ವಿಶ್ವವಾಣಿಸುದ್ದಿಮನೆ ಕೃಷ್ಣರಾಜಪೇಟೆ

June 15, 2018 : ನೈತಿಕವಾಗಿ ಅಧಃಪಥನದತ್ತ ಸಾಗುತ್ತಿರುವ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ದು ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದು ನಮ್ಮ ಸಂಸ್ಕøತಿ ಹಾಗೂ ಪರಂಪರೆಯನ್ನು ಉಳಿಸುವ ದಿಕ್ಕಿನಲ್ಲಿ ವಿಪ್ರಬಾಂಧವರ ಕೊಡುಗೆಯು ಅಪಾರವಾಗಿದೆ ಎಂದು ಶಾಸಕ ನಾರಾಯಣಗೌಡ ಅಭಿಮಾನದಿಂದ ಹೇಳಿದರು.

ಅವರು ಇಂದು ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಬ್ರಾಹ್ಮಣ ಸಮಾಜದ ರಾಮಂದಿರದಲ್ಲಿ ತಾಲೂಕಿನ ವಿಪ್ರಬಾಂಧವರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಹೃದಯಸ್ಪರ್ಷಿ ಸನ್ಮಾನವನ್ನು ಸ್ವೀಕರಿಸಿ ದಾನಿಗಳು ಕೊಡುಗೆಯಾಗಿ ನೀಡಿರುವ ನಿವೇಶನದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಧ್ಯಾನಮಂದಿರ ಹಾಗೂ ವಿಪ್ರ ವಿಧ್ಯಾರ್ಥಿಗಳ ಹಾಸ್ಟೆಲ್ ಕಟ್ಟಡದ ನಿರ್ಮಾಣಕ್ಕೆ ಆಯೋಜಿಸಿದ್ದ ಸಂಕಲ್ಪ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಾದಿ ತಪ್ಪುತ್ತಿರುವ ಯುವ ಜನಾಂಗ ಹಾಗೂ ಸಮಾಜವನ್ನು ಎಚ್ಚರಿಸಿ ಸರಿದಾರಿಯಲ್ಲಿ ಕೊಂಡೊಯ್ಯುವ ದಿಕ್ಕಿನಲ್ಲಿ ಬ್ರಾಹ್ಮಣ ಸಮೂದಾಯದ ಕೊಡುಗೆಯು ಅಪಾರವಾಗಿದೆ. ಆಚಾರ ವಿಚಾರಗಳ ಪಾಲನೆ, ನ್ಯಾಯ ನೀತಿ, ಧರ್ಮ ಮತ್ತು ಸತ್ಯದ ಹಾದಿಯಲ್ಲಿ ಎಲ್ಲಾ ಜಾತಿಗಳು ಹಾಗೂ ವರ್ಗಗಳ ಜನರು ಸಾಗಿ ಗುರಿ ಮುಟ್ಟುವಂತೆ ಮಾರ್ಗದರ್ಶನ ನೀಡುತ್ತಿರುವ ವಿಪ್ರಬಾಂಧವರು ನಮ್ಮ ಸಂಸ್ಕøತಿ ಪರಂಪರೆ ಹಾಗೂ ಧರ್ಮವನ್ನು ಉಳಿಸುವ ಧರ್ಮದ ಪುನರುತ್ಥಾನ ಮಾಡುವ ಕಾಯಕವನ್ನು ಶ್ರದ್ಧಾ ಭಕ್ತಿಗಳಿಂದ ಮಾಡುವ ಮೂಲಕ ನಮಗೆ ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ. ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ವಿಪ್ರ ಬಂಧುಗಳ ಕೊಡುಗೆಯು ಅಪಾರವಾಗಿದೆ. ಕೃಷ್ಣರಾಜಪೇಟೆ ಪಟ್ಟಣದ ಹಿರಿಮೆಗೆ ಗರಿ ಮೂಡುವಂತೆ ಈಶಾನ್ಯ ದಿಕ್ಕಿನಲ್ಲಿ ಕೆರೆಯಿದೆ. ಊರಿನ ಆರಂಭದಲ್ಲಿಯೇ ಮೂಡಲ ಬಾಗಿಲು ಆಂಜನೇಯ ಸ್ವಾಮಿಯ ದೇವಾಲಯವಿದೆ, ಹನುಮನ ದೇವಸ್ಥಾನದ ಪಕ್ಕದಲ್ಲಿಯೇ ಶ್ರೀರಾಮ ದೇವರ ಆಲಯವಿದೆ. ಇಂತಹ ಪ್ರಶಾಂತ ಪರಿಶುದ್ಧವಾದ ಸ್ಥಳದಲ್ಲಿ ಗುರುರಾಘವೇಂದ್ರರ ಧ್ಯಾನ ಮಂದಿರವನ್ನು ನಿರ್ಮಾಣ ಮಾಡಿ ಕಟ್ಟಡದ ಮೊದಲ ಅಂತಸ್ತಿನ ಕಟ್ಟಡದಲ್ಲಿ ವಿಪ್ರಬಂಧುಗಳ ಮಕ್ಕಳ ಶೈಕ್ಷಣಿಕ ವಿಕಾಸಕ್ಕಾಗಿ ವಿದ್ಯಾರ್ಥಿ ನಿಲಯದ ಕಟ್ಟಡದ ಕಾಮಗಾರಿಯನ್ನು ಆರಂಭಿಸುತ್ತಿರುವುದು ಇಡೀ ನಾಗರೀಕ ಸಮಾಜವೇ ಮೆಚ್ಚುವ ಒಳ್ಳೆಯ ಕಾರ್ಯವಾಗಿದೆ. ನಾನು ನನ್ನ ಜೀವನದಲ್ಲಿ ಸತ್ಸಂಪ್ರದಾಯಗಳನ್ನು ಪಾಲಿಸಲು, ಗುರು-ಹಿರಿಯರು ಹಾಗೂ ತಂದೆ-ತಾಯಿಗಳನ್ನು ಗೌರವಿಸಿ ಪೂಜ್ಯಭಾವನೆಯಿಂದ ಕಾಣುವ ಸಂಸ್ಕಾರ ನೀಡಿದ್ದು ಬ್ರಾಹ್ಮಣ ಸಮೂದಾಯವಾಗಿದ್ದು ನಾನು ಬ್ರಾಹ್ಮಣ ಸಮಾಜಕ್ಕೆ ಎಂದೆಂದಿಗೂ ಋಣಿಯಾಗಿರುತ್ತೇನೆ ಎಂದು ಶಾಸಕ ನಾರಾಯಣಗೌಡ ಭಾವುಕರಾದರು.

ಎಂಜಲು ಲೋಟ ತೊಳೆಯುವವರು ರಾಜಕಾರಣಿಯಾಗಲ್ಲ: ತಾಲೂಕಿನ ಕೆಲವು ಹಿರಿಯ ರಾಜಕಾರಣಿಗಳು ಹೋಟೆಲ್ ಉಧ್ಯಮಿಯಾಗಿರುವ ನನ್ನನ್ನು ಎಂಜಲು ಲೋಟ ತೊಳೆಯುವ ವ್ಯಕ್ತಿಗಳು ರಾಜಕಾರಣಿಯಾಗಲು ಸಾಧ್ಯವಿಲ್ಲ ಎಂದು ಟೀಕೆ ಟಿಪ್ಪಣಿ ಮಾಡಿ ಅಣಕಿಸಿದ್ದರು. ರಾಜಕಾರಣದ ಗಂಧ ಗಾಳಿಗೊತ್ತಿಲ್ಲದ ನಾರಾಯಣಗೌಡ ರಾಜಕಾರಣಕ್ಕೆ ನಾಲಾಯಕ್ಕು ಎಂದು ಮೂದಲಿಸಿದ್ದರು.. ಆದರೆ ತಾಲೂಕಿನ ಜನತೆಯ ಬೆಂಬಲದೊಂದಿಗೆ ವಿಪ್ರಬಂಧುಗಳ ಆಶೀರ್ವಾದ ಪಡೆದ ನಾನು ಎರಡನೇ ಅವಧಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಒಮ್ಮೆ ಶಾಸಕರಾದವರು ಮತ್ತೊಮ್ಮೆ ಪುನರಾಯ್ಕೆಯಾದ ಇತಿಹಾಸವೇ ಇಲ್ಲ ಎಂದು ಬಹಿರಂಗವಾಗಿ ನನ್ನ ವಿರುದ್ಧ ಪ್ರಚಾರ ನಡೆಸಿದ್ದರು. ಆದರೆ ದೈವಬಲ ಮತ್ತು ಪ್ರಬುದ್ಧ ಮತದಾರರ ಆಶೀರ್ವಾದದಿಂದ ನಾನು ತಾಲೂಕಿನ ಇತಿಹಾಸವನ್ನೇ ಬದಲಿಸಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಶಾಸಕನೆಂಬ ಅಹಂ ಇಲ್ಲ ಏಕೆಂದರೆ ನಾನು ತಾಲೂಕಿನ ಜನತೆಯ ವಿನಮ್ರ ಸೇವಕ.. ಅಧಿಕಾರ ಎಂದಿಗೂ ಶಾಶ್ವತವಲ್ಲ, ಜನತೆಯ ಪ್ರೀತಿ ವಿಶ್ವಾಸಗಳೇ ಮುಖ್ಯ ಎಂಬ ವಾಸ್ತವ ಸತ್ಯವನ್ನು ಅರಿತಿದ್ದೇನೆ ಎಂದು ಹೇಳಿದ ನಾರಾಯಣಗೌಡ ತಮ್ಮ ತಂದೆ ತಾಯಿಗಳ ಹೆಸರಿನಲ್ಲಿ ಧ್ಯಾನಮಂದಿರದ ನಿರ್ಮಾಣಕ್ಕೆ 5ಲಕ್ಷರೂ ಸಹಾಯ ಧನವನ್ನು ನೀಡುವುದಾಗಿ ಶಾಸಕರು ಪ್ರಕಟಿಸಿದರು.

ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಉಧ್ಯಮಿ ಅರವಿಂದಕಾರಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಖಧರೆ ಸೋಮಶೇಖರ್, ಸಂಘದ ಪದಾಧಿಕಾರಿಗಳಾದ ರಘುರಾಮ ನಾಡಿಗ್, ಸುಬ್ಬಣ್ಣ, ಹರೀಶ್‍ಕುಮಾರ್, ಮೋದೂರು ಶ್ರೀಧರ್, ಸವಿತಾ, ಕುಪ್ಪಹಳ್ಳಿ ಸುಬ್ರಹ್ಮಣ್ಯ, ಪುರಸಭೆಯ ಮಾಜಿಅಧ್ಯಕ್ಷ ಕೆ.ಟಿ.ಗಂಗಾಧರ್, ಹರಳಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ದೇವಾನಂದ್, ಬಂಡಿಹೊಳೆ ಗ್ರಾ.ಪಂ ಸದಸ್ಯ ಶೇಷಾಧ್ರಿ, ಎಪಿಎಂಸಿ ಅಧ್ಯಕ್ಷ ಲೋಕೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal