Print

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ವಿಯೆಟ್ನಾಂ, ನ.09: ವಿಶ್ವದ ಆಗ್ನೇಯ ಏಷ್ಯಾದಲ್ಲಿ ಆರ್ಥಿಕತೆಯಲ್ಲಿ ಒಂದಾಗಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವೆಂದೇ ಪ್ರಸಿದ್ಧ ವಿಯೆಟ್ನಾಂನಲ್ಲಿ ಸಾಮಾಜಿಕ ಹಾಗೂ ಔದ್ಯೋಗಿಕ ರಂಗದ ಪ್ರತಿಷ್ಠಿತ ಫೌಡೇಶನ್ ಪ್ರಸಿದ್ಧ ಐಕಾನಿಕ್ ಆಚೀವರ್ಸ್ ಕೌನ್ಸಿಲ್ (ಐಎಸಿ) ಸಂಸ್ಥೆಯು ಇಂದಿಲ್ಲಿ ಬುಧವಾರ ಆಯೋಜಿಸಿದ್ದ ಜಾಗತಿಕ ಸಮಾವೇಶದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀನ ನಿರ್ದೇಶಕ ಹರೀಶ್ ಜಿ.ಅವಿೂನ್ ಇವರಿಗೆ ಅಂತಾರಾಷ್ಟ್ರೀಯ ಅಪ್ರತಿಮ ಸಾಧಕ ಪುರಸ್ಕಾರ (ಇಂಟರ್‍ನ್ಯಾಶನಲ್ ಐಕಾನಿಕ್ ಆಚೀವರ್ಸ್ ಅವಾರ್ಡ್) ಪ್ರದಾನಿಸಿ ಗೌರವಿಸಿತು.

ಭಾರತ ದೇಶದ ರಾಷ್ಟ್ರಪಿತಾ ಮಹಾತ್ಮ ಗಾಂಧಿ ಅವರ 150ನೇ ಜನ್ಮೋತ್ಸವದ ಶುಭಾವಸರದಲ್ಲಿ ಐಕಾನಿಕ್ ಆಚೀವರ್ಸ್ ಕೌನ್ಸಿಲ್ ಸಂಸ್ಥೆಯು ವಿಯೆಟ್ನಾಂ ಇಲ್ಲಿನ ಹೊ ಚಿ ಮಿನ್ನ್ ಅಲ್ಲಿನ ಶೆರಾಟನ್ ಸೈಗಾನ್ ಸಭಾಗೃಹದಲ್ಲಿ ಆಯೋಜಿಸಿದ್ದ ಭವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತ ನಿವೃತ್ತ ಕೌನ್ಸಿಲ್ ಜನರಲ್ ಆಫ್ ಇಂಡಿಯಾ ಮಾಸ್ಕೋ ಡಾ| ವಿ.ಬಿ ಸೋನಿ ಅವರು ಹರೀಶ್ ಅವಿೂನ್ ಇವರ ವ್ಯವಹಾರ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಾಧನೆ ಜೊತೆಗೆ ಅಸಮಾನ್ಯ ಸಮಾಜಸೇವೆ ಪರಿಗಣಿಸಿ ಐಎಸಿ ಕೊಡಮಾಡುವ ಇಂಟರ್‍ನ್ಯಾಶನಲ್ ಐಕಾನಿಕ್ ಆಚೀವರ್ಸ್ ಅವಾರ್ಡ್‍ನ್ನು ಪ್ರಶಸ್ತಿಪತ್ರ, ಸ್ವರ್ಣ ಪದಕವನ್ನಿತ್ತು ಪ್ರಶಸ್ತಿ ಫಲಕ ಪ್ರದಾನಿಸಿ ಗೌರವಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಡಾ| ಕೆ.ಶೇಖರ್ ರೆಡ್ಡಿ, ಡಾ| ಡೇವಿಡ್ ಜೆಹಜ್ಹನ್, ರಮೇಶ್ ಆನಂದ್, ಡಾ| ಕೆ.ಝಾನ್, ಡಾ| (ಕು.) ಹೋಕಿ ಜಾನ್ ಕಿನ್, ಡಾ| ಮುಖೇಶ್ ಅಜೆಲಾ ವೇದಿಕೆಯಲ್ಲಿದ್ದು ಪ್ರಶಸ್ತಿಪತ್ರ, ಗೌರವ ಫಲಕದೊಂದಿಗೆ ಪುರಸ್ಕೃತರಿಗೆ ಅಭಿನಂದಿಸಿದರು. ಸಮಾಜ ಸೇವಕ ಎನ್.ಪಿ ಸುವರ್ಣ ಮತ್ತು ಪ್ರಭಾ ಎನ್.ಪಿ ಸುವರ್ಣ ಮುಂಬಯಿ ದಂಪತಿಗೆ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು.

ಜಾಗತಿಕವಾಗಿ ನಡೆಸಲ್ಪಟ್ಟ ಮಹಾಸಮ್ಮೇಳನದಲ್ಲಿ ಐಕಮತ್ಯ ಪಾಲುದಾರಿಕಾ ಜಾಗತಿಕ ಉತ್ಪಾದನೆ (ಜೆನರೇಟಿಂಗ್ ಗ್ಲೋಬಲ್ ಸ್ಯಾಲಿಡ್ಯಾರಿಟಿ ಪಾರ್ಟ್‍ನರ್‍ಶಿಪ್) ವಿಚಾರಿತ ಕಾರ್ಯಗಾರ ನಡೆಸಲಾಗಿದ್ದು ವಿಶ್ವದ ವಿವಿಧ ರಾಷ್ಟ್ರಗಳ ರಾಜ್ಯಪಾಲರು, ರಾಯಭಾರಿಗಳು, ಸಚಿವರು, ಉನ್ನತಾಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು. ಐಸಿಎಫ್ ಭಾರತೀಯ ಸಮಿತಿ ಕಾರ್ಯಾಧ್ಯಕ್ಷ ಇಂ| ಮಂಜುನಾಥ್ ಸಾಗರ್, ಮೈಕ್ರಾನ್ ಇಲೆಕ್ಟ್ರಿಕಲ್ಸ್ ಬೆಂಗಳೂರು ಇದರ ಯೋಜನಾ ನಿರ್ದೇಶಕ ಡಾ| ವಿ.ನಾಗರಾಜು, ಮದುಸೂಧನ್ ನಾಗರಾಜ್ ಪಾಲ್ಗೊಂಡಿದ್ದರು.

ಡಾ| ಅಂಬಿಕಾ ನಝರೆತ್ ಮೈಸೂರು ಇವರ ನಿರ್ದೇಶನದಲ್ಲಿ ಕಲಾವಿದೆಯರು ಭರತನಾಟ್ಯ ಪ್ರದರ್ಶಿಸಿದರು. ಐಎಸಿ ಸೆಕ್ರೇಟರ್ ಜನರಲ್ ಎ.ಕೆ ಶರ್ಮ ಅತಿಥಿಗಳಿಗೆ ಗೌರವಿಸಿದರು. ಡಾ| ಎಸ್.ಆನಂದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.