About Us       Contact

 

(ವರದಿ / ಚಿತ್ರ: ರೋನ್ಸ್ ಬಂಟ್ವಾಳ್)
ಮುಂಬಯಿ, ಜ.14: ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಗಳಿಂದ ಇದೀಗಲೇ ಶ್ರೀಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. 49ನೇ ದಿನದಂದು ಕಟೀಲು ಇಲ್ಲಿನ ಬ್ರಹ್ಮವನದಲ್ಲಿ (ಕುದುರು) ಕೋಟಿ ಯಜ್ಞ ನಾಗಮಂಡಲವು ನಡೆಯಲಿದೆ. ಈ ಮಹಾತ್ಕಾರ್ಯದಲ್ಲಿ ತುಳುನಾಡು ನಾಮಾಂಕಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಭಕ್ತಾಧಿಗಳು ಕಟೀಲು ಅಮ್ಮನ ಸನ್ನಿಧಿಗೆ ಬರಬೇಕು. ತುಳುವರ ಉಳ್ಳಾಳ್ತಿ ದೇವಿಯ ಸನ್ನಿಧಿಗೆ ಆಗಮಿಸಿ ತಾಯಿ ಸ್ವರೂಪಿ ಮಾತೆಗೆ ಆರಾಧಿಸಬೇಕು. ಇದು ತಮ್ಮೆಲ್ಲರ ಸ್ವಯಂ ಸನ್ನಿಧಾನದ ಬ್ರಹ್ಮಕಲಶೋತ್ಸವ ಇದಾಗಿದೆ ಎಂದು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು ಇದರ ಅನುವಂಶಿಕ ಅರ್ಚಕ ಶ್ರೀ ಅನಂತ ಪದ್ಮನಾಭ ಆಸ್ರಣ್ಣ ಕಟೀಲು ತಿಳಿಸಿದರು.

ಇಂದಿಲ್ಲಿ ಮಂಗಳವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ವತಿಯಿಂದ ಆಯೋಜಿಸಲಾಗಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋ ತ್ಸವ ಪೂರ್ವ ಸಿದ್ಧತಾಸಭೆ ಉದ್ದೇಶಿಸಿ ಆಸ್ರಣ್ಣ ಮಾತನಾಡಿದರು. ಮುಂದುವರಿದು, ಸುಮಾರು ಎರಡು ವಾರಗಳ ಕಾಲ ನಿತ್ಯನಿರಂತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಸಂಪನ್ನ ಗೊಳ್ಳಲಿದ್ದು, ಸುಮಾರು 12ಲಕ್ಷ ಭಕ್ತರ ಆಗಮನದ ನಿರೀಕ್ಷೆಯಿದೆ. ಸ್ವರ್ಣ ಧ್ವಜಸ್ತಂಭ ಸಮರ್ಪಣೆ, ಭೂದಾನದ ಮೂಲಕ ಕ್ಷೇತ್ರಕ್ಕೆ ಸುಮಾರು 15 ಎಕ್ರೆ ಶಾಸ್ವತ ಜಾಗದ ವ್ಯವಸ್ಥೆ, ವಿವಿಧ ಜೀರ್ಣೋದ್ಧಾರಗಳು, ಭಕ್ತರ ಅನುಕೂಲತೆಗಾಗಿ ಹಲವಾರು ಸೌಲಭ್ಯಗಳ ಯೋಜನೆಗಳು ಹಾಕಿರುವೆವು. ಅನ್ನದಾನದೊಂದಿಗೆ ಭೂದಾನದ ಸೇವೆಯನ್ನು ಒದಗಿಸುವುದು ದೇವರಿಗೆ ಹಿತಕಾರಿ ಆಗುವುದು ಮತ್ತು ಇದು ಭಕ್ತರ ಹಿತಕ್ಕಾಗಿನ ಉದ್ದೇಶ ನಮ್ಮದಾಗಿದೆ. ವಿವಿಧತೆಯಲ್ಲಿ ಏಕತೆಯುಳ್ಳ ಬಿಲ್ಲವರೂ ಮಾತೆಗೆ ಸಾಮಿಪ್ಯರು. ಆದುದರಿಂದ ತಮ್ಮೆಲ್ಲರ ಆಗಮನವೇ ಅತ್ಯಂತ ಪ್ರಧಾನವಾದುದು. ಕಟೀಲಮ್ಮನ ವೈಭವಕ್ಕೆ ಮೆರುಗು ನೀಡಿ ತಮ್ಮೆಲ್ಲರ ಇತ್ಯಾರ್ಥಗಳನ್ನು ಈಡೇರಿಸುವಲ್ಲಿ ಸೇವಾ ನಿರತರಾಗಿರಿ. ತಾವೆಲ್ಲರೂ ಸ್ವಯಂ ಸೇವಕರಾಗಿ ಪಾಲ್ಗೊಂಡು ತಾಯಿ ದುರ್ಗಾಂಬೆಯ ಕೃಪೆಗೆ ಪಾತ್ರರಾಗುವಂತೆ ತಿಳಿಸಿದರು.

ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಸಾರಥ್ಯ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಮತ್ತು ಕಟೀಲು ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯ ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿ ಕಾರ್ಯದರ್ಶಿ ಕರ್ನಿರೆ ವಿಶ್ವನಾಥ ಶೆಟ್ಟಿ, ಸಂಘಟಕ ಕರ್ನೂರು ಮೋಹನ್ ರೈ, ಕಟೀಲು ಸಮಿತಿ ಅಧ್ಯಕ್ಷ ಕಾರ್ಯದರ್ಶಿ ಸುಬ್ರಹ್ಮಣ್ಯ ಪ್ರಸಾದ್ ಭಟ್, ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷ ಶ್ರೀನಿವಾಸ ಆರ್.ಕರ್ಕೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ವೇದಿಕೆಯಲ್ಲಿ ಆಸೀನರಾಗಿದ್ದರು.

ಐಕಳ ಹರೀಶ್ ಮಾತನಾಡಿ ಕಟೀಲು ದೇವಿಯ ಭಕ್ತರಲ್ಲಿ ಬಿಲ್ಲವರ ಪಾತ್ರವೂ ಹಿರಿದಾಗಿದೆ. ಬಿಲ್ಲವರು ಅನ್ಯೋನ್ಯತೆಗೆ ಪೂರಕರಾಗಿದ್ದು, ಎಲ್ಲಾ ಕೆಲಸಗಳಲ್ಲಿ ತಮ್ಮದಾದ ಸಹಯೋಗ ನೀಡಿ ಪ್ರೊತ್ಸಾಹಿಸುವವರು. ಆದುದರಿಂದ ಕಟೀಲುನಲ್ಲಿ ಈ ಬಾರಿ ನಡೆಸಲುದ್ದೇಶಿಸಿದ ಬ್ರಹ್ಮಕಲಶೋತ್ಸವದ ಪರ್ವಕಾಲದಲ್ಲಿ ಮುಂಬಯಿ ಭಕ್ತರ ಹೆಸರು ಶ್ರೀಕ್ಷೇತ್ರದಲ್ಲಿ ಶಾಶ್ವತವಾಗಿ ಉಳಿಯುವಂತಹ ಸೇವೆ ನಮ್ಮದಾಗಬೇಕಾಗಿದೆ. ಮಾತೆಯ ಭಕ್ತರಲ್ಲಿನ ಸೇವಾಪೂರೈಕೆಗೆ ಇದೊಂದು ಅವಕಾಶವಾಗಿದೆ ಅನ್ನುತ್ತಾ ದಿನಾ ಸೇವಾರ್ಥಿಗಳಿಗೆ ಗುರುತುಚೀಟಿ ನೀಡುವ ವ್ಯವಸ್ಥೆಯನ್ನೂ ಮಾಡಿಸಿ ಕೊಡುವೆವು ಎಂದರು.

ಚಂದ್ರಶೇಖರ್ ಪೂಜಾರಿ ಮಾತನಾಡಿ ಐಕಳ ಹರೀಶ್ ಹಿಡಿದ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಸಶಕ್ತರು. ಅವರ ಹಸ್ತದಿಂದ ಎಲ್ಲವೂ ಫಲಿಸುವುದು. ಮುಂಬಯಿನಲ್ಲಿ ಐಕಳ ಹರೀಶ್ ಅಂದರೆ ಕುಬೇರನೆಂದೇ ನಾವು ತಿಳಿದಿದ್ದು ಅರ್ಥಾತ್ ಅವರು ಎಲ್ಲವನ್ನೂ ಸುಲಭವಾಗಿ ಸಿದ್ಧಿಸುವ ಶಕ್ತಿವುಳ್ಳವರು. ಶ್ರೀ ದುರ್ಗಾಪರಮೇಶ್ವರೀ ಅಮ್ಮನ ಪರಮಭಕ್ತರಾಗಿರುವ ಬಿಲ್ಲವರು ತಮ್ಮೆಲ್ಲರ ಆಶಯದಂತೆ ಇಂತಹ ಪುಣಾಧಿ ಕೆಲಸಕ್ಕೆ ನಮ್ಮ ಶಕ್ತ್ಯಾಮನುಸಾರ, ಸೇವಾರ್ಥಿಗಳಾಗಿಯೂ ನಮ್ಮ ಕೈಯಲ್ಲಾದ ಸೇವೆ ಪೂರೈಸುವೆವು ಎಂದು ಭರವಸೆಯನ್ನಿತ್ತರು.

ಅಸೋಸಿಯೇಶನ್‍ನ ಗೌ| ಜೊತೆ ಕಾರ್ಯದರ್ಶಿಗಳಾದ ಕೇಶವ ಕೆ.ಕೋಟ್ಯಾನ್, ರವೀಂದ್ರ ಎ.ಶಾಂತಿ, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ನ್ಯಾ| ಎಸ್.ಬಿ ಅವಿೂನ್, ಗಂಗಾಧರ್ ಜೆ.ಪೂಜಾರಿ, ಸಮಾಜ ಸೇವಕಿಯರಾದ ಕೃಪಾ ಭೋಜರಾಜ್ ಕುಳಾಯಿ, ಸುಧಾ ಎಲ್.ವಿ ಅಮೀನ್, ಜಯಲಕ್ಷ್ಮೀ ಚಂದ್ರಶೇಖರ್ ಪೂಜಾರಿ, ಭವನದ ವ್ಯವಸ್ಥಾಪಕರಾದ ಭಾಸ್ಕರ್ ಟಿ.ಪೂಜಾರಿ, ಬಿ.ಸಿ ಸಾಲ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಉದ್ಯಮಿ ಪ್ರದೀಪ್ ಪೂಜಾರಿ ತಮ್ಮ ಸೇವಾ ಮೊತ್ತವನ್ನು ಆಸ್ರಣ್ಣರಿಗೆ ಹಸ್ತಾಂತರಿಸಿ ಜ.30ರಂದು ನೆರವೇರಲಿರುವ ಕಟೀಲು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಾರೈಸಿದರು.

ಆರಂಭದಲ್ಲಿ ಭವನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಷ್ಠಾಪಿತ ಮಂದಿರದಲ್ಲಿ ಪೂಜೆಗೈದು ಕೋಟಿಚೆನ್ನಯ ಮತ್ತು ಕಾಂತಬಾರೆ ಬೂದಬಾರೆ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸಾಂಕೇತಿಕವಾಗಿ ಸಭೆಗೆ ಚಾಲನೆಯನ್ನೀಡಲಾಯಿತು. ಪುರೋಹಿತ ರವೀಂದ್ರ ಎ.ಶಾಂತಿ ಪೂಜೆ ನೆರವೇರಿಸಿದರು. ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಶಾಂತಿ ಸ್ವಾಗತಿಸಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಆಸ್ರಣ್ಣರು ಶ್ರೀ ಭ್ರಮರಾಂಭಿಕೆಯ ಗಂಧಪ್ರಸಾದ ನೀಡಿ ನೆರೆದ ಸದ್ಭಕ್ತರನ್ನು ಹರಸಿದರು.

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal