Print


(ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಂಬಯಿ, ಮೇ.27: ದ್ವಿತೀಯ ಬಾರಿಗೆ ಕೃಷ್ಣರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಜೆಡಿಎಸ್ ಪಕ್ಷದ ಧುರೀಣ ಶಾಸಕ ನಾರಾಯಣ ಆರ್.ಗೌಡ ಅವರಿಗೆ ಜೆಡಿಎಸ್ ಕಾರ್ಯಕರ್ತರ ವಿಜಯೋತ್ಸವ ಸಭೆ ಹಾಗೂ ಕೃತಜ್ಞತೆ ಸಮರ್ಪಣಾ ಸಮಾರಂಭ ಇಂದು ಕೃಷ್ಣರಾಜಪೇಟೆ ಪಟ್ಟಣದಲ್ಲಿ ನಡೆಸಲ್ಪಟ್ಟಿತು. ಅಪಾರ ಸಂಖ್ಯೆಯ ಕಾರ್ಯಕರ್ತರು ನೀಡಿದ ಆತ್ಮೀಯ ಅಭಿನಂದನೆಯನ್ನು ಶಾಸಕ ನಾರಾಯಣ ಗೌಡ ಭಾಗವಹಿಸಿ ಸ್ವೀಕರಿಸಿ ತನ್ನ ಗೆಲುವಿಗಾಗಿ ಶ್ರಮಿಸಿದ ಎಲ್ಲರಿಗೂ ಅಭಾರಮನ್ನಿಸಿದರು.

ತಾಲೂಕಿನ ಇತಿಹಾಸದಲ್ಲಿ ಒಮ್ಮೆ ಶಾಸಕರಾಗಿ ಆಯ್ಕೆ ಆದವರು ಮತ್ತೊಮ್ಮೆ ಆಯ್ಕೆಯಾದ ಉದಾಹರಣೆಯೇ ಇಲ್ಲ, ಆದರೆ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ತಾಲೂಕಿನ ಪ್ರಬುದ್ಧ ಮತದಾರರು ಶಾಸಕನಾಗಿ ನನ್ನನ್ನು ಭಾರೀ ಬಹುಮತಗಳ ಅಂತರದಿಂದ ಪುನರಾಯ್ಕೆ ಮಾಡುವ ಮೂಲಕ ತಾಲೂಕಿನ ರಾಜಕೀಯ ಚರಿತ್ರೆಯನ್ನೇ ಬದಲಾಯಿಸಿದ್ದಾರೆ. ಕಾಂಗ್ರೇಸ್ ಅಭ್ಯಥಿರ್ü ಹಣ ಮತ್ತು ಹೆಂಡದ ಹೊಳೆಯನ್ನೇ ಹರಿಸಿದರೂ, ನಮ್ಮ ಪಕ್ಷದ ನೂರಾರು ಮುಖಂಡರುಗಳಿಗೆ ಆಮಿಷಗಳನ್ನು ಒಡ್ಡಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡರೂ ಮತದಾರರು ಮಾತ್ರ ಗೂಂಢಾ ರಾಜಕಾರಣವನ್ನು ಸಾರಾ ಸಗಟಾಗಿ ತಿರಸ್ಕರಿಸಿ ಸಜ್ಜನ ರಾಜಕಾರಣವನ್ನು ಬೆಂಬಲಿಸಿ 18ಸಾವಿರಕ್ಕೂ ಅಧಿಕ ಮತಗಳ ಮೂಲಕ ನನ್ನನ್ನು ಪುನರಾಯ್ಕೆ ಮಾಡಿದ್ದಾರೆ. ನನ್ನ ಜೀವನದ ಕೊನೆಯ ಉಸಿರಿನವರೆಗೂ ತಾಲೂಕಿನ ಜನತೆಯ ಋಣವನ್ನು ತೀರಿಸುವ ಪ್ರಾಮಾಣಿಕವಾದ ಕೆಲಸ ಮಾಡುತ್ತೇನೆ. ವಿರೋಧಶ ಪಕ್ಷದ ಶಾಸಕನಾಗಿ ಕೆಲಸ ಮಾಡಿರುವ ನನಗೆ ಸುದೈವವೆಂಬಂತೆ ನಮ್ಮ ನಾಯಕರಾದ ಕುಮಾರಸ್ವಾಮಿ ಅವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ, ನಮ್ಮ ಪಕ್ಕದ ಕ್ಷೇತ್ರ ಮೇಲುಕೋಟೆಯ ಶಾಸಕರಾದ ಸಿ.ಎಸ್ ಪುಟ್ಟರಾಜು ಪ್ರಭಾವಿ ಮಂತ್ರಿಗಳಾಗಲಿದ್ದಾರೆ. ಆದ್ದರಿಂದ ಜಿಲ್ಲೆ ಹಾಗೂ ತಾಲೂಕಿನ ಬಾಗ್ಯದ ಬಾಗಿಲು ತೆರೆಯಲಿದೆ. ತಾಲೂಕು ಸಮಗ್ರವಾದ ಅಭಿವೃದ್ಧಿಯಾಗಲಿದೆ ಎಂದು ಶಾಸಕ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದರು.

 

 

 

 

 

 

 

 

 

 

 

ಪಕ್ಷದ ಮುಖಂಡರಿಂದಲೇ ವಿಶ್ವಾಸ ದ್ರೋಹ: ಜೆಡಿಎಸ್ ಪಕ್ಷದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜು ಮತ್ತು ಮುಖಂಡ ಬಸ್ ಕೃಷ್ಣೇಗೌಡ ಪಕ್ಷದ್ರೋಹ ಮಾಡಿ ಕಾಂಗ್ರೇಸ್ ಅಭ್ಯಥಿರ್üಯ ಗೆಲುವಿಗಾಗಿ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದಾರೆ. ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ದೇವರಾಜು ಅವರನ್ನೇ ವರಿಷ್ಠರು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದ್ದರೆ ಹಿರಿಯರಾದ ದೇವರಾಜು ಅವರ ಪರವಾಗಿಯೇ ಪ್ರಚಾರ ಮಾಡುತ್ತಿದ್ದೆ. ಜೆಡಿಎಸ್ ಪರವಾಗಿ ಪ್ರಚಾರ ಮಾಡುವಂತೆ ಕಾಲಿಗೆ ಬಿದ್ದು ಬೇಡಿ ಕೊಂಡರೂ ದೇವರಾಜು ಪಕ್ಷದ್ರೋಹ ಮಾಡಿ ಪಕ್ಷದ ವಿರುದ್ಧವಾಗಿ ಪ್ರಚಾರ ಮಾಡಿದರು. ಕೃಷ್ಣೇಗೌಡ ಕಾಂಗ್ರೇಸ್ ಅಭ್ಯಥಿರ್üಯ ಮಗನೊಂದಿಗೆ ಹಣ ಹಂಚಿ ನನ್ನನ್ನು ಸೋಲಿಸಲು ಸಂಚು ನಡೆಸಿದರು. ಆದರೆ ತಾಲೂಕಿನ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ಆಸೆ-ಆಮಿಷಗಳಿಗೆ ಬಲಿಯಾಗದೇ ನಾಯಕರು ಪಕ್ಷಾಂತರ ಮಾಡಿ ಪಕ್ಷದ್ರೋಹದ ಕೆಲಸ ಮಾಡಿದರೂ ಜೆಡಿಎಸ್ ಅಭ್ಯಥಿರ್üಯಾದ ನನ್ನ ಗೆಲುವಿಗಾಗಿ ಹಗಲಿರುಳೆನ್ನದೇ ಕೆಲಸ ಮಾಡಿ ಚರಿತ್ರಾರ್ಹವಾದ ಗೆಲುವು ತಂದುಕೊಟ್ಟರು. ಇನ್ನು ಮುಂದೆ ಪಕ್ಷದ್ರೋಹಿಗಳಿಗೆ ಪಕ್ಷದಲ್ಲಿ ಜಾಗವಿಲ್ಲ. ಹೆತ್ತತಾಯಿಯಂತಿರುವ ಪಕ್ಷಕ್ಕೆ ದ್ರೋಹಬಗೆಯುವ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡುತ್ತೇನೆ. ಪಕ್ಷದ ವರಿಷ್ಠರಿಗೆ ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇನೆ. ಇನ್ನು ಮುಂದೆ ನಿಷ್ಠಾವಂತ ಕಾರ್ಯಕರ್ತರ ಪಡೆಯೊಂದಿಗೆ ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ ಎಂದು ಶಾಸಕ ನಾರಾಯಣ ಗೌಡ ಗುಡುಗಿದರು.


ಅಭಿವೃದ್ಧಿಯೇ ಮೂಲಮಂತ್ರ: ಒಬ್ಬ ವಿರೋಧ ಪಕ್ಷದ ಶಾಸಕನಾಗಿದ್ದಾಗಲೇ ತಾಲೂಕಿನ ಅಭಿವೃದ್ಧಿಗಾಗಿ ನನ್ನನ್ನು ತೊಡಗಿಸಿಕೊಂಡು ಕೆಲಸ ಮಾಡಿದ್ದೆ. ಈಗ ನಮ್ಮ ನಾಯಕರಾದ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದು ಜೆಡಿಎಸ್ ಕಾಂಗ್ರೇಸ್ ನೇತೃತ್ವದ ಮಹಾಮೈತ್ರಿಯ ಸಮ್ಮಶ್ರ ಸರ್ಕಾರವು ಅಸ್ಥಿತ್ವದಲ್ಲಿರುವುದರಿಂದ ಹೆಚ್ಚಿನ ಅನುದಾನವನ್ನು ತಂದು ಅಗತ್ಯವಾಗಿ ಆಗಬೇಕಾಗಿರುವ ಕೆಲಸ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪುಟ್ಟರಾಜು ಅವರು ಜಿಲ್ಲೆಯ ಕೋಟಾದಿಂದ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನಮ್ಮ ಜಿಲ್ಲೆಯಿಂದ ಇಬ್ಬರು ಶಾಸಕರಿಗೆ ಮಂತ್ರಿಗಳಾಗುವ ಯೋಗವಿದೆ. ಆದ್ದರಿಂದ ತಾಲೂಕಿನ ಸಮಗ್ರವಾದ ಅಭಿವೃದ್ಧಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಾಸಕ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲಾ ಗ್ರಾಮಗಳಿಗೂ ಭೇಟಿ: ಮಂತ್ರಿ ಮಂಡಲದ ವಿಸ್ತರಣೆಯ ಪ್ರಕ್ರಿಯೆಯು ಮುಗಿದ ನಂತರ ಕ್ಷೇತ್ರದ ಎಲ್ಲಾ 34 ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜನರ ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವ ಕೆಲಸವನ್ನು ಇನ್ನು ಮುಂದೆ ಪ್ರಾಮಾಣಿಕವಾಗಿ ಮಾಡುತ್ತೇನೆ. ಪಕ್ಷದ್ರೋಹ ಮಾಡಿದ ಮುಖಂಡರನ್ನು ಹತ್ತಿರಕ್ಕೆ ಸೇರಿಸಲ್ಲ, ನನ್ನ ಗೆಲುವಿಗಾಗಿ ದುಡಿದ ಕಾರ್ಯಕರ್ತ ಬಂಧುಗಳು ನೇರವಾಗಿ ನನ್ನನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದ ಶಾಸಕ ನಾರಾಯಣಗೌಡ ಕಳೆದ ಒಂದೂವರೆ ತಿಂಗಳಿನಿಂದ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತ ಗೊಂಡಿವೆ, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳಿವೆ, ಇನ್ನು ಮುಂದೆ ಅಧಿಕಾರಿಗಳು ಜನಸಾಮಾನ್ಯರಿಗೆ ತೊಂದರೆ ನೀಡಲು ನಾನು ಬಿಡಲ್ಲ. ಜನರ ರಕ್ತ ಹೀರುವ ಭ್ರಷ್ಠ ಅಧಿಕಾರಿಗಳನ್ನು ತಾಲೂಕಿನಿಂದ ಹೊರಗೆ ಕಳಿಸುತ್ತೇನೆ. ನನ್ನ ಕ್ಷೇತ್ರದಲ್ಲಿ ಜನಪರವಾಗಿ ಕೆಲಸ ಮಾಡುವ ನೌಕರರಿಗಷ್ಠ ಅವಕಾಶ ಎಂದು ಕಾರ್ಯಕರ್ತರಿಗೆ ಆತ್ಮವಿಶ್ವಾಸವನ್ನು ತುಂಬಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವಿಧಾನಪರಿಷತ್ತ್‍ನ ಉಪಸಭಾಪತಿ ಮರಿತಿಬ್ಬೇ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಜಿ.ಪಂ ಸದಸ್ಯ ಹೆಚ್.ಟಿ.ಮಂಜು, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ, ಸ್ಥಾಯಿಸಮಿತಿಯ ಅಧ್ಯಕ್ಷ ವಿಜಯಕುಮಾರ್ ಪಕ್ಷದ ಮಾಜಿ, ಹಾಲಿ ಪದಾಧಿಕಾರಿಗಳು,ಮತದಾರರು ಸೇರಿದಂತೆ ನೂರಾರು ಜನ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.