿದೆ. ಕಲಾಯಿ, ಅಮ್ಮುಂಜೆಯಲ್ಲಿ ಕೊಳವೆ ಅಳವಡಿಸುವ ಕಾಮಗಾರಿ ತ್ವರಿತಗತಿಯಲ್ಲಿ ಮುಂದುವರಿದಿದೆ. ಇಲ್ಲೆಲ್ಲ ನೂರಾರು ತೆಂಗಿನ ಮರ ಕಡಿದು ಹಾಕಲಾಗಿದ್ದು, ಕೃಷಿಕರಿಗೆ ಜುಜುಬಿ ಪರಿಹಾರ ಸಿಕ್ಕಿದೆ.


ಇನ್ನೂ ವಿಶೇಷವೆಂದರೆ, ಮರಮಟ್ಟು ಜಾಗ ಬಿಟ್ಟು ಪಕ್ಕದ ಖಾಲಿ ಜಾಗದಲ್ಲಿ ಕೊಳವೆ ಅಳವಡಿಸಲು ಅವಕಾಶವಿದ್ದರೂ ಕಂಪೆನಿಯು ನೇರವಾಗಿ ತೋಟಗಳ ಭಾಗದಲ್ಲೇ ಕಾಮಗಾರಿಗೆ ಆಸಕ್ತವಾಗಿದೆ. ಅನ್ಯ ರಾಜ್ಯಗಳಲ್ಲಿ ಎಲ್ಲೂ ಇಂತಹ ಯೋಜನೆಗಳು ಕೃಷಿ ಪ್ರದೇಶದಲ್ಲಿ ನಡೆದಿಲ್ಲ. ಹಳ್ಳಿ ಪ್ರದೇಶ ಕೃಷಿಭೂಮಿಯಲ್ಲಿ ಈಗಾಗಲೇ ನಾಲ್ಕಕ್ಕೂ ಹೆಚ್ಚು ಕೊಳವೆಗಳು ಹಾದು ಹೋಗಿವೆ !


``ಒಂದು ತೋಟ ಮಾಡಬೇಕಿದ್ದರೆ ಎಷ್ಟು ಕಷ್ಟವಿದೆ ಎಂಬುದು ರೈತನಿಗೆ ಮಾತ್ರ ಗೊತ್ತು. ಕೃಷಿಭೂಮಿಯಲ್ಲಿ ಸಾಗುವ ಗ್ಯಾಸ್ ಪೈಪ್‍ಲೈನ್ ಯೋಜನೆಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಯೋಜನೆಯ ಪ್ರತೀಕೂಲ ಪರಿಸ್ಥಿತಿ ಮಳೆಗಾಲದಲ್ಲಿ ಕಂಡು ಬರಲಿದೆ. ತೋಡುಗಳು ಮತ್ತು ಕೆರೆಗಳು ನಾಶವಾದರೆ ಏನಾಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ರೈತರು ಸಾಕಷ್ಟು ಕಷ್ಟ ಎದುರಿಸಬೇಕಾಗುತ್ತದೆ. ಒಂದು ವಿಷ ಸರ್ಪ ಮನೆಯೊಳಗೆ ಪ್ರವೇಶಿಸಿದರೆ ಏನಾಗುತ್ತದೋ ಅದತಂತೆ ಗೈಲ್ ಗ್ಯಾಸ್ ಪೈಪ್‍ಲೈನ್ ಯೋಜನೆಯಾಗಿದೆ'' ಎಂದು ಕಲಾಯಿ ಕೃಷಿಕ ಜೀವರಾಜ ಶೆಟ್ಟಿ ಹೇಳುತ್ತಾರೆ.


``ಅಭಿವೃದ್ಧಿಗೆ ನಾವು ವಿರೋಧಿಗಳಲ್ಲ. ಆದರೆ ಬಹುತೇಕ ಎಲ್ಲ ಯೋಜನೆಗಳಿಗೆ ಕೃಷಿಭೂಮಿಯನ್ನೇ ಆಯ್ಕೆ ಮಾಡಿದರೆ ರೈತನ ಭವಿಷ್ಯ ಏನಾಗಬಹುದು ? ಗುಡ್ಡಗಾಡಿನ ಮೂಲಕವೂ ಇಂತಹ ಯೋಜನೆ ಕೈಗೊಳ್ಳಬಹುದಲ್ಲ ?'' ಎಂದವರು ಪ್ರಶ್ನಿಸಿದ್ದಾರೆ.


``ವಸತಿ ಪ್ರದೇಶದಲ್ಲಿ ಸಾಗಿರುವ ಗ್ಯಾಸ್ ಕೊಳೆವೆಯಿಂದ ಏನೂ ಆಗದು ಎಂದು ಕಂಪೆನಿ ಹೇಳುತ್ತದೆ. ಆದರೆ ಇತರೆಡೆ ನಡೆದಿರುವ ಗ್ಯಾಸ್ ಕೊಳವೆ ದುರಂತಗಳು ನಮ್ಮ ಕಣ್ಣು ಮುಂದೆ ಬರುತ್ತವೆ. ಆದ್ದರಿಂದ ಇಲ್ಲಿನವರೂ ಭವಿಷ್ಯದಲ್ಲಿ ಸದಾ ಜೀವಭಯದಿಂದ ಜೀವನ ಸಾಗಿಸಬೇಕಿದೆ'' ಎಂದು ಅಮ್ಮುಂಜೆಯ ವಾಹನ ಚಾಲಕ ಖಾದ್ರಿ ಭೀತಿ ವ್ಯಕ್ತಪಡಿಸಿದ್ದಾರೆ. ಗುಂಡಿಲ ಅಜಿತ್ ಶೆಟ್ಟಿ, ಉಳಿಪಾಡಿಗುತ್ತು ಜಗನ್ನಾಥ ಶೆಟ್ಟಿಯವರ ತೋಟವೂ ನಾಶವಾಗಿದೆ.


ಮಂಗಳೂರು ತಾಲೂಕಿನ ಮರವೂರು, ಅದ್ಯಪಾಡಿ, ಕಂದಾವರ, ಮೂಳೂರು, ಅಡ್ಡೂರು, ಮಲ್ಲೂರು, ಕಂದಾವರ, ಅರ್ಕುಳ, ಪಾವೂರು, ಕೆಂಜಾರು, ತೋಕೂರು ಮತ್ತು ಬಂಟ್ವಾಳ ತಾಲೂಕಿನ ಮೇರೆಮಜಲು, ಅಮ್ಮುಂಜೆ, ಪಜೀರು, ಕೈರಂಗಳ, ಬಾಳೆಪುಣಿ, ಕುರ್ನಾಡು ಗ್ರಾಮಗಳಲ್ಲಿ ಗೈಲ್ ಪೈಪ್‍ಲೈನ್ ಸಾಗುತ್ತದೆ. ಕಂಪೆನಿಯು ಈಗ 20 ಮೀಟರ್ ಅಗಲಕ್ಕೆ ಜಾಗ ಸಮತಟ್ಟುಗೊಳಿಸುತ್ತಿದೆ. ಕೆಲವೆಡೆ ತೋಟದ ಮಧ್ಯೆ ಕೊಳವೆ ಹಾದು ಹೋಗುವುದರಿಂದ ಇಬ್ಭಾಗವಾದ ತೋಟಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್‍ಗೆ(ಎಂಸಿಎಫ್) ನಫ್ತಾ ಬಳಕೆಯ ವಿದ್ಯುತ್ ಬದಲಿಗೆ ಗ್ಯಾಸ್ ಬಳಕೆಯ ವಿದ್ಯುತ್ತಿಗಾಗಿ ಕೊಚ್ಚಿಯ ಗೈಲ್ ಕಂಪೆನಿಯು ಈ ಯೋಜನೆ ಕಾರ್ಯಗತಗೊಳಿಸುತ್ತಿದೆ.


ಏನೇ ಇದ್ದಾಗಲೂ ಭವಿಷ್ಯದಲ್ಲಿ ಈ ಯೋಜನೆ ವಸತಿ ಪ್ರದೇಶ, ಕೃಷಿಭೂಮಿಗೆ ದೊಡ್ಡ ಸಂಚಕಾರವಾಗಲಿದೆ. ಭವಿಷ್ಯದ ಬಗ್ಗೆ ಹೆಚ್ಚೇನು ತಿಳಿಯದ ರೈತಾಪಿ ವರ್ಗ ಒಂದಷ್ಟು ಜಾಗ ಹೋದರೇನಂತೆ ಎಂದು ಸಮಜಾಯಿಸಿ ನೀಡಿದ್ದೂ ಉಂಟು. ಭವಿಷ್ಯದ ದಿನಗಳು ಉತ್ತಮವಾಗಿರಬೇಕಿದ್ದರೆ ಕೃಷಿಭೂಮಿ ಉಳಿಯಬೇಕಲ್ಲವೇ ?

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal