Print

ಮುಂಬಯಿ, ಮಾ.25: ಪವರ್ ಲಿಫ್ಟಿಂಗ್ ಕ್ರೀಡಾ ಕ್ಷೇತ್ರದಲ್ಲಿ ತನ್ನ ವಿಶಿಷ್ಟ ಸಾಧನೆಯ ಮುಖೇನ ಅಂತರಾಷ್ಟೀಯ ಮಟ್ಟದಲ್ಲಿ ಸ್ಪರ್ದಿಸಿ ಹಲವಾರು ಸುವರ್ಣ ಪದಕಗಳನ್ನು ಮುಡಿಗೇರಿಸಿಕೊಂಡು ಕರ್ನಾಟಕದ ಕ್ರೀಡಾಲೋಕದ ಪ್ರತಿಷ್ಟಿತ ಏಕಲವ್ಯ ಪ್ರಶಸ್ತಿ ಪುರಸ್ಕಾರವನ್ನು ಗಿಟ್ಟಿಸಿ ಕೊಂಡಿರುವ ಅಕ್ಷತಾ ಪೂಜಾರಿ ಬೋಳ ಇವರು ಇತ್ತೀಚಿಗೆ ಜಾರ್ಖಂಡ್ ಅಲ್ಲಿನ ರಾಂಚಿಯಲ್ಲಿ ನಡೆದ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯ ಮಹಿಳಾ ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಿ ಎರಡು ಸ್ವರ್ಣ ಪದಕದೊಂದಿಗೆ ವಿಜೇತರಾಗಿ ಭಾರತದ ಬಲಿಷ್ಠ ಮಹಿಳೆ ಖ್ಯಾತಿಗೆ ಬಾಜನರಾದರು.

 

 

 

ಇದೇ ಸಂಧರ್ಭದಲ್ಲಿ ಪುರುಷರ ಸೀನಿಯರ್ ವಿಭಾಗದಲ್ಲಿ ಪೋಲೀಸ್ ರೌಡಿ ನಿಗ್ರಹ ದಳ ಉತ್ತರ ವಲಯದ ಸಿಬ್ಬಂದಿ ವಿಜಯ ಕಾಂಚನ್ ಬೈಕಂಪಾಡಿ ಇವರು ಚಿನ್ನದ ಪದಕ ಪಡೆದಿದ್ದಾರೆ. ಮಾಸ್ಟರ್ ವಿಭಾಗದಲ್ಲಿ ಮಂಜುನಾಥ್ ಮಲ್ಯ ಇವರು ಎರಡು ಚಿನ್ನದ ಪದಕ ಪಡೆದಿದ್ದಾರೆ. ಈ ಮೂವರು ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

ಅಕ್ಷತಾ ಪೂಜಾರಿ ಈ ಮೊದಲು ಬೆಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಕರ್ಣಾಟಕದ ಬಲಿಷ್ಠ ಮಹಿಳೆ ಪ್ರಶಸ್ತಿಯೊಂದಿಗೆ ಚಿನ್ನದ ಪದಕ ಮುಡಿಗೇರಿಸಿ ಕೊಂಡಿರುವು ದನ್ನೂ ಇಲ್ಲಿ ಸ್ಮರಿಸಬಹುದು.