About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ : ಜೋಕಟ್ಟೆ ಅವರ ಒಟ್ಟು ಸಾಹಿತ್ಯ ಸೇವೆ ಅವರ ವ್ಯಕ್ತಿತ್ವದಂತೆ ಉತ್ತುಂಗವಾಗಿದೆ. ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ಆಳವಾದ ಸಾಹಿತ್ಯ ಕೃಷಿ ಮಾಡಿ ಸಮಾಜದ ಕುಂದು ಕೊರತೆಗಳಿದ್ದರೆ ಸಮಾಜಕ್ಕೆ ತಿಳಿಸುವ ಕಾಯಕದಲ್ಲಿ ಜೋಕಟ್ಟೆ ತೊಡಗಿಸಿಕೊಂಡಿದ್ದಾರೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸಾಹಿತಿಗಳು ಕಾರಣರಾಗಬೇಕು. ಅಂತಹ ಮಹಾತ್ಕಾರ್ಯ ಜೋಕಟ್ಟೆಯಿಂದ ನಡೆಯುತ್ತದೆ ಎಂದು ಕರ್ನಾಟಕ ಸಂಘ ಮುಂಬಯಿ ಉಪಾಧ್ಯಕ್ಷ, ಸೋಮಯ್ಯ ಕಾಲೇಜ್‍ನ ನಿವೃತ್ತ ಪ್ರಾಂಶುಪಾಲ, ನಾಡಿನ ಹಿರಿಯ ವಿದ್ವಾಂಸ ಡಾ| ಸುಧೀಂದ್ರ ಕೆ.ಭವಾನಿ ನುಡಿದರು.

ಆದಿತ್ಯವಾರ ಸಂಜೆ ಬಾಂದ್ರಾ ಖೇರ್‍ವಾಡಿ ಇಲ್ಲಿನ ರಾಜಯೋಗ್ ಹೊಟೇಲು ಸಭಾಗೃಹದಲ್ಲಿ ಮಹಾನಗರದ ಪತ್ರಕರ್ತ, ಲೇಖಕ ಶ್ರೀನಿವಾಸ ಜೋಕಟ್ಟೆ ಅವರ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ| ಭವಾನಿ ಮಾತನಾಡಿದರು.

ಜೋಕಟ್ಟೆ ಅವರ ಆದಿತ್ಯ ಪಬ್ಲಿಕೇಷನ್ಸ್ ಬೆಳಗಾವಿ ಪ್ರಕಾಶಿತ `ಮಂಗಳೂರು ಪತ್ರ' 32ನೇ ಕೃತಿಯನ್ನು ಸಾಫಲ್ಯ ಸಮಾಜದ ಧುರೀಣ, ಹೊಟೇಲು ಉದ್ಯಮಿ ಸದಾನಂದ ಸಫಲಿಗ, `ಶಹರದ ಕಟ್ಟೆ' 33ನೇ ಕೃತಿಯನ್ನು ಐಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಳ್, ಸುಂದರ ಪ್ರಕಾಶನ ಬೆಂಗಳೂರು ಪ್ರಕಟಿತ `ನೇರ ಪ್ರಸಾರ ಮತ್ತು ಚಿಕ್ಕ ವಿರಾಮ' 34ನೇ ಕೃತಿಯನ್ನು ಮುದ್ರಕ ವಾಮನ್ ಅದ್ಯಪಾಡಿ ಹಾಗೂ ಸ್ವರ ಪ್ರಿಂಟ್ ಆ್ಯಂಡ್ ಪಬ್ಲಿಕೇಷನ್ ಬೆಂಗಳೂರು ಪ್ರಕಟಿತ `ನಾಗತಿಹಳ್ಳಿ ಪತ್ರಿಕಾಮೇಷ್ಠಿ' 35ನೇ ಕೃತಿಯನ್ನು ನ್ಯಾಯವಾದಿ ರಾಘವ ಎಂ. ಬಿಡುಗಡೆ ಗೊಳಿಸಿದರು. ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು, ಹೆಸರಾಂತ ಕಥೆಗಾರ ರಾಜೀವ ನಾರಾಯಣ ನಾಯಕ, ಪ್ರಸಿದ್ಧ ಕವಿ, ನಾಟಕಕಾರ ಸಾ.ದಯಾ (ದಯಾನಂದ್ ಸಾಲ್ಯಾನ್) ಕ್ರಮವಾಗಿ ಕೃತಿ ಪರಿಚಯಗೈದರು.
ಸದಾನಂದ ಸಫಲಿಗ ಮಾತನಾಡಿ ಜೋಕಟ್ಟೆ ಅವರ ಬರವಣಿಗೆಯ ಕೆಲಸ ಬಹಳ ವರ್ಷಗಳಿಂದ ತಿಳಿಯುತ್ತಾ, ಓದುತ್ತಾ ಬಂದವ. ಆದುದರಿಂದ ನಾನೊಓರ್ವ ಅವರ ಅಭಿಮಾನಿಯೂ ಹೌದು. ರಾಜಯೋಗ್ ಸಭಾಗೃಹದಲ್ಲಿ ಈ ಕಾರ್ಯಕ್ರಮ ನಡೆಸಿದ ಶ್ರೀನಿವಾಸ ಜೋಕಟ್ಟೆ ಅವರ ಬದುಕಿನಲ್ಲಿ ಇಂದಿನಿಂದ ರಾಜಯೋಗ ಕೂಡಿಬರಲಿ ಎಂದರು.

ಜೋಕಟ್ಟೆ ಬರವಣಿಗೆಯ ಹಿಂದಿನ ಪ್ರಾಮಾಣಿಕತೆ ನಾನು ಅನೇಕ ದಶಕಗಲಿಂದ ಕಂಡವ. ಅವರ ಇಂತಹ ಮೌಲಿಕ ಕೃತಿಗಳು ಇಂಗ್ಲೀಷ್‍ಗೆ ಅನುವಾದ ಆಗುವ ಅವಶ್ಯಕತೆ ಇದೆ ಎಂದÀು ವಿಕ್ರಾಂತ್ ಉರ್ವಾಳ್ ತಿಳಿಸಿದರು.

ವಾಮನ್ ಅದ್ಯಪಾಡಿ ಮಾತನಾಡಿ ಕಳೆದ 38 ವರ್ಷಗಳಿಂದ ಮುದ್ರಣಾಲಯದಲ್ಲಿ ಅಕ್ಷರ ಜೋಡಣೆ ಮಾಡುತ್ತಾ ಬಂದ ನನ್ನನ್ನು ಓರ್ವ ಅತಿಥಿಯಾಗಿ ಆಹ್ವಾನಿಸಿ ಪುಸ್ತಕ ಬಿಡುಗಡೆ ಮಾಡಲು ಕರೆದಿರುವುದು ನನ್ನ ಭಾಗ್ಯ. ಇದು ಜೋಕಟ್ಟೆ ಅವರ ಹೃದಯ ಶ್ರೀಮಂತಿಕೆ ತೋರಿಸುತ್ತದೆ ಎಂದರು.

ಸುಮಾರು 36 ವರ್ಷ ಕಾಲ ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಪತ್ರಗಳನ್ನು ಕೃತಿರೂಪದಲ್ಲಿ ತಂದಿದ್ದಾರೆ. ಜೋಕಟ್ಟೆ ಅವರು ನಾಗತಿಹಳ್ಳಿ ಚಂದ್ರಶೇಖರ ಮತ್ತು ಶ್ರೀನಿವಾಸರ ಸ್ನೇಹ ಕೇವಲ ಹೇಳಿ ಕೊಳ್ಳುವಂತದ್ದು, ಡಂಬಾಬಾರದ್ದು ಅಲ್ಲ ಎಂಬುವುದನ್ನು ಸಾಬೀತು ಪಡಿಸುತ್ತದೆ ಈ ಕೃತಿ. ಇಲ್ಲಿ ಸಾಹಿತ್ಯದ ಜಿಜ್ಞಾಸೆಯಿಲ್ಲ. ಎರಡು ಸಾಹಿತಿಗಳು ಒಬ್ಬರನೊಬ್ಬರು ಪರಸ್ಪರ ಬೆಳೆಯುತ್ತಾ ಬೆಳೆಸಿಕೊಳ್ಳುವ ಪರಿಯನ್ನು ನಾವೆಲ್ಲ ಇಲ್ಲಿ ಕಾಣಬಹುದು ಎಂದು ರಾಘವ ತಿಳಿಸಿದರು.

ಜೋಕಟ್ಟೆ ಅವರು ಮಂಗಳೂರಲ್ಲಿದ್ದಾಗ 4 ವರ್ಷ ಕಾಲ ಕರ್ನಾಟಕ ಮಲ್ಲಕ್ಕೆ ಬರೆದ ಪತ್ರ ಲೇಖನಗಳ ಸಂಕಲನ. ಅಂದಿನ ಆ ನಾಲ್ಕು ವರ್ಷಗಳ ಕರಾವಳಿಯ ವಸ್ತುಸ್ಥಿತಿ ನಮ್ಮ ಕಣ್ಣೆದುರಿಗೆ ಇಡುವ ಕೃತಿ. ಒಂದು ವ್ಯವಸ್ಥೆಯ ದೌರ್ಬಲ್ಯವನ್ನು ನಮ್ಮ ಮುಂದೆ ಇಟ್ಟು ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ ಈ ಕೃತಿ ಎಂದು ಈಶ್ವರ ಅಲೆವೂರು ತಿಳಿಸಿದರು.

ರಾಜೀವ ನಾಯಕ್ ಮಾತನಾಡಿ ನೇರ ಕಥೆ ಹೇಳುವ ಶೈಲಿ ಜೋಕಟ್ಟೆ ಅವರ ಕವನ ಶೈಲಿಯ ವೈಶಿಷ್ಟ್ಯವಾಗಿದೆ. ನಿರಂತರ ಬರವಣಿಗೆಯ ಮೂಲಕ ಒಳನಾಡಿನ ಸಾಹಿತಿಗಳನ್ನು ಒಳನಾಡಿನ ಸಾಹಿತಿಗಳು ಮುಂಬಯಿಯತ್ತ ನೋಡುವಂತೆ ಮಾಡಿದ ಜೋಕಟ್ಟೆ ಅವರಿಗೆ ಶ್ರೇಷ್ಠತೆಯ ವ್ಯಸನಯಿಲ್ಲ ಎಂದರು.
ಕೃತಿಕರ್ತ ಶ್ರೀನಿವಾಸ ಜೋಕಟ್ಟೆ ಮಾತನಾಡಿ ಇಷ್ಟೊಂದು ಕೃತಿಗಳು ಹೊರಬರಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲರನ್ನೂ ವಂದಿಸುವೆ ಎಂದರು.

ಮಹಾನಗರದಲ್ಲಿನ ಬರಹಗಾರರು, ಕವಿಗಳು, ಲೇಖಕರು ಸೇರಿದಂತೆ ಅನೇಕ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದು ಜೋಕಟ್ಟೆಗೆ ಅಭಿನಂದಿಸಿದರು. ಶ್ರೀಧರ್ ರಾವ್ ಮತ್ತು ಜಯಲಕ್ಷ್ಮೀ ಎಸ್.ಜೋಕಟ್ಟೆ ಅತಿಥಿಗಳಿಗೆ ಪುಷ್ಫಗುಪ್ಚ, ಕೃತಿಗಳನ್ನಿತ್ತು ಗೌರವಿಸಿದರು. ನಿಖಿತಾ ಸದಾನಂದ್ ಅವಿೂನ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕು| ಸುಪ್ರಿಯಾ ಎಸ್.ಉಡುಪ ಕೃತಜ್ಞತೆ ಅರ್ಪಿಸಿದರು.

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal