ನಿಧನ

ಹಿರಿಯ ರಂಗಭೂಮಿ ಕಲಾವಿದ ಡಾ| ಡಿ.ಕೆ ಚೌಟ ನಿಧನ

ಮುಂಬಯಿ, ಜೂ.19: ಉದ್ಯಮಿ, ಬರಹಗಾರ, ಹಿರಿಯ ರಂಗಭೂಮಿ ಕಲಾವಿದ, ಕರ್ನಾಟಕ ಚಿತ್ರಕಲಾ ಪರಿಷತ್‍ನ ಮಾಜಿ ಪ್ರಧಾನ ಕಾರ್ಯದರ್ಶಿ ಡಿ.ಕೆ ಚೌಟ ಹೆಸರಾಂತ ದರ್ಬೆ ಕೃಷ್ಣಾನಂದ ಚೌಟ (81.) ಇಂದಿಲ್ಲಿ ಮುಂಜಾನೆ ನಿಧನರಾದರು. ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿದ್ದ ಡಾ| ಚೌಟ ಅವರು ಕೇರಳದ ಮಂಜೇಶ್ವರ ಇಲ್ಲಿನ ಮೀಯಾಪದವು ಮೂಲದವರು.

ಮುಂಬಯಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಅಧ್ಯಯನ ಪೂರೈಸಿದ ನಂತರ ತನ್ನ ಜೀವನದ ಹಲವಾರು ವರ್ಷಗಳನ್ನು ಘಾನಾ, ನೈಜೀರಿಯಾ ಮತ್ತು ಲಂಡನ್ ಇಲ್ಲಿ ಕಳೆದಿದ್ದರು. 1995ರಲ್ಲಿ ಬಂಟ್ಸ್ ಸಂಘ ಬೆಂಗಳೂರು ಸಂಯೋಜನೆಯಲಿ ಡಾ| ಚೌಟರು ತನ್ನ ಅಧ್ಯಕ್ಷತೆಯಲ್ಲಿ ವಿಶ್ವ ಬಂಟ್ ಸಮಾವೇಶ ಆಯೋಜಿಸಿದ್ದರು.

ಆನಂದ ಕೃಷ್ಣ ನಾಮದಲ್ಲಿ ಬರೆಯುತ್ತಿದ್ದ ಇವರು ಸಾಹಿತ್ಯ ಕೃತಿಗಳಲ್ಲಿ ತೊಡಗಿಸಿ ಕೊಂಡಿದ್ದು ಕರಿಯಜ್ಜೇರೆನ ಕಥೆಕುಲು ಮತ್ತು ಪಿಲಿಪತ್ತಿ ಗಡಸ್ ಇವರ ಪ್ರಸಿದ್ಧ ನಾಟಕಗಳು. ಮೂಜಿ ಮುತ್ತು ಮೂಜಿ ಲೋಕ, ಪತ್ತ್ ಪಜ್ಜೆಲು, ಮಿತ್ತಬೈಲು ಯಮುನಾಕ್ಕ ಇತ್ಯಾದಿಗಳ ಕೃತಿಕಾರರಾಗಿ ಪ್ರಸಿದ್ಧಿಯಲ್ಲಿದ್ದರು.

ಸಂದೀಪ್ ಚೌಟ (ಸಂಗೀತಗಾರ) ಮತ್ತು ಪ್ರಜ್ನಾ ಚೌಟ (ಜನಾಂಗಶಾಸ್ತ್ರಜ್ಞ) ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ:ಡಿ ಕೆ.ಚೌಟರ ನಿಧನಕ್ಕೆ ಎಂ.ಡಿ ಶೆಟ್ಟಿ, ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಹೆಚ್.ಬಿ. ಎಲ್ ರಾವ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಡಾ| ಶಂಕರ್ ಬಿ.ಶೆಟ್ಟಿ ವಿರಾರ್, ಎರ್ಮಾಳ್ ಹರೀಶ್ ಶೆಟ್ಟಿ, ಸುರೇಂದ್ರಕುಮಾರ್ ಹೆಗ್ಡೆ, ಮೋಹನ್ ಮಾರ್ನಾಡ್, ಡಾ| ಭಾರತ್‍ಕುಮಾರ್ ಪೋಲಿಪು ಸೇರಿದಂತೆ ಮಹಾನಗರ ಮುಂಬಯಿಯಲ್ಲಿನ ತುಳು-ಕನ್ನಡಿಗರ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ.

(ರೋನಿಡಾ, ಮುಂಬಯಿ)

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal