About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.08: ಅಹಂಯುಗದ ಕಾಲಘಟ್ಟದಲ್ಲಿ ಸಾಂಘಿಕ ಬದುಕು, ಸಂಘ-ಸಂಸ್ಥೆಗಳನ್ನು ಉಳಿಸಿ ಬೆಳೆಸುವುದು ಕಷ್ಟಕರ. ಆದರೂ ಮುಂಬಯಿನಂತಹ ಮಾಯಾನಗರಿಯ ಯಾಂತ್ರಿಕ ಜೀವನದಲ್ಲೂ ತುಳು-ಕನ್ನದಿಗರ ಸಮಾಜಪರ ಚಿಂತನೆ, ಸಾಮಾಜಿಕ ಕಾಳಜಿ, ಸೇವೆ ಶ್ಲಾಘನೀಯ. ಮಾನವೀಯತೆ, ಒಳ್ಳೆಯ ಸಂಸ್ಕೃತಿ ಇದ್ದಾಗ ಮಾತ್ರ ಮಾನವ ಬದುಕು ಸಾಧ್ಯವಾಗುವುದು. ಇಂತಹ ಮನುಷ್ಯತ್ವದ ಉಳಿವಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಪೂರಕವಾಗಿದೆ. ಇದನ್ನು ರೂಪಿಸಲು ಸಂಘ ಸಂಸ್ಥೆಗಳ ಪಾತ್ರ ಹಿರಿದಾಗಿದೆ. ಸುಮಾರು ಆರುವರೆ ದಶಕಗಳಿಂದ ಅಸ್ತಿತ್ವದಲ್ಲಿದ್ದ ಈ ಕನ್ನಡ ಸಂಘವನ್ನು ಎಲ್.ವಿ ಅಮೀನ್ ಪುನರುತ್ಥಾನಗೊಳಿಸಿ ಕನ್ನಡಿಗರನ್ನು ಕಟ್ಟಿಕೊಂಡು ಬೆಳೆಸಿ ಉಳಿಸಿ ಮುನ್ನಡೆಸುತ್ತಿರುವುದು ಅಭಿನಂದನೀಯ ಎಂದು ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣಕಾಸು ತಜ್ಞ ಡಾ| ಆರ್.ಕೆ ಶೆಟ್ಟಿ ನುಡಿದರು.

ಇಂದಿಲ್ಲಿ ಶನಿವಾರ ಸಾಂತಾಕ್ರೂಜ್‍ನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ (ರಿ). ತನ್ನ 62ನೇ ವಾರ್ಷಿಕೋತ್ಸವ ಸಂಭ್ರಮಿಸಿದ್ದು, ಡಾ| ಆರ್.ಕೆ ಶೆಟ್ಟಿ ಮುಖ್ಯ ಅತಿಥಿಯಾಗಿದ್ದು ಸಂಘದ ವಾರ್ಷಿಕ ಶೈಕ್ಷಣಿಕ ಆರ್ಥಿಕ ನೆರವನ್ನು ಆಯ್ದ ಮಕ್ಕಳಿಗೆ ವಿತರಿಸಿ ಮಾತನಾಡಿದರು.

 

ಸಂಘದ ಅಧ್ಯಕ್ಷ ಎಲ್.ವಿ ಅಮೀನ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಹೆಸರಾಂತ ಲೆಕ್ಕಪರಿಶೋಧಕ, ಜವಾಬ್ ಸಂಸ್ಥೆಯ ಅಧ್ಯಕ್ಷ ಸಿಎ| ಐ.ಆರ್ ಶೆಟ್ಟಿ ದೀಪ ಪ್ರಜ್ವಲಿಸಿ ಉತ್ಸವ ಸಮಾರಂಭ ಉದ್ಘಾಟಿಸಿದರು. ಬಂಟ್ಸ್ ನ್ಯಾಯ ಮಂಡಳಿಯ ಮಾಜಿ ಅಧ್ಯಕ್ಷ, ಮುಂಬಯಿನ ಪ್ರಥಮ ಕನ್ನಡಿಗ ನೋಟರಿ ನ್ಯಾಯವಾದಿ ಎಸ್.ಕೆ ಶೆಟ್ಟಿ ಅತಿಥಿ ಅಭ್ಯಾಗತರುಗಳಾಗಿ ಹಾಗೂ ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ, ಗೌ| ಪ್ರ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್, ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ, ಸಾಮಾಜಿಕ-ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್, ಸಲಹಾಗಾರರಾದ ನಾರಾಯಣ ಎಸ್.ಶೆಟ್ಟಿ, ಬಿ.ಆರ್ ಪೂಂಜಾ, ಎನ್.ಎಂ ಸನೀಲ್ ವೇದಿಕೆಯಲ್ಲಿದ್ದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಮತ್ತು ಶ್ರೇಷ್ಠ ರಂಗನಟ ಮೋಹನ್ ಮಾರ್ನಾಡ್ ಇವರನ್ನು ಸನ್ಮಾನಿಸಿ ಅಭಿನಂದಿಸಿದರು ಹಾಗೂ ಸಂಘವು ವಾರ್ಷಿಕವಾಗಿ ಕೊಡಮಾಡುವ ಆರೋಗ್ಯನಿಧಿಯನ್ನು ವಿತರಿಸಿ, ವಿದ್ಯಾರ್ಥಿಗಳ ದತ್ತು ಸ್ವೀಕಾರಗೈದರು.

ಐ.ಆರ್ ಶೆಟ್ಟಿ ಮಾತನಾಡಿ ಸಂಘದ 62ರ ನಡಿಗೆ ಸಂಸ್ಥೆಯ ಸೇವಾ ಸಾರ್ಥಕತೆ ತೋರುತ್ತದೆ. ಸಾಮಾಜಿಕ ಕಳಕಳಿಯಿದ್ದಾಗ ಮಾತ್ರ ಸಂಸ್ಥೆಗಳು ಇಷ್ಟೊಂದು ಮನ್ನಡೆಯಲು ಸಾಧ್ಯವಾಗುವುದು. ಜಾಗತೀಕರಣದ ಇಂತಹ ಕಾಲಘಟ್ಟದಲ್ಲೂ ಸಂಸ್ಕಾರ, ಸಂಸ್ಕೃತಿ, ಭವ್ಯ ಪರಂಪರೆಗಳನ್ನು ಮರೆಯದಂತೆ ಜೀವಾಳವಾಗಿಸಲು ಇಂತಹ ಸಂಸ್ಥೆಗಳು ಪೂರಕವಾಗಿದೆ. ಜನಜೀವನವನ್ನು ಸಂಸ್ಕೃತಿಯುತವಾಗಿ ಬದಲಾಯಿಸಲು ಸಹಕಾರಿಯಾಗಿದೆ. ಆದರೆ ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆಯ ಕ್ಷಿಣತೆಯಿಂದ ರಾಷ್ಟ್ರ ಮುನ್ನಡೆಯಲ್ಲಿ ಹಿನ್ನಡೆ ಆಗುತ್ತಿದ್ದು ಇದರಿಂದ ನಾವು ಜಾಗೃತರಾಗಿ ಶಿಕ್ಷಣ ಮೌಲ್ಯವನ್ನು ರೂಢಿಸಿಕೊಳ್ಳಲು ಬದ್ಧರಾಗಬೇಕು ಎಂದು ಸಲಹಿದರು.

ಬೆಳೆಯುವ ಮಕ್ಕಳು ಪುಸ್ತಕದ ದೋಸ್ತಿ ಮಾಡಿದಾಗ ಜ್ಞಾನೋದಯ ಸಾಧ್ಯವಾಗುವುದು. ಅಲ್ಲದೆ ಎಂದೂ ವೈರತ್ವದ ಸಹವಾಸಕ್ಕೆ ಬಲಿಯಾಗದೆ ಬದುಕು ಕೂಡಾ ಹಸನಾಗುವುದು. ಜೊತೆಗೆ ಪ್ರತಿಷ್ಠರ ಆದರ್ಶ ಮತ್ತು ಬಾಳಿಗೆ ಸ್ಪಷ್ಟ ಗುರಿಯೊಂದನ್ನಿರಿಸಿದಾಗ ಜೀವನ ತನ್ನಷ್ಟಕ್ಕೆ ಪ್ರಫುಲ್ಲಿತವಾಗುವುದು. ಆದಶ್ಟು ಮೊಬೈಲ್ ಮತ್ತು ಟಿವಿಗಳಿಂದ ದೂರವಿದ್ದರೆ ಬದುಕೇ ಬಂಗಾರವಾಗುವುದು ಎಂದು ಅಭಿಪ್ರಾಯಪಟ್ಟರು.

ಮುಂಬಯಿನಲ್ಲಿ ಕನ್ನಡಕ್ಕೆ ಶಕ್ತಿ ಕೊಡುವ ನಿತ್ಯೋತ್ಸವ ನಡೆಯುತ್ತದೆ. ಇಲ್ಲಿ ಯಾವುದೇ ಕಾಟಾಚಾರಕ್ಕೆ ಕನ್ನಡದ ಕಾಯಕ ನಡೆಯದೆ ಕನ್ನಢಾಂಭೆಯ ನಿಜಾರ್ಥದ ಸೇವೆ ನಡೆಯುತ್ತಿದೆ. ನನಗೆ ದೊರೆತ ಪ್ರಶಸ್ತಿ ಅಂದರೆ ಮುಂಬಯಿಗೆ ಸೇರಿದ ಒಂದು ಪ್ರಶಸ್ತಿ. ಯಾರೂ ಎಲ್ಲರಿಗೂ ಪ್ರಶಸ್ತಿ ಕೊಡಲು ಸಾಧ್ಯವಿಲ್ಲ. ಪ್ರಶಸ್ತಿಗಳ ಮುಖೇನ ಪ್ರತಿಭೆಯನ್ನು ಗುರುತಿಸುವುದೇ ಹೆಮ್ಮೆ ಪಡುವಂತಹ ಸಂಗತಿ. ಕನ್ನಡ ಸಂಘ ಸಾಂತಾಕ್ರೂಜ್ ನನಗೆ ಇಲ್ಲಿ ಕರೆಸಿ ಮನೆಯ ಗೌರವ ನೀಡಿರುವುದು ನನ್ನ ಭಾಗ್ಯವಾಗಿದೆ. ಪ್ರಶಸ್ತಿ ಕೊಟ್ಟು ಗುರುತಿಸುವಂತಹದ್ದು ಒಂದು ಪ್ರೇರಣಾಶಕ್ತಿಯಾಗಿದೆ ಇಂತಹ ಪ್ರೇರಣೆಯಿಂದ ಮುಂದೆಯೂ ಒಳ್ಳೆಯ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಸನ್ಮಾನಕ್ಕೆ ಉತ್ತರಿಸಿ ಮೋಹನ್ ಮಾರ್ನಾಡ್ ತಿಳಿಸಿದರು.

ಎಲ್.ವಿ ಅಮೀನ್ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಕನ್ನಡದ ಪ್ರೀತಿಯಿಂದ ಹುಟ್ಟಿ ಬಂದ ಈ ಸಂಸ್ಥೆ ಇಂದು ಹಿರಿಯತ್ವದ ಸೇವೆಯಲ್ಲಿ ಸಾಗುತ್ತಿದೆ. ಸಂಘದ ಮುಖಾಂತರ ವಿದ್ಯಾಭ್ಯಾಸ ನೀಡಬೇಕೆಂದು ಎಲ್ಲರ ಉದ್ದೇಶವಾಗಿತ್ತು. ಅದನ್ನೇ ನಾವು ಮುಂದುವರಿಸುತ್ತಿದ್ದೇವೆ. ಈ ಎಲ್ಲಾ ಕಾರ್ಯ ಕೆಲಸಗಳನ್ನು ಮಾಡಲು ಎಲ್ಲಾ ಪದಾಧಿಕಾರಿಗಳ ಪರಿಶ್ರಮ ಅನುಪಮವಾಗಿದೆ. ಸುಮಾರು 40 ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರಿಗೆ ವಿದ್ಯಾರ್ಜನೆ ನೀಡುತ್ತಿದ್ದೇವೆ. ಈ ಪೈಕಿ ಹಲವಾರು ಕಾಲೇಜು ವಿದ್ಯಾಭ್ಯಾಸ ಪೂರೈಸಿ ಒಳ್ಳೆಯ ಜೀವನ ರೂಪಿಸಿರುವುದೇ ಸಂಘದ ಸಾರ್ಥಕತೆಯಾಗಿದೆ. ಇದಕ್ಕೆ ಪ್ರೊತ್ಸಹಿಸಿದ ಎಲ್ಲಾ ದಾನಿಗಳಿಗೆ ನಮ್ಮ ಅಭಿವಂದನೆಗಳು ಎಂದರು.

ನ್ಯಾಯವಾದಿ ಆರ್.ಜಿ ಶೆಟ್ಟಿ ಮತ್ತು ಆಶೋಕ್ ಶೆಟ್ಟಿಪೋವಾಯಿ, ಸಂಘದ ಜತೆ ಕೋಶಾಧಿಕಾರಿ ದಿನೇಶ್ ಬಿ.ಅವಿೂನ್, ಕಾರ್ಯ ಕಾರಿ ಸಮಿತಿ ಸದಸ್ಯರಾದ ಗೋವಿಂದ ಆರ್.ಬಂಗೇರಾ, ಶಿವರಾಮ ಎಂ.ಕೋಟ್ಯಾನ್, ಆರ್.ಪಿ ಹೆಗ್ಡೆ, ಸುಮಾ ಎಂ.ಪೂಜಾರಿ, ಶಾಲಿನಿ ಜಿ.ಶೆಟ್ಟಿ, ವಿಜಯಕುಮಾರ್ ಕೆ.ಕೋಟ್ಯಾನ್, ಲಿಂಗಪ್ಪ ಬಿ. ಅವಿೂನ್, ಉಷಾ ವಿ.ಶೆಟ್ಟಿ, ಹರೀಶ್ ಜೆ.ಪೂಜಾರಿ, ರಾಜಶೇಖರ್ ಎ.ಕೋಟ್ಯಾನ್, ಸದಸ್ಯರನೇಕರು, ಹಿತೈಷಿಗಳು, ಕನ್ನಡಾಭಿಮಾನಿಗಳು ಹಾಜರಿದ್ದು, ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು.
ಸಂಘದ ಸದಸ್ಯೆಯರು, ಮಕ್ಕಳು ನೃತ್ಯಾವಳಿ, ಮನೋರಂಜನಾ ಮತ್ತು ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾದರ ಪಡಿಸಿದ್ದು, ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ `ಮಾರಿಪೂಜೆ' ಯಕ್ಷಗಾನ ಪ್ರದರ್ಶಿಸಿದರು.

ಸಂಘದ ಸದಸ್ಯೆಯರು ಪ್ರಾರ್ಥನೆಯನ್ನಾಡಿದರು. ಸುಜತಾ ಆರ್.ಶೆಟ್ಟಿ ಸ್ವಾಗತಿಸಿ ಸಂಘದ ಕಿರು ಮಾಹಿತಿಯನ್ನಿತ್ತು ಕಾರ್ಯಕ್ರಮ ನಿರೂಪಿಸಿದರು. ಬನ್ನಂಜೆ ರವೀಂದ್ರ ಅವಿೂನ್ ಫಲಾನುಭವಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಕೀಲಾ ಪಿ.ಶೆಟ್ಟಿ ಮತ್ತು ಲಕ್ಷ್ಮೀ ಎನ್.ಕೋಟ್ಯಾನ್ ಅತಿಥಿüಗಳನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್ ವಂದನಾರ್ಪಣೆಗೈದರು.

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal