About Us       Contact

 

(ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಂಬಯಿ, ಡಿ.09: ಕರ್ನಾಟಕ ರಾಜ್ಯದ ಮಿನಿ ಸಮರ ಎಂದೇ ಬಿಂಬಿತ ಕಳೆದ ಗುರುವಾರ ನಡೆದ ರಾಜ್ಯ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಕೆ.ಆರ್ ಪೇಟೆ (ಕೃಷ್ಣರಾಜಪೇಟೆ) ವಿಧಾನಸಭಾ ಕ್ಷೇತ್ರದಿಂದ ಅನರ್ಹ ಶಾಸಕನಾಗಿದ್ದು ಭಾರತೀಯ ಜನತಾ ಪಕ್ಷ (ಬಿಜೆಪಿ) ಪಕ್ಷದಿಂದ ಸ್ಪರ್ಧಿಸಿದ್ದ ಬೃಹನುಂಬಯಿಯಲ್ಲಿನ ಏಕೈಕ ಕನ್ನಡಿಗ ಡಾ| ಕೆ.ಸಿ ನಾರಾಯಣ ಗೌಡ ಅವರು 66,094 ಮತಗಳನ್ನು ಪಡೆದು ತೃತೀಯ ಬಾರಿಗೆ ಶಾಸಕರಾಗಿ ಚುನಾಯಿತರಾಗಿದ್ದಾರೆ.
ಈ ಬಾರಿ ಜನತಾ ದಳ ಜಾತ್ಯಾತೀತ (ಜೆಡಿಎಸ್) ಪಕ್ಷದ ಪ್ರತಿಸ್ಪರ್ಧಿ ಬಿ.ಎಲ್ ದೇವರಾಜ್ (56,363) ಅವರನ್ನು 9,731 ಮತಗಳಿಂದ ಪರಾಭವ ಗೊಳಿಸಿ ನಾರಾಯಣ ಗೌಡ ವಿಜೇತರೆಣಿಸಿದ್ದು, ಕಳೆದ ಬಾರಿಯ ಎದುರಾಳಿ ಅಭ್ಯರ್ಥಿ ಕಾಂಗ್ರೇಸ್ (ಐ) ಪಕ್ಷದ ಕೆ.ಬಿ ಚಂದ್ರಶೇಖರ್ ಅವರನ್ನು ಮೂರನೇ ಸ್ಥಾನಕ್ಕೆ ಸೀಮಿತಗೊಳಿಸಿದ್ದಾರೆ.

 

2013ರಲ್ಲಿ ಮೊದಲ ಬಾರಿಗೆ ಹಾಗೂ 2018ರಲ್ಲಿ ದ್ವಿತೀಯ ಬಾರಿಗೆ ಸತತ ಎರಡು ಅವಧಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಚುನಾಯಿತರಾದ ನಾರಾಯಣ ಗೌಡ ಅವರು ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಅವಿರತ ಶ್ರಮಿಸಿದ್ದರು. ಆದರೆ 2019ರಲ್ಲಿ ಕಾರಣಾಂತರದಿಂದ ಜೆಡಿಎಸ್ ಪಕ್ಷದ ವರ್ತನೆಗೆ ಮನನೊಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದಿದ್ದರು. ಅದೇ ವೇಳೆಗೆ ಕರ್ನಾಟಕದ ರಾಜ್ಯದ ಹಾಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನಾರಾಯಣ ಗೌಡ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿ ತನ್ನ ಹುಟ್ಟೂರ ಕ್ಷೇತ್ರ ಕೆ.ಆರ್ ಪೇಟೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಬಿ.ಫಾರ್ಮ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಸ್ವಾಭಿಮಾನಿ ಬಿಜೆಪಿ ಅಭ್ಯರ್ಥಿ ಎಂದೆಣಿಸಿದ ನಾರಾಯಣ ಗೌಡ ಪರ ಬಿ.ಎಸ್ ವಿಜೆಯೇಂದ್ರ ಅವರು ಗೆಲುವಿಗಾಗಿ ಶ್ರಮಿಸಿದ್ದರು. ಮೊದಲಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಕೊನೆಗೆ ಜೆಡಿಎಸ್ ಪಕ್ಷದ ಮಧ್ಯೆ ಪ್ರತಿಸ್ಪರ್ಧೆ ಏರ್ಪಟ್ಟಿತ್ತು. ಗತ 2018ರ ಚುನಾವಣೆಯಲ್ಲಿ 88,016 ಮತಗಳನ್ನು ಪಡೆದು ನಾರಾಯಣ ಗೌಡ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಈ ಬಾರಿ ಶೇ.80ರಷ್ಟು ಮತದಾನವಾಗಿದ್ದು ಮೂರನೇ ಬಾರಿಗೆ ನಾರಾಯಣ ಗೌಡ ಶಾಸಕ ಸ್ಥಾನದ ವಿಜಯಮಾಲೆ ಧರಿಸಿಕೊಂಡಿದ್ದಾರೆ.

ಮುಂಬಯಿ ಮಹಾನಗರದಲ್ಲಿನ ಉದ್ಯಮಿ, ಕೊಡುಗೈದಾನಿ, ಸಂಘ-ಸಂಸ್ಥೆಗಳ ಮಹಾ ಪೆÇೀಷಕ ತೃತೀಯ ಬಾರಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಎಂಎಲ್‍ಎ ಆಗಿ ಆರಿಸಿ ಬಂದು ಕರ್ಮಭೂಮಿ ಮುಂಬಯಿಯಲ್ಲಿನ ಕನ್ನಡಿಗರ ಧ್ವನಿಯಾಗಿರುವುದು ಮುಂಬಯಿವಾಸಿ ಕನ್ನಡಿರಿಗೆ ಅಭಿಮಾನವೆಣಿಸಿದೆ. ಕರ್ನಾಟಕ ರಾಜ್ಯದಲ್ಲಿ ಮುಂಬಯಿ ಕನ್ನಡಿಗರ ಜನಪ್ರತಿನಿಧಿಯಾಗಿ ಶಾಸಕನೋರ್ವನ ಆಯ್ಕೆಗೆ ಒಕ್ಕಲಿಗ ಸಂಘ ಮಹಾರಾಷ್ಟ್ರ (ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ), ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಮಂಡಳಿ, ನೌಕರವೃಂದ, ಮಹಾನಗರದಲ್ಲಿನ ತುಳು-ಕನ್ನಡಿಗರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ನೂತನ ಶಾಸಕರಿಗೆ ಶುಭಾರೈಸಿ ಅಭಿನಂದಿಸಿದ್ದಾರೆ. ಶೀಘ್ರವೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಂಪುಟದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನ ಅಲಂಕರಿಸುವಂತೆ ಆಶಯ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ಶಾಸಕ ನಾರಾಯಣ ಗೌಡ ಮತ್ತು ಪತ್ನಿ ದೇವಕಿ ಎನ್.ಗೌಡ ಈ ವಿಜಯಕ್ಕೆ ಆಶೀರ್ವಾದಿಸಿ ಸಹಕರಿಸಿದ ಸರ್ವರನ್ನೂ ಅಭಿವಂದಿಸಿದ್ದಾರೆ. ಬಿಜೆಪಿ ಪ್ರಪ್ರಥಮವಾಗಿ ಇಲ್ಲಿ ತನ್ನ ಸ್ಥಾನ ಧಕ್ಕಿಸಿಕೊಂಡು ಕಮಲವನ್ನು ಅರಳಿಸಿ ಕೊಂಡರೆ ಸತತ ಮೂರನೇ ಬಾರಿ ಶಾಸಕರಾಗಿ ನಾರಾಯಣ ಗೌಡ ಹ್ಯಾಟ್ರಿಕ್ ಸಾಧಿಸಿದ್ದಾರೆ.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal