About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಜ.19: ಹೊರನಾಡಿನಲ್ಲಿ ಕರ್ನಾಟಕದ ವಿಶೇಷವಾಗಿ ತುಳುವರ ಹೆಗ್ಗುರುತು ಮೆರೆಸುವ ಸಮ್ಮೇಳನ ಇದಾಗಿದೆ. ತುಳುನಾಡಿನಲ್ಲಿ ಅತೀವೃಷ್ಠಿ, ಅನಾವೃಷ್ಠಿಗಳ ಮಧ್ಯೆ ಕೃಷಿ ಪ್ರಧಾನ ಜೀವನದ ಸೊಗಡು ಭಾವೀ ಜನಾಂಗಕ್ಕೆ ತಲುಪಿಸುವ ಪ್ರಯತ್ನ ಕೂಡಾ ಹೌದು. ನಮ್ಮ ಸಂಸ್ಕೃತಿ ಸಾರುವ ಇಂತಹ ವಿಶಿಷ್ಟ್ಯ ಕಾರ್ಯಕ್ರಮಗಳು ಮಹಾನಗರದಲ್ಲಿ ನಡೆಯುತ್ತಿರಬೇಕು. ಯಾಕೆಂದರೆ ಸತತ ಏಳು ಬಾರಿ ಸ್ಪರ್ಧೆಗೆ ನಿಂತ ನನಗೆ ಇಲ್ಲಿನ ಜನತೆ ಗೆಲುವಿನಮಾಲೆ ಧರಿಸಿದ್ದಾರೆ. ಆದ್ದರಿಂದ ಓರ್ವ ತುಳುವನಾಗಿ ನನ್ನ ಕ್ಷೇತ್ರದಲ್ಲಿ ಇಂತಹ ಸಮ್ಮೇಳನಗಳನ್ನು ಆಯೋಜಿಸಲು ಹೆಮ್ಮೆಪಡುತ್ತೇನೆ ಎಂದು ಉತ್ತರ ಮುಂಬಯಿ ಲೋಕಸಭಾ ಸಂಸದ ಗೋಪಾಲ ಸಿ.ಶೆಟ್ಟಿ ತಿಳಿಸಿದರು.

ಕಲಾಜಗತ್ತು ಮುಂಬಯಿ ಸಂಸ್ಥೆ ಮುಂಬಯಿನಲ್ಲಿ ಆಯೋಜಿಸಿದ್ದ ದ್ವಿದಿನಗಳ ವಿಶ್ವಮಟ್ಟದ ತುಳು ಸಮ್ಮೇಳನದಲ್ಲಿ (ಬೊಂಬಾಯಿಡ್ ತುಳುನಾಡು) ನಾಡಿನ ಹಿರಿಯ ಸಾಹಿತಿ, ಕವಿ ಡಾ| ಸುನೀತಾ ಎಂ.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿದ್ದು ಗೋಪಾಲ ಶೆಟ್ಟಿ ಮಾತನಾಡಿದರು.

ಕಾಂದಿವಿಲಿ ಪೊಯಿಸರ್ ಇಲ್ಲಿನ ಸಪ್ತಾಹ ಮೈದಾನದಲ್ಲಿ ಕಳೆದ ಶನಿವಾರ ಬೆಳಿಗ್ಗೆ ಆರಂಭಗೊಂಡ ಸಮೇಳನವು ಇಂದಿಲ್ಲಿ ಭಾನುವಾರ ತೆರೆಕಂಡಿದ್ದು ಸಮಾರೋಪ ಸಮಾರಂಭದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಬೋರಿವಿಲಿ ಶಾಸಕ ಸುನೀಲ್ ರಾಣೆ, ಉದ್ಯಮಿ ತೋನ್ಸೆ ಜಯಕೃಷ್ಣ ಶೆಟ್ಟಿ ವೇದಿಕೆಯಲ್ಲಿದ್ದು ತುಳುವಿಗೆ ಅನುಪಮ ಸೇವೆಗೈದು ಸ್ವರ್ಗೀಯ ಗಣ್ಯರ ಸ್ಮಾರಣಾರ್ಥ ಕೊಡಮಾಡಿದ ಸಂಸ್ಮರಣಾ ಪ್ರಶಸ್ತಿಗಳನ್ನು ಹಾಗೂ ಮಹಾನೀಯರಿಗೆ ತೌಳವ ಸಿರಿ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಹಾನಗರದಲ್ಲಿನ ಹೆಸರಾಂತ ಲೇಖಕಿ, ಪತ್ರಕರ್ತೆ ಲತಾ ಸಂತೋಷ ಶೆಟ್ಟಿ ಮುದ್ದುಮನೆ ಅವರ `ಹೊಂಗನಸು' ಕೃತಿಯನ್ನು ಸಂಸದ ಗೋಪಾಲ ಶೆಟ್ಟಿ ಬಿಡುಗಡೆ ಗೊಳಿಸಿ ಅಭಿನಂದಿಸಿದರು.

ಗ್ರಾಮೀಣ ಕ್ರೀಡೆ ಕಬಡ್ಡಿ ಮೂಲಕ ವಿಶ್ವಕ್ಕೆ ಪರಿಚಯಿಸಿಕೊಂಡ ಮಹಾರಾಷ್ಟ್ರ ರಾಜ್ಯದ ಸರ್ವೋತ್ಕೃಷ್ಟ ಪುರಸ್ಕಾರ ಛತ್ರಪತಿ ಶಿವಾಜಿ ಗೌರವಕ್ಕೆ ಪಾತ್ರವಾದ ಒಂದೇ ಮನೆಯ (ತಂದೆ, ತಾಯಿ, ಮಗ) ಜಯ ಎ.ಶೆಟ್ಟಿ, ಛಾಯಾ ಜೆ.ಶೆಟ್ಟಿ ಮತ್ತು ಗೌರವ್ ಜೆ.ಶೆಟ್ಟಿ ಇವರಿಗೆ ಸರಕಾರವು ಈ ವರೆಗೂ ವಾಸ್ತವ್ಯ ಫ್ಲಾ ್ಯಟ್ ನೀಡಲು ವಿಫಲವಾಗಿದೆ. ಇವರಂತೆ ಸಾವಿರಾರು ತುಳುವರ ಸೇವೆಯೂ ಇನ್ನೂ ಗುರುತರವಾಗಿಲ್ಲ. ಮರಾಠಿ ಭೂಮಿಗೆ ತುಳುವರ ಕೊಡುಗೆ ಮಹತ್ತರವಾಗಿದ್ದು ಗೈದಸೇವೆಗೆ ತಕ್ಕ ಫಲಾನುಭ ಪಡೆಯಲು ನಾವು ಎಲ್ಲೋ ವಿಫಲವಾಗಿದ್ದೇವೆ. ಈ ಬಗ್ಗೆ ನಾವು ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ನ್ಯಾಯಯುತ ಫಲಾನುಭ ಪಡೆಯಲು ಸನ್ನದ್ಧರಾಗಬೇಕು. ಇಂತಹ ಸಮ್ಮೇಳನಗಳನ್ನು ಮಾಡಲು ದುಡ್ಡು ಇದ್ದವರು ದುಡ್ಡು, ಸಮಯವಿದ್ದವರು ಸಮಯ ಕೊಡಿ. ಆ ಮೂಲಕ ಮುಂಬಯಿಯಲ್ಲಿ ಕರ್ನಾಟಕದ ಜನತೆಯ ಸೇವೆ ಸರಕಾರವು ಇನ್ನಷ್ಟು ಗುರುತಿಸುವಂತಾಗಬೇಕು. ನಾನೊಬ್ಬ ಜನಪ್ರತಿನಿಧಿಯಾಗಿ ಸರಕಾರದ ಮುಂದೆ ಇಂತಹ ವಿಚಾರ ತರುವುದು ನನ್ನ ಧರ್ಮ. ಆದ್ದರಿಂದ ವಿಶೇಷವಾಗಿ ಬೊರಿವಲಿಯಲ್ಲಿ ವರ್ಷಕ್ಕೆ ಒಂದು ಬಾರಿಯಾದರೂ ಇಂತಹ ತುಳು ಉತ್ಸವಗಳನ್ನು ಇಲ್ಲಿ ಆಯೋಜಿಸಬೇಕು ಎಂದು ತೋನ್ಸೆ ವಿಜಯಕುಮಾರ್ ಶೆಟ್ಟಿ ಮತ್ತು ಎರ್ಮಾಳ್ ಹರೀಶ್ ಶೆಟ್ಟಿ ಅವರನ್ನು ಸಂಸದ ಶೆಟ್ಟಿ ವಿನಂತಿಸಿದರು.

ಸುನೀಲ್ ರಾಣೆ ಮಾತನಾಡಿ ಕಾರವಾರದಿಂದ ಕರ್ನಾಟಕದವರೆಗಿನ ತುಳುವರ ಸಂಸ್ಕೃತಿ, ಪರಂಪರೆ ಬಿಂಬಿಸುವ ಈ ಹಬ್ಬ ಮುಂಬರುವ ಪೀಳಿಗೆಗೆ ಮಾದರಿ. ದಕ್ಷಿಣ ಭಾರತದ ಪರಂಪರೆ ಅನಾವರಣವಾಗುವಲ್ಲಿ ಇದು ಪೂರಕ. ನಿಮ್ಮಲ್ಲಿನ ವಿಚಾರಧಾರೆ ವಿಶೇಷವಾಗಿದ್ದು, ನಿಮ್ಮ ಫಲಾನುಭವಗಳನ್ನು ನಿಶ್ಚಿತರೂಪದಲ್ಲಿ ಸೀಮಿತಿಯೊಳಗೆ ಪರಿಹರಿಸಿಕೊಳ್ಳಲು ನಾನೂ ಪ್ರಯತ್ನಿಸುವೆ. ನಾನೂ ಸರಕಾರದ ಗಮನಕ್ಕೆ ತರುವಲ್ಲಿ ಕಾರ್ಯನಿರತರಾಗುವೆ ಎಂದರು.

 ತುಳುವರು ಹಾಗೂ ಮುಂಬಯಿಗರಿಗೆ ಸುಮಾರು 300 ವರ್ಷಗಳ ಇತಿಹಾಸವಿದೆ. ಮಹಾರಾಷ್ಟ್ರ ಆಳಿದ ಕನ್ನಡದ ರಾಷ್ಟ್ರಕೂಟ ಅರಸರ ಸಾವಂತರಾಗಿದ್ದು, ಶಿಲಾಹಾರುರು. ನಮ್ಮ ಕರಾವಳಿ ಕರ್ನಾಟಕದಿಂದ ಎಂದರೆ ತುಳುನಾಡಿನಿಂದ ನಾಗಪೂಜೆಯನ್ನು ಮಹಾರಾಷ್ಟ್ರಕ್ಕೆ ತಂದರೆಂದು ಹೇಳಲಾಗುತ್ತಿದೆ. 1926ರಲ್ಲಿ ನಾಡಿನ ಭಾಸ್ಕರ, ಆನಂದ, ಸಾಲೆತ್ತೂರು ಎಂಬ ಪರಿಶೋಧಕರು ಮುಂಬಯಿ ವಿಶ್ವವಿದ್ಯಾಲಯಗೆ ಹಿಸ್ಟರಿ ಆಫ್ ತುಳುವ ಎಂಬ ಸಂಶೋಧನಾ ಪ್ರಬಂಧವನ್ನು ಒಪ್ಪಿಸಿ ಪಿಎಚ್‍ಡಿ ಪಡೆದಿದ್ದರು. ಹಾಗೆಯೇ ಸೈಂಟ್ ಝೇವಿಯರ್ಸ್‍ನಲ್ಲಿ ಅವರು ಎಂಎ ಡಿಗ್ರಿ ಗಳಿಸಿಕೊಂಡಾಗ ತುಳುನಾಡಿನ ಕೋಳಿಅಂಕ ಬಗೆಗೆ ಒಂದು ಸಂಪ್ರಬಂಧ ಮಂಡಿಸಿದ್ದರು ಎಂಬ ದಾಖಲೆ ಇದೆ. ಪ್ರಥಮ ತುಳು ಶಬ್ದಕೋಶವನ್ನು ರಚಿಸಿದ ಪುಣೆ ವಿವಿಯ ಡಿಎನ್ ಶಂಕರ ತುಳು ವ್ಯಾಖರಣದ ಬಗ್ಗೆ ಸಂಪ್ರಬಂಧ ರಚಿಸಿದ್ದರು. ಇದನ್ನು ಆಗ್ರದ ಭಾಷಾ ಪರಿಷತ್ತು ಹಿಂದಿ ಭಾಷೆಗೆ ತಂದಿತ್ತು. ಕ್ರೈಸ್ತ ಮಿಶನರಿಗಳು ತುಳು ನಾಡಿಗೆ ಬಂದು ತುಳುವನ್ನು ಕಲಿತು ಸಾಹಿತ್ಯ ರಚನೆ ಮಾಡಿ ತುಳುವನ್ನು ವಿಸ್ತೃಸಿದ್ದರು. ಪಂಚದ್ರಾವೀಡ ಭಾಷೆಗಳಲ್ಲಿ ತುಳು ಕೂಡಾ ಒಂದು. ಆದರೆ ತುಳುನಾಡನ್ನು ಆಳಿದ ರಾಜರು ಈ ಭಾಷೆಗೆ ಆಶ್ರಯ ನೀಡಲಿಲ್ಲ. ಅದ್ದರಿಂದ ತುಳು ಭಾಷೆ ಅನಾಥವಾಯಿತು. ಈ ಭಾಷೆಯನ್ನು ಕರ್ನಾಟಕ ಸರಕಾರ ಗಮನಿಸದೇ ಇರುವುದು ಇನ್ನೂ ಖೇದಕರ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು.

 

ಕಲಾಜಗತ್ತು ಮುಂಬಯಿ ಅಧ್ಯಕ್ಷ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಉಪ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಜೊತೆ ಕಾರ್ಯದರ್ಶಿಗಳಾದ ಚಂದ್ರಾವತಿ ದೇವಾಡಿಗ ಮತ್ತು ಲತೇಶ್ ಎಂ.ಪೂಜಾರಿ, ಕೋಶಾಧಿಕಾರಿ ಜಗದೀಶ ರಾವ್, ಜೊತೆ ಕೋಶಾಧಿಕಾ ರಿಗಳಾದ ಎನ್.ಪೃಥ್ವಿರಾಜ್ ಮುಂಡ್ಕೂರು ಮತ್ತು ಅಶೋಕ್ ಶೆಟ್ಟಿ ಪಾಂಗಾಳ, ಬೊಂಬಾಯಿಡ್ ತುಳುನಾಡ್ ಸಮಿತಿ ಕಾರ್ಯಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ಸಂಚಾಲಕ ಶ್ಯಾಮ ಎನ್.ಶೆಟ್ಟಿ ವೇದಿಕೆಯಲ್ಲಿದ್ದು ಕಲಾಜಗತ್ತು ಮುಂಬಯಿ ಅಧ್ಯಕ್ಷ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಸ್ವಾಗತಿಸಿ ಪುರಸ್ಕೃತರನ್ನು ಮತ್ತು ಅತಿಥಿಗಳನ್ನು ಪರಿಚಯಿಸಿದರು. ಕಲಾಜಗತ್ತು ಕಾರ್ಯಾಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಮತ್ತು ನವೀನ್ ಶೆಟ್ಟಿ ಯೆಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಮುಂಬಯಿನ ಬೋರಿವಲಿ, ವಿೂರಾ ಭಯಂದರ್, ಪುಣೆ ಅಲ್ಲಿನ ಭಜನಾ ಬಳಗಗಳ ಭಜನೆಯೊಂದಿಗೆ ದ್ವಿತೀಯ ದಿನದ ಸಮ್ಮೇಳನ ಆದಿಗೊಂಡಿತು. ಕೃಷ್ಣಾಷ್ಟಮಿ, ವಿಟ್ಲ ಪಿಂಡಿ, ಗೋಪೂಜೆ, ತುಳಸಿ ಪೂಜೆ ಇತ್ಯಾದಿ ಹಬ್ಬಗಳನ್ನು ಆಚರಿಸಲಾಯಿತು. ಬಳಿಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ತುಳು ಹರಿಕಥೆ, ವಿಜಯ ಶೆಟ್ಟಿ ವಿೂರಾರೋಡ್ ಸಂಯೋಜನೆಯಲ್ಲಿ ತುಳು ಭಜನೆ ಸ್ಪರ್ಧೆ, ತುಳುನಾಡ ಕಲಾವಿದರು ಪಾಡ್ದನ, ನೃತ್ಯಾವಳಿಗಳನ್ನು ಸಾದರ ಪಡಿಸಿದರು.

ಅಪರಾಹ್ನ ವಿವಿಧ ವಿಷಯವಾಗಿಸಿ ಜರುಗಿದ ತುಳು ವಿಚಾರಗೋಷ್ಠಿಯಲ್ಲಿ ಡಾ| ಭರತ್ ಕುಮಾರ್ ಪೊಲಿಪು, ಜಯಕರ ಡಿ.ಪೂಜಾರಿ, ಅಶೋಕ ಪಕ್ಕಳ, ದಾಮೋದರ ಇರುವೈಲು, ಸುರೇಂದ್ರ ಕುಮಾರ್ ಹೆಗ್ಡೆ ಮತ್ತು ನವೀನ್ ಶೆಟ್ಟಿ ಯೆಡ್ಮೆಮಾರ್ ಪಾಲ್ಗೊಂಡು ತಮ್ಮ ವಿಚಾರ ಮಂಡಿಸಿದರು. ಅಶೋಕ ಪಕ್ಕಳ ಗೋಷ್ಠಿ ನಿರ್ವಹಿಸಿದರು. ನಂತರ ಚಂದ್ರಾವತಿ ದೇವಾಡಿಗ ತಮ್ಮ ಸಂಯೋಜನೆಯಲ್ಲಿ ಮಕ್ಕಳೋತ್ಸವ ನಡೆಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳಾಗಿ ವಸಾಯಿ-ವಿರಾರ್ ತುಳು ಬಳಗವು ತುಳು ಪೊರ್ಲು ಕಾರ್ಯಕ್ರಮ, ಸಚಿನ್ ಪೂಜಾರಿ ಭಿವಂಡಿ ಬಳಗವು ತುಳುನಾಡ ವೈಭವ ಪ್ರಸ್ತುತ ಪಡಿಸಿದರು. ತುಳು ಜಾನಪದ ನೃತ್ಯ ಬಳಗದಿಂದ ನೃತ್ಯೋತ್ಸವ. ಕಲಾಜಗತ್ತು ಬಾಲ ಕಲಾವಿದರು `ಸುಧನ್ನ ಮೋಕ್ಷ' ಯಕ್ಷಗಾನ ಪ್ರದರ್ಶಿಸಿದರು. ಕೊನೆಯಲ್ಲಿ ಕಲಾಜಗತ್ತು ಕಲಾವಿದರು ತೋನ್ಸೆ ವಿಜಯಕುಮಾರ್ ಶೆಟ್ಟಿ ರಚನೆ ಹಾಗೂ ನಿರ್ದೇಶಿತ `ಈ ಬಾಲೆ ನಮ್ಮವು' ತುಳು ನಾಟಕ ಪ್ರದರ್ಶಿದರು.ಕೃಷ್ಣರಾಜ್ ಸುವರ್ಣ ವಂದನಾರ್ಪಣೆಗೈದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal