About Us       Contact

(ಶ್ಯಾಮಲಾ ಮಾಧವ,ಮುಂಬಯಿ)

Oct 24 : ಕ್ಷಿಪ್ರಗತಿಯಲ್ಲಿ ಗಗನಗಾಮಿಯಾಗಿ ಬೆಳೆಯುತ್ತಿರುವ ನನ್ನ ಮಂಗಳೂರಿನಲ್ಲಿ ಹಳೆಯ ಚೆಲುವಿನ ಮನೆಗಳನ್ನೂ, ಹೂತೋಟಗಳನ್ನೂ ಇನ್ನೂ ಉಳಿಸಿ ಬೆಳೆಸುತ್ತಿರುವವರಲ್ಲಿ ಕರಂಗಲ್ಪಾಡಿಯ ಲಿಲ್ಲಿ ಪಿಂಟೋ ಒಬ್ಬರು. ಹಳೆಯ ಮಂಗಳೂರು ಹೆಂಚಿನ, ಕೆಂಪು ಕಾವೆ ನೆಲದ ಪುಟ್ಟ ಮನೆಯನ್ನು ಆಧುನೀಕರಣ ಗೊಳಿಸಲು ಮನವೊಪ್ಪದೆ ಹಾಗೇ ಉಳಿಸಿಕೊಂಡಿರುವವರು, ಅವರ ಪತಿ, ಪೈಲೆಟ್ ಇನ್ಸ್ಟ್ರಕ್ಟರ್, ಕ್ಯಾಪ್ಟನ್ ಅಲೋಶಿಯಸ್ ಪಿಂಟೋ. ಮನೆಯ ಸುತ್ತಮುತ್ತ ನಂದನವನದಂತಹ ಚೆಲುವಾದ, ಒಪ್ಪವಾದ ಅಪರೂಪದ ಪುಷ್ಪಕಾಶಿ ಬೆಳೆಸಿರುವವರು, ಮನೆಯೊಡತಿ ಲಿಲ್ಲಿ ಪಿಂಟೋ.

ಕರಂಗಲ್ಪಾಡಿಯಲ್ಲಿ ತೆಕ್ಕುಂಜೆ ಗೋಪಾಲಕೃಷ್ಣ ಭಟ್ಟರ ಮನೆ ಪಕ್ಕದ ನಮ್ಮ ಹಳೆ ವಾಸ ಪ್ರದೇಶದ ಮೇಲಿನ ಪ್ರೀತಿಯಿಂದ ನೀಡಿದ ಭೇಟಿಯಲ್ಲಿ ನಮಗೆದುರಾದುದು, ಆ ಪ್ರದೇಶದೊಡತಿಯಾದ ಲಿಲ್ಲಿ ಪಿಂಟೋ ಅವರ ಕೈಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅರಳಿದ ಭವ್ಯ ಹೂತೋಟ.


(ಶ್ಯಾಮಲಾ ಮಾಧವ,ಮುಂಬಯಿ)

 

ಈ ಹೂ ಹಸಿರಿನಿಂದ ತಮ್ಮ ಮನೆಯಂಗಣವನ್ನು ಸೊಗಯಿಸುವುದಷ್ಟೇ ಅಲ್ಲ, ತೋಟಗಾರಿಕೆಯಲ್ಲಿ ಅಭಿರುಚಿಯಿರುವವರಿಗೆಲ್ಲ ತಮ್ಮ ಸಸ್ಯಕಾಶಿಯ ಅನಘ್ರ್ಯ ನಿಧಿಯನ್ನು ಹಂಚಿಕೊಟ್ಟು ಕೃತಕೃತ್ಯರಾಗುವವರು, ಲಿಲ್ಲಿ ಪಿಂಟೋ. ಅವರ ತೋಟದಲ್ಲಿ ನಮ್ಮನ್ನು ಸೆಳೆಯುವುದು ಹೂಗಿಡಗಳ ಸಮೃಧ್ಧಿಯಷ್ಟೇ ಅಲ್ಲ, ನೆಲದ ಮಣ್ಣಿನಲ್ಲಿ, ಕುಂಡಗಳಲ್ಲಿ, ಮನೆಗೋಡೆಯ ಮೇಲೆ, ಅಟ್ಟಣಿಗೆಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ, ಕಲಾತ್ಮಕವಾಗಿ, ಅದ್ಭುತವಾಗಿ ಜೋಡಿಸಿಟ್ಟ ಸಸ್ಯವಿನ್ಯಾಸಗಳು!

ವಿವಿಧ ವರ್ಣಗಳ, ಪ್ರಭೇದಗಳ ಆಂಥೋರಿಯಮ್ಸ್, ಬೋಗನ್‍ವಿಲ್ಲಾಗಳು:

ಆರ್ಕಿಡ್ಸ್, ಗುಲಾಬಿಗಳು, ಆಗ್ಲೋನೀಮಾ, ಮಲ್ಲಿಗೆ, ಎಡೆನಿಯಮ್ಸ್, ಪೆಂಟಸ್, ಪಿಟೋನಿಯಾ, ವಿವಿಧ ವರ್ಣಗಳ ತಾವರೆಗಳು, ಟೇಬ್‍ಲ್ ರೋಸ್, ದಾಸವಾಳ, ವಿವಿಧ ಮನಿಪ್ಲಾಂಟ್‍ಗಳು, ಫರ್ನ್‍ಗಳು, ದ್ರಾಕ್ಷಿ ಬಳ್ಳಿಗಳು, ಹಣ್ಣುಗಳ ಗಿಡಮರಗಳು ಇಲ್ಲಿ ರಾರಾಜಿಸುತ್ತವೆ. ವಿವಿಧ ಹಂತದ ಸ್ಟ್ಯಾಂಡ್‍ಗಳಲ್ಲಿ ಆಂಥೋರಿಯಂ ಗಳು ನಳನಳಿಸುತ್ತಿದ್ದರೆ, ಗೋಡೆಗಳಲ್ಲಿ ಸಾಲಾಗಿ ವಿನ್ಯಾಸಗೊಂಡ ಶಂಖಾಕೃತಿಯ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಮೋಹಕ ಆರ್ಕಿಡ್‍ಗಳು ಕಣ್ಸೆಳೆಯುತ್ತವೆ. ವಿವಿಧ ವರ್ಣಗಳ ದಾಸವಾಳಗಳ ಸೊಗಸಂತೂ ಮನಮೋಹಕ! ಹೊರಮೈಯೆಲ್ಲ ಶುಭ್ರ, ಸ್ವಚ್ಛವಾಗಿರುವ ಕುಂಡಗಳು, ಅಷ್ಟೇ ಸ್ವಚ್ಛವಾದ ಅಂಗಣ, ಹಿತ್ತಿಲು, ಮನೆ, ಮನೆಯೊಡತಿಯ ಸ್ವಭಾವ ಮತ್ತುಹವ್ಯಾಸಕ್ಕೆ, ಸದಭಿರುಚಿಗೆ ಹಿಡಿದ ಕನ್ನಡಿ! ನಾವು ಮೆಚ್ಚಿದ ಗಿಡಗಳನ್ನು ತಾನೇ ಕೈಯಾರೆ ಕತ್ತರಿಸಿ ಕೊಡುವ ಹೃದಯ ವೈಶಾಲ್ಯತೆ!

ಸಮಾನ ಆಸಕ್ತಿಯಿರುವ ಸಸ್ಯ, ಪುಷ್ಪ ಪ್ರೇಮಿಗಳೊಡನೆ ಸೇರಿಕೊಂಡು "ಸಿರಿತೋಟ" ಹಾಗೂ "ಹಸಿರು ಬುಟ್ಟಿ" ಎಂಬ ಹವ್ಯಾಸೀ ಗುಂಪುಗಳನ್ನು ಕಟ್ಟಿಕೊಂಡಿದ್ದಾರೆ, ಲಿಲ್ಲಿ ಪಿಂಟೋ. ತಾವಾಗಿಯೇ ಬಂದು ಕೇಳಲು ಸಂಕೋಚ ಪಡುವ ಆಸಕ್ತರಿಗಾಗಿ, ಕಟ್ಟಿಂಗ್ ಸಮಯದಲ್ಲಿ ಕಡಿದು ಬಿಸುಡುವ ಗೆಲ್ಲುಗಳನ್ನು ಪ್ಲಾಸ್ಟಿಕ್ ಕುಂಡಗಳಲ್ಲಿ ನೆಟ್ಟು, ಅತಿ ಕಡಿಮೆ ಬೆಲೆಗೆ ಮಾರಾಟಕ್ಕೆ ಇಡುತ್ತಾರೆ. ಈ ವರ್ಷ, ಅಕ್ಟೋಬರ್ ಏಳರಂದು ಅವರಲ್ಲಿ ಈ ಪ್ರದರ್ಶನ ಹಾಗೂ ಮಾರಾಟವಿತ್ತು. ಸಮಾನಾಭಿರುಚಿಯ ಮಹಿಳೆಯರು ಸೇರಿ ಫನ್ರ್ಸ್‍ವಿಲ್ಲಾದ ಹಿತ್ತಿಲಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಸಜ್ಜಾಗಿ ಬೆಳಿಗ್ಗೆ ಎಂಟೂವರೆಯಿಂದ ಮಧ್ಯಾಹ್ನ ಒಂದರ ವರೆಗೆ ನಂದನವನವನ್ನೇ ಸೃಷ್ಟಿಸಿದ ಅದ್ಭುತ ಕಾರ್ಯಾಗಾರವದು!

ಫೇಸ್‍ಬುಕ್ ಹಾಗೂ ವಾಟ್ಸ್‍ಆಪ್ ಗ್ರೂಪ್‍ನಲ್ಲೂ ಆಸಕ್ತರು "ಸಿರಿತೋಟ" ಮತ್ತು "ಹಸಿರು ಬುಟ್ಟಿ" ಸೈಟ್‍ಗೆ ಭೇಟಿ ನೀಡ ಬಹುದು. ವಿಳಾಸ: ಲಿಲ್ಲಿ ಪಿಂಟೋ, ಫನ್ರ್ಸ್ ವಿಲ್ಲಾ, ಸಿ.ಜಿ ಕಾಮತ್ ರೋಡ್, ಕರಂಗಲ್ಪಾಡಿ, ಮಂಗಳೂರು-575003, ಮೊಬೈಲ್ : 8762365355.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal