Print


ಮುಂಬಯಿ, ಮಾ.15: ತುಳು ಸಾಹಿತ್ಯ ಅಕಾಡೆಮಿಗೆ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಕನ್ನಡಿಗ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಸಲಹಾ ಸಮಿತಿ ಸದಸ್ಯ, ಕಡಂದಲೆ ಸುರೇಶ್ ಎಸ್.ಭಂಡಾರಿ ಇವರಿಗೆ ಪತ್ರಕರ್ತರ ಸಂಘದ ವತಿಯಿಂದ ಸತ್ಕರಿಸಿ ಅಭಿನಂದಿಸಲಾಯಿತು.

ಇಂದಿಲ್ಲಿ ಭಾನುವಾರ ಪೂರ್ವಾಹ್ನ ಘಾಟ್ಕೋಪರ್ ಪಶ್ಚಿಮದ ಮನಿಪೋಲ್ಡ್ ಕಚೇರಿಯಲ್ಲಿ ನಡೆಸಲಾದ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಸುರೇಶ್ ಭಂಡಾರಿ ಅವರಿಗೆ ಶಾಲು ಹೊದಿಸಿ, ಪುಷ್ಫಗುಪ್ಚ, ಸ್ಮರಣಿಕೆಯನ್ನಿತ್ತು ಅಭಿನಂದಿಸಿ ಶುಭಾರೈಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಕನ್ನಡಿಗ ಪತ್ರಕರ್ತರ ಸಂಘದ ಮತ್ತೋರ್ವ ಸಲಹಾ ಸಮಿತಿ ಸದಸ್ಯ ಡಾ| ಆರ್.ಕೆ ಶೆಟ್ಟಿ ಅವರನ್ನೂ ಅಭಿನಂದಿಸಲಾಯಿತು.

ತುಳುಭಾಷೆ ನನ್ನ ಭಾಷೆ-ನನ್ನ ಮಾತೆ ಅನ್ನುವ ಧ್ಯೇಯದಿಂದ ಅನಾದಿ ಕಾಲದಿಂದಲೂ ಬೆಳೆದು ಬಂದ ತುಳುಭಾಷೆ ಒಂದು ಸಂಸ್ಕೃತಿಯೂ, ಸಮಾಜಯೂ ಹೌದು. ಇದರ ಸರ್ವೋನ್ನತಿಯೇ ನನ್ನ ಉದ್ದೇಶವಾಗಿದೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್ ಮತ್ತು ಸರ್ವ ಸದಸ್ಯರ ಒಪ್ಪಿಗೆಯಂತೆ ಕರ್ನಾಟಕ ಸರಕಾರವು ನನಗೆ ಈ ನೇಮಕಾತಿ ಮಾಡಿದ್ದು ಇದಕ್ಕೆ ಕಾರಣಕರ್ತರಾದ ಸರ್ವ ತುಳುವರಿಗೂ ವಂದಿಸುವೆ. ನಮ್ಮ ಕಾಲಾವಧಿಯಲ್ಲಿ ಖಂಡಿತವಾಗಿಯೂ ತುಳು ಭಾಷೆಯನ್ನು ರಾಷ್ಟ್ರದ ಸವಿಂಧಾನದ ಎಂಟನೇ ಪರಿಚ್ಛಯದಲ್ಲಿ ರಾರಾಜಿಸುವಲ್ಲಿ ಯಶಕಾಣುವ ಆಶಯ ನಮ್ಮಲ್ಲಿದೆ. ಇದಕ್ಕೆ ಮುಂಬಯಿವಾಸಿ ತುಳುವರ ಸಹಯೋಗವೂ ಅತ್ಯವಶ್ಯವಾಗಿದೆ ಎಂದು ಸುರೇಶ್ ಭಂಡಾರಿ ತಿಳಿಸಿದರು.

ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಸ್ವಾಗತಿಸಿ ಪ್ರಸ್ತವನೆಗೈದು ಕನ್ನಡ, ತುಳು, ಹಿಂದಿ, ಮರಾಠಿ ಇತ್ಯಾದಿ ಭಾಷೆಗಳಲ್ಲಿ ನಿಪುಣರೆಣಿಸಿ ಓರ್ವ ವಾಗ್ಮಿಯಾಗಿ ಗುರುತಿಸಿ ಕೊಂಡ ಭಂಡಾರಿ ಈ ಸ್ಥಾನಕ್ಕೆ ಸಮರ್ಥ ವ್ಯಕ್ತಿಯಾಗಿದ್ದಾರೆ. ಇವರೋರ್ವ ವಿದ್ವಾಂಸತ್ವ ಸ್ಥಾನಕ್ಕೂ ಯೋಗ್ಯರು. ಸಮಗ್ರ ಸಮಾಜವನ್ನು ಆರೋಗ್ಯಪೂರ್ಣವಾಗಿಸುವ ಸ್ವಚ್ಛ ಮನೋಭಾವವುಳ್ಳ ಭಂಡಾರಿ ಅವರು ಓರ್ವ ಹೃದಯಶೀಲ ತುಳುವರೂ ಹೌದು. ಡಾ| ಸುನೀತಾ ಎಂ.ಶೆಟ್ಟಿ, ಶಿಮಂತೂರು ಚಂದ್ರಹಾಸ ಸುವರ್ಣ ಇವರ ಬಳಿಕ ಮತ್ತೆ ತುಳು ಅಕಾಡೆಮಿಗೆ ಸದಸ್ಯತ್ವ ನೀಡಿ ಕರ್ನಾಟಕ ಸರಕಾರ ಮುಂಬಯಿ ನೆಲೆಯ ತುಳುವರನ್ನು ಗೌರವಿಸಿದ್ದಂತಾಗಿದೆ ಎಂದರು.

ರೋನ್ಸ್ ಬಂಟ್ವಾಳ್ ಅವರು ಸುರೇಶ್ ಭಂಡಾರಿ ಅವರನ್ನು ಅಭಿನಂದಿಸಿ ಮಾತನಾಡಿ ಸುರೇಶ್ ಭಂಡಾರಿ ಅವರು ಮುಂಬಯಿನಲ್ಲಿನ ದೇವತಾ ಸದ್ಗುಣರು. ತುಳು ಭಾಷೆ-ಸಂಸ್ಕೃತಿಯ ಜೊತೆಗೆ ಎಲ್ಲಾ ಭಾಷಿಗರನ್ನೂ ಪೋತ್ಸಹಿಸಿದ ಬಹುಭಾಷಿಗರು. ಸರ್ವರನ್ನೂ ಬಂಧುಗಳಾಗಿ ಕಾಣುವ ಸ್ವಚ್ಛಂದ, ನಿರ್ಮಲ ಮನಸುಳ್ಳ ಇವರು ಮಹಾರಾಷ್ಟ್ರ ಮಾತ್ರವಲ್ಲ ರಾಷ್ಟ್ರದ ಆಸ್ತಿಯಾಗಿದ್ದಾರೆ. ಇಂತಹವರಿಂದ ಮುಂಬಯಿನಲ್ಲಿ ಮತ್ತಷ್ಟು ತುಳುವಿನ ಉನ್ನತಿಯಾಗಲಿ ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಂಗ ಎಸ್.ಪೂಜಾರಿ, ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ, ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ, ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಡಾ| ದಿನೇಶ್ ಶೆಟ್ಟಿ ರೆಂಜಾಳ, ಜಯಂತ್ ಕೆ.ಸುವರ್ಣ, ವಿಶೇಷ ಆಮಂತ್ರಿತ ಸದಸ್ಯರುಗಳಾದ ಸಾ.ದಯಾ (ದಯಾನಂದ್ ಸಾಲ್ಯಾನ್), ಕರುಣಾಕರ್ ವಿ.ಶೆಟ್ಟಿ, ಸದಸ್ಯರಾದ ಆರೀಫ್ ಕಲಕಟ್ಟಾ, ಸುರೇಶ್ ಕೆ.ಮೂಲ್ಯ ಮತ್ತಿತರರು ಉಪಸ್ಥಿತರಿದ್ದು ಸುರೇಶ್ ಭಂಡಾರಿ ಅವರನ್ನು ಅಭಿನಂದಿಸಿದರು.