About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.11: ಬಂಟರಾದ ನಾವು ಸಂಸೃತಿವಂತರು, ಸತ್ಯ, ಧರ್ಮ, ನಿಷ್ಠೆಯಲ್ಲಿ ಅಪಾರ ನಂಬಿಕೆಯುಳ್ಳವರು. ನಮ್ಮ ಸಂಸ್ಕಾರ, ಸಂಪ್ರದಾಯ, ಆಚಾರ ವಿಚಾರಗಳನ್ನು ಹಳೆಯ ಪೂರ್ವಜರಿಂದ ಇಂದಿನ ವರೆಗೂ ರಕ್ಷಿಸಿ, ಪೊಷಿಸಿಕೊಂಡವರು. ಅಪಾರ ಪರಿಶ್ರಮ, ಸಮರ್ಪಣಾಭಾವದಿಂದ ಸಾಧನಾಮಟ್ಟಕ್ಕೆ ತಲುಪಿದ ನಾವು ಬಂಟ ಸಮಾಜದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಪಡಲೇಬೇಕು. ನಮ್ಮ ಜೊತೆಗೆ ಇತರರ ಬದುಕಿಗೂ ನೆರವಾಗುತ್ತಿರುವ ಬಂಟರ ಹೃದಯವಂತಿಕೆಗೆ ಯಾರೂ ಸರಿಸಾಟಿಯಿಲ್ಲ. ಬಂಟ ಸಮುದಾಯದ ಅಭಿವೃದ್ಧಿಗಾಗಿ ಬಂಟ ಸಂಘ-ಸಂಸ್ಥೆಗಳು ಕೈಗೊಳ್ಳುತ್ತಿರುವ ಕಾರ್ಯ ಯೋಜನೆಗಳು ಅಭಿನಂದನೀಯ ಎಂದು ಜವಾಬ್ (ಜುಹೂ ಅಂಧೇರಿ ವರ್ಸೋವಾ ವಿಲೇಪಾರ್ಲೆ ಎಸೋಸಿಯೇಶನ್ ಆಫ್ ಬಂಟ್ಸ್) ಸಂಸ್ಥೆಯ ಅಧ್ಯಕ್ಷ ಸಿಎ| ಐ.ಆರ್ ಶೆಟ್ಟಿ ತಿಳಿಸಿದರು.

ಬೃಹನ್ಮುಮುಂಬಯಿನ ಅಂಧೇರಿ ಪರಿಸರದಲ್ಲಿನ ಬಂಟರ ಸಾಂಸ್ಕೃತಿಕ ವೇದಿಕೆ ಎಂದೇ ಹೆಸರಾಂತ ಜವಾಬ್ ತನ್ನ 23ನೇ ವಾರ್ಷಿಕ ಸ್ನೇಹಮಿಲನ ಇಂದಿಲ್ಲಿ ಶನಿವಾರ ಅಂಧೇರಿ ಪಶ್ಚಿಮದ ಸಮರ್ಥ್ ನಗರದಲ್ಲಿನ ಲೋಕಂಡ್‍ವಾಲ ಕಾಂಪ್ಲೆಕ್ಸ್ ರೆಸಿಡೆನ್ಸಿ ಮೈದಾನದಲ್ಲಿ ಅದ್ದೂರಿಯಾಗಿ ಸಂಭ್ರಮಿಸಿದ್ದು ದೀಪ ಬೆಳಗಿಸಿ ಸ್ನೇಹಮಿಲನ ಸಮಾರಂಭ ಉದ್ಘಾಟಿಸಿ ಐ.ಆರ್ ಶೆಟ್ಟಿ ಮಾತನಾಡಿದರು.

ಜವಾಬ್ ಸ್ಥಾಪಕಾಧ್ಯಕ್ಷ ದಿವಾಕರ್ ಎಂ.ಶೆಟ್ಟಿ ಮಾತನಾಡಿ ಬಂಟ ಸಮುದಾಯದ ಸ್ಥಾನೀಯ ಸಮಾನ ಮನಸ್ಕರಾಗಿದ್ದ ನಾವು ನೂರು ಜನರನ್ನೊಳಗೊಂಡು ಜವಾಬ್ ಸಂಸ್ಥೆ ರೂಪಿಸಿದ್ದು ಇದು ಈಗ ಸಾವಿರ ಸದಸ್ಯರ ಪುಷ್ಫೋದ್ಯಾನದ ಮಧ್ಯೆ ಹೆಮ್ಮರವಾಗಿ ಬೆಳೆಯುತ್ತಿದೆ. ಯೌವ್ವನತ್ವದ ಅಂಚಿನಲ್ಲಿ ಸಾಗುತ್ತಿರುವ ಸಂಸ್ಥೆಗೆ ಸ್ವಂತದ ನಿವಾಸದಂತಿರುವ (ಕಛೇರಿ) ಜಾಗದ ಅವಶ್ಯವಿದೆ. ಆವಾಗಲೇ ಸಂಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಲು ಸಾಧ್ಯವಾಗುವುದು. ನಮ್ಮ ಮಕ್ಕಳು, ಯುವಜನತೆಯಲ್ಲಿ ನಮ್ಮ ಸಂಸ್ಕೃತಿ, ಪರಂಪರೆಗಳನ್ನು ರೂಢಿಸಿ ಈ ಸಂಸ್ಥೆಯನ್ನು ಪ್ರತಿಯೊಂದು ಬಂಟರ ಮನೆಗೆ ತಲುಪುವಂತೆ ಮಾಡಬೇಕು. ಆ ಮೂಲಕ ಸದಸ್ಯತ್ವದಿಂದ ಬಂಟ ಒಗ್ಗಟ್ಟನ್ನು ರೂಪಿಸಬೇಕು ಎಂದರು.

 

 

ಬಂಟ ಸಂಸ್ಕೃತಿ ಸಾರುವ ಮೆರವಣಿಗೆಯಲ್ಲಿ ಕೊಂಬು ಕಹಳೆ, ವಾದ್ಯಘೋಷಗಳ ನಿನಾದದೊಂದಿಗೆ ತುಳುನಾಡ ಸತ್ಯದೈವ ಜುಮಾದಿ `ಭಂಡಾರ'ವನ್ನು ಬಂಟ ಸಂಪ್ರದಾಯದಂತೆ ವೇದಿಕೆಗೆ ಬರಮಾಡಿ ಕೊಂಡ ಐ.ಆರ್ ಶೆಟ್ಟಿ ನಂತರ ಪದಾಧಿಕಾರಿಗಳನ್ನೊಳಗೊಂಡು ಸಮಾರಂಭಕ್ಕೆ ಚಾಲನೆ ನೀಡಿದರು. ಬಳಿಕ ಜವಾಬ್ ಸದಸ್ಯರಾಗಿದ್ದು ದಾಂಪತ್ಯ ಸ್ವರ್ಣ ಸಂವತ್ಸರಗಳನ್ನು ಪೂರೈಸಿದ ಶಿರೋಮಣಿ ಆನಂದ ಪಿ.ಶೆಟ್ಟಿ, ಸುನೀತಾ ರಘುವೀರ ಎ.ಶೆಟ್ಟಿ ಮತ್ತು ಭವಾನಿ ರಘುರಾಮ ಕೆ.ಶೆಟ್ಟಿ ದಂಪತಿಗಳನ್ನು ಸಮಾರಂಭದಲ್ಲಿ ಶಾಲು ಹೊದಿಸಿ, ಸ್ಮರಣಿಕೆ, ಹೂಗುಚ್ಚ ನೀಡಿ ಸನ್ಮಾನಿಸಲಾಯಿತು. ಹಾಗೂ ಉಪಸ್ಥಿತ ವಿವಿಧ ಸಂಸ್ಥೆಗಳ ಗಣ್ಯರನ್ನು ಐ.ಆರ್ ಶೆಟ್ಟಿ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು.
ಜವಾಬ್‍ನ ಜತೆ ಕಾರ್ಯದರ್ಶಿ ಪ್ರವೀಣ್ ಆರ್.ಶೆಟ್ಟಿ, ಜತೆ ಕೋಶಾಧಿಕಾರಿ ಹೆಚ್. ಶೇಖರ್ ಹೆಗ್ಡೆ, ಸಾಂಸ್ಕೃತಿಕ ಸಮಿತಿ ಕಾರ್ಯಧ್ಯಕ್ಷ ನ್ಯಾಯವಾದಿ ಗುಣಕರ್ ಡಿ.ಶೆಟ್ಟಿ, ಯುವ ವಿಭಾಗದ ಕಾರ್ಯಧ್ಯಕ್ಷೆ ರೇಷ್ಮ ಆರ್.ಶೆಟ್ಟಿ, ಜವಾಬ್‍ನ ನಿಕಟಪೂರ್ವಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ನ್ಯಾ| ಆನಂದ್ ಪಿ. ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ರಮೇಶ್ ಯು.ಶೆಟ್ಟಿ, ಎನ್.ಸಿ ಶೆಟ್ಟಿ, ಶಂಕರ್ ಟಿ.ಶೆಟ್ಟಿ, ವಿಶ್ವನಾಥ ಎಸ್.ಹೆಗ್ಡೆ, ರಘು ಎಲ್.ಶೆಟ್ಟಿ ಪ್ಯಾಪಿಲಾನ್, ನಾಗೇಶ್ ಎನ್.ಶೆಟ್ಟಿ, ಬಿ.ಶಿವರಾಮ ನಾೈಕ್ ಸೇರಿದಂತೆ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು, ಸದಸ್ಯರನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು

ಶ್ರೀ ಮಹಾಗಣಪತಿಗೆ ಸ್ತುತಿಸಿ ದೀಪ ಬೆಳಗಿಸಿ ಸಾಂಸ್ಕೃತಿಕ ವೈಭವಕ್ಕೆ ಚಾಲನೆ ನೀಡಲಾಯಿತು. ಸದಸ್ಯರು ಮತ್ತು ಮಕ್ಕಳ ನೃತ್ಯವೈಭವಗಳೊಂದಿಗೆ ಸ್ನೇಹಮಿಲನ ಅನಾವರಣ ಗೊಂಡಿತು. ಧ್ರುವ್ ಸಿ.ಶೆಟ್ಟಿ ಮತ್ತು ಸೌಮ್ಯ ಸಿ.ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಶಂಕರ್ ಟಿ.ಶೆಟ್ಟಿ ಜುಮಾದಿ ವಿಧಿ ನಡೆಸಿದರು.

ಜ್ಯೋತಿ ಆರ್.ಶೆಟ್ಟಿ ಮತ್ತು ನಳಿನಿ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ರಮೇಶ್ ಎನ್.ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಗೌ| ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ಕಡಂದಲೆ ಕಾರ್ಯಚಟುವಟಿಕೆ ತಿಳಿಸಿದರು. ಕವಿತಾ ಐ.ಆರ್ ಶೆಟ್ಟಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಗೌ| ಕೋಶಾಧಿಕಾರಿ ಟಿ.ವಿಶ್ವನಾಥ್ ಶೆಟ್ಟಿ ವಂದಿಸಿದರು. ಜವಾಬ್ ಸಂಸ್ಥೆಯ ಮಾಜಿ ಪದಾಧಿಕಾರಿ, ಮನೀಷ್ ಕ್ಯಾಟರರ್ಸ್‍ನ ವಾಮನ ಎಸ್.ಶೆಟ್ಟಿ ಬಂಟ ಪರಂಪರೆಯ ತುಳುನಾಡ ಊಟೋಪಚಾರ ಸಿದ್ಧಪಡಿಸಿ ಮಾತೃ ಸಂಸ್ಕೃತಿಯ ಸ್ವಾಧಿಷ್ಟತೆ ಸವಿಸಿದರು.

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal