Print

(ಶ್ಯಾಮಲಾ ಮಾಧವ, ಮುಂಬಯಿ)

Oct 19, 2018 : ಬಿ.ಎ.ಮೊಹಿದೀನ್ ಅವರ "ನನ್ನೊಳಗಿನ ನಾನು", ಪ್ರೀತಿಯ ಆಗ್ರಹಕ್ಕೆ ಮಣಿದು ಅವರು ತೆರೆದಿಟ್ಟ ತನ್ನ ಬಾಳಪುಟಗಳಷ್ಟೇ ಅಲ್ಲ; ಕಳೆದ ಶತಮಾನದ ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯದ ಸಾಮಾಜಿಕ ಜೀವನದ ಅತ್ಯಾಕರ್ಷಕ ಚಿತ್ರಣದೊಂದಿಗೆ, ಸಾಮಾಜಿಕ ಮೌಲ್ಯಗಳಿಗಾಗಿ ತುಡಿವ ಜೀವವೊಂದು ನಡೆದ ರಾಜಕೀಯ ನಡೆಯ, ಸಮಾಜೋ ಸಾಂಸ್ಕøತಿಕ ಪರಿವರ್ತನೆಯ ಹಾದಿಯ ಅಮೋಘ ಚಿತ್ರಣ! ಕೈಗೆತ್ತಿಕೊಂಡರೆ ಕೆಳಗಿಡಲಾಗದಂತೆ ನಮ್ಮನ್ನು ಹಿಡಿದಿಡುವ ಸಾರ್ಥಕ

ಬಾಳಿನ ಅಮೂಲ್ಯ ಕಥನ!

ಬಾಲ್ಯದ ಆಟಗಳು, ಯಕ್ಷಗಾನದ ಹುಚ್ಚು, ಕೋಲದ ಭಯ ಜಾತಿಮತವೆಂದಿರದೆ ಎಲ್ಲರೂ ಸೇರಿ ಪರಸ್ಪರರ ಮನೆಗಳಿಗೆ ಮುಳಿಹುಲ್ಲು ಹೊದಿಸುವ ಅಂದಿನ ಕಾಯಕ, ಆ ದಿನಗಳಲ್ಲಿ ತಿಂಗಳಕಾಲ ಅವ್ಯಾಹತವಾಗಿ ಸುರಿಯುತ್ತಿದ್ದ ಮಳೆ, ಮೀನುಬೇಟೆ, ಮದರಸಾದ ಧಾರ್ಮಿಕ ವಿದ್ಯಾಭ್ಯಾಸ, ಅಲ್ಲೇ ತೆರೆದ ಶಾಲೆ, ಮನೆಯಲ್ಲಿ ಹಸುಗಳ ಮೇಲಿನ ಅಮ್ಮನ ಪ್ರೀತಿ ವಾತ್ಸಲ್ಯ, ತುಳುನಾಡಿನ ರೈತರ ಪುದ್ದರ್ ಊಟ, ಹೈಸ್ಕೂಲ್, ಕಾಲೇಜ್ ದಿನಗಳು, ಗೆಳೆಯರು, ಪ್ರಭಾವ ಬೀರಿದ ಗುರುಗಳು ಹಾಗೂ ಮುಂದಿನ ರಾಜಕೀಯ ಪ್ರವೇಶ, ನಡೆ ಹೀಗೆ ಎಲ್ಲವನ್ನೂ ಚಿತ್ರವತ್ತಾಗಿ ತೆರೆದಿಡುವ ಸುರಮ್ಯ ಕಥನ! ಬಾಲ್ಯದ ವಿವರದಲ್ಲಿ ಜಿನ್ನಾರ ಹೆಸರಿನೊಂದಿಗೆ ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫರ್ ಖಾನರ ಬದಲಿಗೆ ಅಬುಲ್ ಕಲಾಂ ಅeóÁದ್ ಹೆಸರು ನುಸುಳಿರುವುದೊಂದು ಪ್ರಮಾದವಷ್ಟೇ.


B.M Mohideen A

 


Shyamala Madhav

 

ಹಿಂದಿನ ಕಾಲದ ಹದಿನೈದು ದಿನಳ ಕಾಲ ನಡೆವ ಮದುವೆಯ ಸುವಿಸ್ತಾರವಾದ, ಸವಿವರವಾದ ಬಣ್ಣನೆ ಅಂತೂ ಮನ ಸೆಳೆಯುವಂತಿದೆ. ವರ, ವಧು ಅನ್ವೇಷಣೆಯಿಂದ ಆರಂಭವಾಗುವ ಸಂಪ್ರದಾಯಗಳು, ವರದಕ್ಷಿಣೆ ವಧುದಕ್ಷಿಣೆಯಾಗಿ ಪರಿವರ್ತಿತವಾದ ವಿವರಗಳು, ದಿಬ್ಬಣದ ವರ್ಣನೆ, ಚಪ್ಪರ ಸಿಂಗಾರ, ಊಟೋಪಚಾರಗಳು, ಆಭರಣಗಳ ತಯಾರಿಯ ವಿವರಗಳು, ಮಾನಾಪಮಾನಗಳು, ಮದುವೆಯ ಸಮಾರಂಭದ ಹಾಡುಗಳು, ಮುಂಜಿಯ ವಿವರಗಳು ಮತ್ತೆ ಸ್ವತಃ ತಮ್ಮ ಮದುವೆಯ ಚಿತ್ರಣ ಚಿತ್ತಾಪಹಾರಕವಾಗಿದೆ.

ರಾಜಕೀಯಕ್ಕೆ ಪದಾರ್ಪಣೆ ಮಾಡಿ ತಾವು ನಡೆದ ದಾರಿ, ತೆರೆದ ಪುಸ್ತಕದಂತಹ ತಮ್ಮ ರಾಜಕೀಯ ಬದುಕು, ದೂರಗಾಮಿ ದೃಷ್ಟಿಕೋನದ ತಮ್ಮ ರಾಜಕೀಯ ತೀರ್ಮಾನಗಳು, ಸಾಮೂಹಿಕ ಅಭಿವೃಧ್ಧಿಯೇ ಚಿಂತನೆಯಾಗಿ ತಾನು ಕೈಕೊಂಡ ರಾಜಕೀಯ ನಿರ್ಧಾರಗಳು, ಪಕ್ಷಾತೀತ, ಜಾತ್ಯತೀತ ಧೋರಣೆಗಳು, ದೇವರಾಜ ಅರಸು ಅವರ ಜೊತೆಯಾಗಿ ಅನುಷ್ಠಾನಕ್ಕೆ ತಂದ ಜನಪರ ಧೋರಣೆಗಳು ಮತ್ತು ಇಂದಿರಾ ಗಾಂಧಿಯವರ ಇಪ್ಪತ್ತು ಅಂಶದ ಕಾರ್ಯಕ್ರಮಗಳು, ಚಿಕ್ಕಮಗಳೂರು ಚುನಾವಣೆಯ ಅದ್ಭುತ ಚಿತ್ರಣ, ಮುಂದಿನ ರಾಜಕೀಯ ಏಳು, ಬೀಳುಗಳು,ಬದಲಾದ ಸರಕಾರಗಳು, ದಕ್ಷಿಣ ಕನ್ನಡದ ಕೋಮು ಗಲಭೆಗಳು ಎಲ್ಲವನ್ನೂ ವಸ್ತುನಿಷ್ಠವಾಗಿ ವಿಶ್ಲೇಷಿಸಿದ ಅನನ್ಯ ನಿರೂಪಣೆ. ರಾಜಕೀಯ ಘಟನೆಗಳೆಲ್ಲವನ್ನೂ ದಿನಾಂಕ ಸಹಿತ ದಾಖಲಿಸಿದ ಪರಿ ಅಚ್ಚರಿ ಮೂಡಿಸುವಂತಿದೆ.
ಅಷ್ಟೊಂದು ವಿವರವೂ, ನಿಖರವೂ ಆದ ರಾಜಕೀಯ ಆಗುಹೋಗುಗಳ ಚಿತ್ರಣದಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯ ಘಟನೆಯ ಉಲ್ಲೇಖವೇ ಇಲ್ಲದಿರುವುದು ಮಾತ್ರ ಒಂದು ಕೊರತೆಯಾಗಿ ಕಾಣುವಂತಿದೆ. ಬ್ಯಾರಿ ವೆಲ್ಫೇರ್ ಅಸೋಸಿಯೇಶನ್, ಬ್ಯಾರಿ ವಿದ್ಯಾಸಂಸ್ಥೆಗಳ ಸ್ಥಾಪನೆ, ಮುಸ್ಲಿಂ ಸಮುದಾಯದಲ್ಲಾದ ಶೈಕ್ಷಣಿಕ ಕ್ರಾಂತಿ, ಬ್ಯಾರಿ ಸಾಹಿತ್ಯ ಪರಿಷತ್, ಸಾಹಿತ್ಯ ಸಮ್ಮೇಳನಗಳು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸ್ಥಾಪನೆ ಹೀಗೆ ಅನಾವರಣಗೊಳ್ಳುವ ಮೌಲಿಕ ಘಟನೆಗಳಂತೇ ಮುಕ್ತಾಯದ "ನನ್ನೊಳಗಿನ ನಾನು", ಈ ಆತ್ಮಕಥನಕ್ಕೆಳೆದ ಆಪ್ಯಾಯಮಾನ, ಅಮೂಲ್ಯ ತೆರೆ.

ಸಮಾನತೆ, ಜಾತ್ಯತೀತತೆ, ಸಹೋದರತೆಯನ್ನು ನಾನು ನನ್ನ ಪ್ರೀತಿಯ ಪತ್ನಿ ಖತೀಜಾಳಿಂದ ಕಲಿತೆ, ಅವಳು ದೇವರು ನನಗಿತ್ತ ವರ, ಎನ್ನುವ ಈ ಕಥನದಲ್ಲಿ ಆ ಸಹಧರ್ಮಿಣಿಯ ಒಂದು ಭಾವಚಿತ್ರವಾದರೂ ಇರಬೇಕಿತ್ತೆಂಬ ಭಾವ ಕಾಡದಿರುವುದಿಲ್ಲ. ಬದುಕಿನ ರಂಗದ ಅಂಕದ ಪರದೆ ಎಳೆವ ಕ್ಷಣಕ್ಕೆ ಸಿಧ್ಧರಾಗಿ, ಒಂದು ಸುಂದರವಾದ ತುಂಬು ಬದುಕನ್ನು ಬಾಳಿದೆನೆಂಬ ತೃಪ್ತಿ ನನಗಿದೆ, ಎನ್ನುವದೇ ಭಾಗ್ಯವಲ್ಲವೇ?

ಉಮರ್ ಟೀಕೆ, ಅವರ ಮೌಲಿಕ ಮುನ್ನುಡಿ ಹಾಗೂ ಮುಹಮ್ಮದ್ ಕುಳಾಯಿ ಮತ್ತು ಬಿ.ಎ ಮುಹಮ್ಮದ್ ಆಲಿ ಅವರ ಸೊಗಸಾದ ನಿರೂಪಣೆ ಬಹುಕಾಲ ಮನದಲ್ಲಿ ಉಳಿಯುವಂತಿದೆ. ಬಶೀರ್ ಅವರಂದಂತೆ ಯಾವುದೇ ನಾಟಕೀಯತೆ ಅಥವಾ ಆತ್ಮರತಿಯಿಲ್ಲದ ಸರಳ ನಿರೂಪಣೆ ಈ ಕಥನದ ಹೆಗ್ಗಳಿಕೆ. ಆಕೃತಿ ಪ್ರಿಂಟ್ಸ್‍ನ ಕಲ್ಲೂರು ನಾಗೇಶ್ ಅವರ ಚೊಕ್ಕ ಮುದ್ರಣ ಶ್ಲಾಘನೀಯ.