About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಜ.04: ನನ್ನ ಗುರುಗಳಾದ ಉಚ್ಚಿಲರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಮರಣೆಯನ್ನು ಮಾಡುವ ಈ ಸುಸಂದರ್ಭ ನನ್ನ ಭಾಗ್ಯವೇ ಹೌದು. ರಾತ್ರಿ ಶಾಲಾ ಶಿಕ್ಷಕರಾಗಿದ್ದ ಅವರು ಬಡ ಮಕ್ಕಳ ಕಷ್ಟ ಸುಖದ ಬಗ್ಗೆ ಕಾಳಜಿ ವಹಿಸಿ, ಅವರಲ್ಲಿ ಕೀಳರಿಮೆ ಮೂಡದ ಹಾಗೆ ನೋಡಿ ಕೊಳ್ಳುತಿದ್ದರು. ಉಚ್ಚಿಲರು ಮುಂಬಯಿ ಕನ್ನಡ ಬಾನಂಗಳದಲ್ಲಿ ಧ್ರುವ ತಾರೆಯಂತೆ ಎಂದು ಹೆಸರಾಂತ ಸಮಾಜ ಸೇವಕ, ಥಾಣೆ ಬಂಟ್ಸ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಡಿ.ಜಿ ಬೋಳಾರ್ ತಿಳಿಸಿದರು.

ಮುಂಬಯಿ ವಿವಿ ಕನ್ನಡದ ವಿಭಾಗ, ಮಿತ್ರ ವೃಂದ ಮುಲುಂಡ್ ಹಾಗೂ ಗುರುಶಿಷ್ಯ ಒಕ್ಕೂಟ ಮುಂಬಯಿ ತಮ್ಮ ಸಂಯುಕ್ತ ಆಶ್ರಯದಲ್ಲಿ ಕನ್ನಡದ ಹೆಸÀರಾಂತ ಸಾಹಿತಿ, ಲೇಖಕ, ಸಂಘಟಕ ವಿದ್ವಾನ್ ರಾಮಚಂದ್ರ ಉಚ್ಚಿಲ್ (ಚರಾ) ಅವರ ಜನ್ಮ ಶತಮಾನೋತ್ಸವದ ಸರಣಿ ಕಾರ್ಯಕ್ರಮದ (ವಿಚಾರ ಸಂಕಿರಣ, ರಾಮಚಂದ್ರ ಉಚ್ಚಿಲ್ ವಾಙ್ಮಯ ವಿಹಾರ) ಉದ್ಘಾಟನಾ ಸಮಾರಂಭ ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಾಕ್ರೂಜ್‍ನ ವಿದ್ಯಾನಗರಿ ಅಲ್ಲಿನ ಡಬ್ಲ್ಯೂಆರ್‍ಐಸಿ ಸಭಾಗೃಹದಲ್ಲಿ ಆಯೋಜಿಸಿದ್ದು ದೀಪ ಪ್ರಜ್ವಲಿಸಿ ಸರಣಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಬೋಳಾರ್ ಮಾತನಾಡಿದರು.

ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಹಾನಗರದಲ್ಲಿನ ಹಿರಿಯ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾಯ ನಿಂಜೂರು, ಸಾಹಿತ್ಯ ಬಳಗ ಮುಂಬಯಿ ಅಧ್ಯಕ್ಷ ಹೆಚ್.ಬಿ.ಎಲ್ ರಾವ್, ಹಿರಿಯ ಸಾಹಿತಿ ಡಾ| ಸುನೀತಾ ಶೆಟ್ಟಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅತಿಥಿ ಅಭ್ಯಾಗತರಾಗಿ ವೇದಿಕೆಯಲ್ಲಿದ್ದು `ವಿದ್ವಾನ್ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಪ್ರಶಸ್ತಿ'ಯನ್ನು ಮುಂಬಯಿನ ಹಿರಿಯ ಸಾಹಿತಿ, ಪ್ರಾಧ್ಯಾಪಕ ಡಾ| ವಿಶ್ವನಾಥ ಕಾರ್ನಾಡ್ ಅವರಿಗೆ ಪ್ರದಾನಿಸಿ ಹಾಗೂ ನಗರದ ಹೆಸರಾಂತ ಮಕ್ಕಳ ತಜ್ಞ ಡಾ| ಕೆ.ಮೋಹನ್ ಅವರಿಗೆ ವಿಶೇಷ ಗೌರವ ಸಲ್ಲಿಸಿ ಅಭಿನಂದಿಸಿದರು.

ಡಾ| ನಿಂಜೂರು ಮಾತನಾಡಿ ರಾ.ಉಚ್ಚಿಲ, ವ್ಯಾಸರಾಯ ಬಲ್ಲಾಳ, ಹಾವನೂರು ಮಂತಾದವರ ಸಾಹಿತ್ಯ ಕೂಟದಲ್ಲಿ ಮರಿ ಸಾಹಿತಿಯಾಗಿದ್ದ ನನಗೂ ಪಾಲುಗೊಳ್ಳುವ ಅವಕಾಶ ಸಿಕ್ಕಿತ್ತು. ಅಲ್ಲಿ ಉಚ್ಚಿಲರು ಸತ್ಯ ನಿಷ್ಠುರವಾಗಿ ತರ್ಕಿಸುತಿದ್ದರು. ಅಪ್ರಾಣಿಕತೆಯನ್ನು ಎಂದೂ ಸಹಿಸುತ್ತಿರಲಿಲ್ಲ. ಹೀಗಿದ್ದೂ ಅವರು ಸ್ನೇಹ ಜೀವಿ. ಉಚ್ಚಿಲರು ಕನ್ನಡ ಸಾಹಿತ್ಯ ಪರಂಪರೆಯನ್ನು ಅರೆದು ಕುಡಿದಂತ ಪಾಂಡಿತ್ಯವುಳ್ಳವರು ಎಂದರು.

ನಾನು ಉಚ್ಚಿಲರಲ್ಲಿ ತರ್ಕ ಹಾಗೂ ಸಲಿಗೆ ಎರಡನ್ನೂ ಇಟ್ಟು ಕೊಂಡವನು. ಅವರು ತಾಯಿನುಡಿಯಲ್ಲಿ ನನ್ನ ಕುರಿತು ಏನೋ ಬರೆದಾಗ ಅವರಲ್ಲಿ ಜಗಳ ಮಾಡಲು ಹೋದವನಿಗೆ ಚಾಹ ಕುಡಿಸಿದ್ದು ಅದನ್ನು ಸವಿದು ಹಿಂದೆ ಬಂದಿದ್ದೆ. ಯಕ್ಷಗಾನ ಹಾದಿ ತಪ್ಪುತ್ತಿರುವ ಸಂದರ್ಭ ಅವರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುವಾಗ ನಾನೂ ಜೊತೆ ಸೇರಿದ್ದೆ ಎಂದು ಹೆಚ್.ಬಿ.ಎಲ್ ರಾವ್ ತಿಳಿಸಿದರು.

ಸುನೀತಾ ಶೆಟ್ಟಿ ಮಾತನಾಡಿ ಮುಂಬಯಿಯಲ್ಲಿ ಕವಿ ಮುದ್ದಣನನ್ನು ಜೀವಂತ ಇರಿಸಿದವರು. ಕನ್ನಡ ಭಾಷೆಯಲ್ಲಿ ಅಪಾರ ಪಾಂಡಿತ್ಯವುಳ್ಳ ಸರಳ ಜೀವಿಯಾಗಿದ್ದ ಅವರು ಮಿತೃತ್ವದ ಸೊಗಡು ಆತ್ಮೀಯ ಮನಸ್ಸುಳ್ಳವರು. ಹೀಗೆ ಮಾನವೀಯವಾಗಿ ಬದುಕಿದ ಅವರ ಸ್ಮರಣೆ ಅಗತ್ಯ ಹಾಗು ಅರ್ಥಪೂರ್ಣವಾದುದು ಎಂದರು.

ಪಾಲೆತ್ತಾಡಿ ಮಾತನಾಡಿ ಮುಂಬಯಿಯಲ್ಲಿ ಉಚ್ಚಿಲ ಅವರದ್ದು ಚಿರಸ್ಥಾಯಿ ಹೆಸರು. ಕನ್ನಡ ಭಾಷಾ ಬಳಕೆ, ಶುದ್ಧೀಕರಣದ ಕುರಿತು ಅಪಾರ ಕಾಳಜಿವುಳ್ಳವರಾಗಿದ್ದ ಅವರು ತುಳು ಯಕ್ಷಗಾನ ವಿರೋಧಿಯಲ್ಲ. ಆದರೆ ಅಲ್ಲಿ ಬಳಕೆ ಆಗುತ್ತಿರುವ ಭಾಷಾ ಪ್ರಯೋಗದ ಕುರಿತು ಕಿಡಿಕಾರುತಿದ್ದರು. ಅವರ ಹೆಸರನ್ನು ಉಳಿಸಿ ಬೆಳೆಸುವ ಕಾರ್ಯ ಮುಂಬಯಿಯಲ್ಲಿ ಸದಾ ನಡೆಯುತ್ತಿರಲಿ ಎಂದರು.

ಡಾ| ಕಾರ್ನಾಡ್ ಪ್ರಶಸ್ತಿಗೆ ಉತ್ತರಿಸಿ ತಮಗೂ ಉಚ್ಚಿಲರಿಗೂ ಫುಟ್ಬಾಲ್ ಪಂದ್ಯಾಟಗಳ ದಿನಗಳಲ್ಲಿ ಮುಖಾಮುಖಿ ಯಾದ ಶಾಲಾ ಕಾಲೇಜು ದಿನಗಳನ್ನು ಸ್ಮರಿಸಿಕೊಂಡರು.

ಮಿತ್ರ ವೃಂದದ ಎ.ನರಸಿಂಹ ಪ್ರಸ್ತಾವಿಕ ನುಡಿಗಳನ್ನಾಡೊ ಚಿಕ್ಕ ಪ್ರಾಯದಲ್ಲೆ ಮುಂಬಯಿಗೆ ಬಂದ ಉಚ್ಚಿಲರು ಜಿಜ್ಞಾಸೆವುಳ್ಳವರು. ತಾವು ಮಾಡುವ ಯಾವುದೇ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರು, ಪೂರ್ಣ ತೆಯಲ್ಲಿ ಸೌಂದರ್ಯವನ್ನು ಕಾಣುವವರು. ಓರೆ ಕೋರೆಗಳನ್ನು ಕಟುವಾಕಿ ಟೀಕಿಸುತ್ತಿದ್ದ ಅವರ ಬರಹಗಳಿಗೆ ಒಂದು ಸ್ಪಷ್ಟವಾದ ಉದ್ದೇಶ ಇರುತಿತ್ತು ಎಂದರು.

ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷೀಯ ಭಾಷಣಗೈದು ರಾಮಚಂದ್ರ ಉಚ್ಚಿಲರು ಅಂದು ಹಚ್ಚಿಟ್ಟ ಕನ್ನಡದ ದೀಪವನ್ನು ಬೆಳಗಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ. ಆ ಬೆಳಕಲ್ಲೆ ನಾವು ಮುಂದುವರಿಯೋಣ. ಇಂತಹ ಅಪರೂಪದ ವ್ಯಕ್ತಿಯ ಕುರಿತು ಅಗತ್ಯವಾಗಿ ಕನ್ನಡ ವಿದ್ಯಾರ್ಥಿಗಳು ಪಿಹೆಚ್‍ಡಿ ಸಂಶೋಧನಾ ಪ್ರಬಂಧದಲ್ಲಿ ತೊಡಗಿಸಿಕೊಳ್ಳುವ ಕೆಲಸ ಆಗಬೇಕು ಎಂದೇಳಿ ಕೃತಿಗಳ ಕುರಿತು ಅಚ್ಚುಕಟ್ಟಾಗಿ ಪ್ರಬಂಧ ಮಂಡಿಸಿದ ಸಾಹಿತಿಗಳನ್ನು ಅಭಿನಂದಿಸಿದರು.

ಹೆಸರಾಂತ ಸಾಹಿತಿ ಡಾ| ಮಮತಾ ಟಿ.ರಾವ್, ಮೊಗವೀರ ಮಾಸಿಕದ ಸಂಪಾದಕ ಅಶೋಕ ಎಸ್.ಸುವರ್ಣ, ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಬಹುಮುಖ ಪ್ರತಿಭಾವಂತ ಕವಿ, ಕಥೆಗಾರ ಗೋಪಾಲ ತ್ರಾಸಿ, ಸಂಶೋಧನಾ ಸಹಾಯಕ ಮಧುಸೂದನ ವೈ.ರಾವ್, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿದ್ದು ರಾಮಚಂದ್ರ ಉಚ್ಚಿಲ್ ಅವರ ಏಳು ಕೃತಿಗಳ ಸಮೀಕ್ಷೆ ಗೈದ ವಿಚಾರ ಮಂಡಿಸಿದರು.

ಮಿತ್ರ ವೃಂದದ ಎಸ್.ಕೆ ಸುಂದರ್, ಗುರುಶಿಷ್ಯ ಒಕ್ಕೂಟದ ವಸಂತ ಎನ್.ಸುವರ್ಣ, ಸತೀಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದು ಗುರುಶಿಷ್ಯ ಒಕ್ಕೂಟ ಮುಂಬಯಿ ಇದರ ಮುಖ್ಯಸ್ಥೆ, ಹಿರಿಯ ಶಿಕ್ಷಕಿ ಡಾ| ವಾಣಿ ನಾರಾಯಣ ಉಚ್ಚಿಲ್ಕರ್ ಪ್ರಶಸ್ತಿ ಕುರಿತು ಪ್ರಸ್ತಾಪಿಸಿದರು. ಪುರಸ್ಕೃತ ಚಿತ್ರಕಲಾವಿದ ಜಯ್ ಸಿ.ಸಾಲ್ಯಾನ್ ರಚಿತ ರಾಮಚಂದ್ರ ಉಚ್ಚಿಲ್‍ರ ಭಾವಚಿತ್ರ ನೀಡಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal