Print

ಮುಂಬಯಿ, ಸೆ.14: ಕೇಶ ವಿನ್ಯಾಸದಲ್ಲಿ ಎಷ್ಟು ವಿನ್ಯಾಸಗಳಿವೆ ಎಂದು ವಿಶ್ವಕ್ಕೆ ತೋರಿಸಿ ಕೃತಿರೂಪ ತಾಳಿದ ಶಿವರಾಮ ಭಂಡಾರಿ ಕಠಿಣ ಪರಿಶ್ರಮದಿಂದ ಎಲ್ಲವೂ ಸಿದ್ಧಿಸಲು ಸಾಧ್ಯ ಎಂಬುದನ್ನು ತೋರ್ಪಡಿಸಿದ್ದಾರೆ. ಇಂತಹ ಸಾಧಕನ ಸಾಧನೆಗೆ ಬೆಲೆ ಕಟ್ಟಲು ಅಸಾಧ್ಯ. ವಿಶ್ವಕಂಡ ಭಾರತೀಯ ಅಪ್ರತಿಮ ಕಲಾವಿದ ಬಿಗ್‍ಬೀ, ಷಹೇನ್‍ಷಾ ಹೆಸರಾಂತ ಪದ್ಮಶ್ರೀ ಅಮಿತಾಭ್ ಬಚ್ಚನ್ ಅವರಿಂದಲೇ ಪ್ರಶಂಸೆಗೆ ಪಾತ್ರವಾದ ಈ ಕೃತಿಯನ್ನು ಮಾನವನಿಗೆ ಜ್ಞಾನ ಕೊಡುವ ವಿಶ್ವವಿದ್ಯಾಲಯದಲ್ಲಿ ನನ್ನ ಹಸ್ತಗಳಿಂದ ಲೋಕಾರ್ಪಣೆ ಗೊಳಿಸಿದ್ದು ನನ್ನ ಹಿರಿಮೆ. ಎಂದು ಭಂಡಾರಿ ಮಹಾ ಮಂಡಲ ಇದರ ಸಂಸ್ಥಾಪಕ ಅಧ್ಯಕ್ಷ, ನಾಗೇಶ್ವರ ಸಿನಿ ಕ್ರಿಯೇಷನ್ಸ್‍ನ ಆಡಳಿತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಕಡಂದಲೆ ಸುರೇಶ್ ಎಸ್.ಭಂಡಾರಿ ತಿಳಿಸಿದರು.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಹಯೋಗದಲ್ಲಿ ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಇಲ್ಲಿನ ವಿದ್ಯಾನಗರಿಯ ಜೆ.ಪಿ ನಾಯಕ್ ಭವನದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದು, ಮಧ್ಯಾಂತರದಲ್ಲಿ ಬಾಲಿವುಡ್ ಚಲನಚಿತ್ರರಂಗದ ಹೆಸರಾಂತ ಕೇಶ ವಿನ್ಯಾಸಕ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಯಶೋಗಾಥೆ, ಜೀವನ ಶೈಲಿಯಧಾರಿತ ಜಯಶ್ರೀ ಜಿ.ಶೆಟ್ಟಿ ರಚಿತ `ಸ್ಟೈಲಿಂಗ್ ಅಟ್ ದ ಟಾಪ್' ಕೃತಿಯನ್ನು ವಿಧ್ಯುಕ್ತವಾಗಿ ಬಿಡುಗಡೆಗೊಳಿಸಿ ಸುರೇಶ್ ಭಂಡಾರಿ ಮಾತನಾಡಿದರು.

 

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರಾಷ್ಟ್ರ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೇಷ್ಠ ಕಲಾವಿದ, ಕಲಾಜಗತ್ತು ಮುಂಬಯಿ ಅಧ್ಯಕ್ಷ ತೋನ್ಸೆ ವಿಜಯಕುಮಾರ್ ಶೆಟ್ಟಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದು ಅಭಿನಂದಿಸಿದರು. ಕೃತಿಕರ್ತೆ ಜಯಶ್ರೀ ಜಿ.ಶೆಟ್ಟಿ, ರಾಷ್ಟ್ರದ ಪ್ರಸಿದ್ಧ ಪತ್ರಿಕಾ ಛಾಯಾಚಿತ್ರಕಾರ ಗೋಪಾಲ ಶೆಟ್ಟಿ, ಅತಿಥಿ ಅಭ್ಯಾಗತರಾಗಿ ಹಾಗೂ ಗುಲಾಬಿ ಕೃಷ್ಣ ಭಂಡಾರಿ, ಅನುಶ್ರೀ ಶಿವರಾಮ ಭಂಡಾರಿ ವೇದಿಕೆಯಲ್ಲಿದ್ದರು.

ಶಿವರಾಮ ಅವರು ಭಂಡಾರಿ ಈ ಕೃತಿ ಮುಖೇನ ಸಮುದಾಯದ ಕೀರ್ತಿಪತಾಕೆ ಬಾಣೆತ್ತರಕ್ಕೆ ಹಾರಿಸಿದ ಮಹಾನೀಯ. ಕುಲವೃತ್ತಿಯನ್ನೇ ಪ್ರವೃತ್ತಿಯಾಗಿಸಿದ ಹಳ್ಳಿ ಹುಡುಗನ ಜಾಗತಿಕ ಸಾಧನೆ ಪ್ರಶಂಸನೀಯ. ತಾಯಿಯ ಮಮತೆಯ ಮೌಲ್ಯದ ಅನಿವಾರ್ಯತೆ ಏನೆಂದು ಆಧುನಿಕ ಯುವಜನತೆಗೆ ಹೃದಯಶೀಲವಂತ, ಸರಳ ಸಜ್ಜನಿಕೆಯ ಶಿವ ಮಾದರಿಯಾಗಿದ್ದಾರೆ. ವ್ಯಕ್ತಿ ಉಸಿರು ಇರುವ ತನಕ ಮಾತ್ರವಾಗಿದ್ದರೆ ಆತನ ಸಾಧನೆಯ ವ್ಯಕ್ತಿತ್ವ ಪ್ರಪಂಚ ಇರುವ ತನಕ ಇರುತ್ತದೆ ಅನ್ನುವಂತೆ ನಮ್ಮ ಶಿವನ ಸಾಧನೆಯೂ ಸದಾ ಪ್ರಕಾಶಿಸುತ್ತಿರಲಿ ಎಂದೂ ಸುರೇಶ್ ಭಂಡಾರಿ ಆಶಯ ವ್ಯಕ್ತಪಡಿಸಿದರು.

ತೀರಾ ಗ್ರಾಮೀಣ ಪ್ರದೇಶದ ಬಾಲಕನೋರ್ವ ವಿದ್ಯೆಯ ಅರಿವು ಇಲ್ಲದೆನೇ ಉದರ ಪೊಷಣೆಗಾಗಿ ಕರ್ಮಭೂಮಿ ಸೇರಿ ಇಂದು ಗ್ಲೋಬಲೈಝ್‍ಡ್ ಬಾಯ್ (ಜಾಗತೀಕೃತ ಹುಡುಗ) ಆಗಿ ಸಟೆದು ನಿಂತಿದ್ದಾರೆ ಇದು ನಮ್ಮೆಲ್ಲರ ಅಭಿಮಾನ ಎಂದು ವಿಜಯಕುಮಾರ್ ಶೆಟ್ಟಿ ಶಿವಾ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ವಿಶ್ವವಿದ್ಯಾಲಯ ಅನ್ನುವ ಶಿಕ್ಷಣಾಲಯದಂತಹ ಈ ದೇವಾಲಯದಲ್ಲಿ ನಾನು ರಚಿಸಿದ ಕೃತಿಯೊಂದು ಬಿಡುಗಡೆ ಆಗಿದ್ದು ನನ್ನ ಅಭಿಮಾನ. ಮಾನವ ಓದಿನಿಂದ ಬದುಕು ಬದಲಾಯಿಸಿ ಕೊಳ್ಳಬಹುದು ಎಂದು ತಿಳಿದ ನಾನು ಶಿಕ್ಷಣ, ಸಹಯೋಗ, ಪಿತೃಪ್ರೀತಿ ಸಿಗದೆ ಬೆಳೆದ ಶಿವಾ ಅವರ ಸಾಧನೆ ಭಾರತೀಯರ ಹೆಮ್ಮೆಯಾಗಿದೆ ಎಂದು ಜಯಶ್ರೀ ಶೆಟ್ಟಿ ನುಡಿದರು.

ಭೌಗೋಳಿಕಾ ಪ್ರಶಂಸೆಗೆ ಪಾತ್ರವಾದ ಕನ್ನಡಿಗನ ಕೃತಿಯೊಂದು ನಮ್ಮ ಕನ್ನಡ ವಿಭಾಗದಲ್ಲೂ ಬಿಡುಗಡೆ ಆಗುವುದು ವಿಭಾಗದ ಭಾಗ್ಯವಾಗಿದೆ. ಮಗನ ಸಾಧನೆ ಅನುಭವಿಸಿ ಸಂತೋಷಗೊಂಡ 86ರ ಹರೆಯದ ತಾಯಿಯು ಖುದ್ಧಾಗಿ ಹಾಜರಾಗಿ ಆನಂದಬಾಷ್ಪಗರೆದ ಕ್ಷಣ ಎಲ್ಲರಲ್ಲೂ ಮಾತೃವಾತ್ಸಲ್ಯವನ್ನು ಹುಟ್ಟಿಸಿರುವುದೇ ಶಿವರಾಮ ಭಂಡಾರಿ ಅವರ ಸಾಧನೆಗೆ ಕನ್ನಡಿಯಾಗಿದೆ. ಇದು ಮುಂಬಯಿ ಕನ್ನಡಿಗರು ಅಭಿಮಾನ ಪಡುವ ಸಾಧನೆಯೇ ಸರಿ. ಇದೊಂದು ಉತ್ಕೃಷ್ಟ ಕೃತಿಯಾಗಿದ್ದು ಇಂತಹ ಕೃತಿಗಳು ಬಹುಭಾಷೆಗಳಲ್ಲಿ ಅಧಾನ ಪ್ರಧಾನ ಆಗಬೇಕು. ವಿಶ್ವ ವಿದ್ಯಾಲಯಗಳು ಬರೇ ಸಾಹಿತಿ, ಲೇಖಕರು, ವಿದ್ಯಾಥಿರ್üಗಳ ಕೇಂದ್ರವಾಗದೆ ಇಂತಹ ಸಾಧಕರನ್ನು ಗುರುತಿಸುವ ಕೇಂದ್ರಗಳಾಗಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಜಿ.ಎನ್ ಉಪಾಧ್ಯ ತಿಳಿಸಿದರು.

ನಮ್ಮ ಬಾಲ್ಯವಸ್ಥೆಯಲ್ಲಿ ನಮ್ಮನ್ನು ಯಾರು ತಿರಸ್ಕರಿಸುತ್ತಿದ್ದಾರೋ ಅವರನ್ನು ಸ್ಮರಿಸಿದಾಗಲೇ ನಾವು ಸ್ವಾಭಿಮಾನಿಗಳಾಗಿ ಬೆಳೆಯಲು ಸಾಧ್ಯ. ಒಂದು ವೇಳೆ ಎಲ್ಲಊ ನಮ್ಮನ್ನು ಪ್ರೀತಿಸಿ ಬೆಳೆಸಿದ್ದರೆ ನನ್ನಿಂದ್ದಲೂ ಇಂತಹ ಸಾಧನೆ ಆಸಾಧ್ಯವಾಗುತ್ತಿತು. ಆಥಿರ್üಕವಾಗಿ ಹಿಂದಿದ್ದ ನಾವು ನಿಂದನೆ ಸ್ವೀಕಾರಿಸಿ ಮುನ್ನಡೆದ ಫಲವಾಗಿ ಸಾಧನೆಯ ಗುರಿ ಮುಟ್ಟಲು ಸಾಧ್ಯವಾಗಿದೆ. ನಾನು ಯಾರಿಂದಲೂ ಏನೂ ಅಪೇಕ್ಷೆ ಪಟ್ಟವನಲ್ಲ, ಆದರೆ ಪ್ರತೀಯೊಬ್ಬರಿಂದ ಗಳಿಸಿದ ಪ್ರೀತಿಯ ಮಾತುಗಳು, ಪ್ರೋತ್ಸಹವೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ನನ್ನ ಸಲೂನ್‍ಗೆ ಆಗಮಿಸುವ ಗ್ರಾಹಕರ ಚರಣಸ್ಪರ್ಶವೇ ನನ್ನ ಬದುಕಿನ ಪ್ರಸಾದವಾಗಿ ಸ್ವೀಕರಿಸಿರುವೆ ಎಂದುಭಾವೋದ್ವೆಕರಾಗಿ ಶಿವರಾಮ ಭಂಡಾರಿ ತನ್ನ ಬದುಕನ್ನು ಮೆಲುಕು ಹಾಕಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಪ್ರತಿಭಾನ್ವಿತರನ್ನು ಗುರುತಿಸುವುದೇ ಪತ್ರಿಕಾ ಧರ್ಮವಾಗಿದೆ. ಇದನ್ನೇ ಕಪಸಮ ಮತ್ತು ಕನ್ನಡ ವಿಭಾಗ ಮಾಡುತ್ತಿದೆ. ಇಂತಹ ಕಾಯಕವನ್ನು ಈ ಕಾರ್ಯಕ್ರಮದ ಮೂಲಕ ಸಿದ್ಧಿಸಿದ್ದೇವೆ ಎಂದರು.

ಪತ್ರಕರ್ತರ ಸಂಘದ ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ಪ್ರೀತಂ ಎನ್.ದೇವಾಡಿಗ, ವಿಶೇಷ ಆಮಂತ್ರಿತ ಸದಸ್ಯರಾದ ನ್ಯಾ| ವಸಂತ್ ಎಸ್.ಕಲಕೋಟಿ, ಸಾ.ದಯಾ, ಗೋಪಾಲ ತ್ರಾಸಿ, ಸವಿತಾ ಸುರೇಶ್ ಶೆಟ್ಟಿ, ಕರುಣಾಕರ್ ವಿ.ಶೆಟ್ಟಿ ಹಾಗೂ ಮಹಾನಗರದಲ್ಲಿನ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಜರಿದ್ದು, ಶಿವರಾಮ ಭಂಡಾರಿ ಅವರನ್ನು ಅಭಿನಂದಿಸಿದರು.

ಕನ್ನಡ ವಿಭಾಗದ ಡಾ| ಉಮಾರಾವ್, ಕುಮುದಾ ಆಳ್ವ, ಮದುಸೂಧನ ರಾವ್, ಶೈಲಜಾ ಹೆಗಡೆ, ಡಾ| ಶ್ಯಾಮಲಾ ಪ್ರಕಾಶ್, ಸುರೇಖಾ ಎಸ್.ದೇವಾಡಿಗ, ಶ್ರೀಪಾದ ಪತಕಿ, ಗೀತಾ ಮಂಜುನಾಥ್ ಮತ್ತಿತರರ ಸಹಕಾರದೊಂದಿಗೆ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಾ.ದಯಾ ಕೃತಜ್ಞತೆ ಸಮರ್ಪಿಸಿದರು.