About Us       Contact

 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.07: ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಇಂದಿಲ್ಲಿ ಭಾನುವಾರ ಸಂಜೆ ಘಾಟ್ಕೋಪರ್ ಪೂರ್ವದ ಗುರುಕುಲ್ ಕಾಲೇಜ್ ಆಫ್ ಕಾಮರ್ಸ್‍ನ ಸ್ವಾಗತ್ ಸಭಾಗೃಹದಲ್ಲಿ ಸಾಫಲ್ಯ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಇವರ ಮಾರ್ಗದರ್ಶನದಲ್ಲಿ ಆಟಿಯ ಅಡಿಗೆ (ಆಟಿದ ಅಟಿಲ್) ಸಾಂಪ್ರದಾಯಿಕ ಕಾರ್ಯಕ್ರಮ ಆಯೋಜಿದ್ದು ರತಿಕಾ ಶ್ರೀನಿವಾಸ ಸಾಫಲ್ಯ ಅವರು ಆಟಿಕಳಂಜಗೆ ಕಳಸೆ-ಬತ್ತ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಮಹಿಳಾಧ್ಯಕ್ಷೆ ಶೋಭಾ ಬಂಗೇರ ಸಾರಥ್ಯದಲ್ಲಿಕಾರ್ಯಕ್ರಮ ನಡೆಸಿ ಆಟಿ ತಿಂಗಳ ಮತ್ತು ತಿಂಡಿತಿನಿಸುಗಳ ಮಹತ್ವ ತಿಳಿಪಡಿಸಿದರು.

ಕಾರ್ಯಕ್ರಮದಲ್ಲಿ ಸಮುದಾಯದ ಮಹಿಳೆಯರಿಗೆ ಆಟಿ (ಆಷಾಢ) ತಿಂಗಳಲ್ಲಿ ತುಳುನಾಡ ಸಂಸ್ಕೃತಿ ಸಾರುವ ವಿಶೇಷ ತಿಂಡಿತಿನಿಸುಗಳ ಸ್ಪರ್ಧೆ, ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ವಾಕ್ಚಾತುರ್ಯ ಸ್ಪರ್ಧೆ, ಭಿತ್ತಿಪತ್ರ ತಯಾರಿಕ ಸ್ಪರ್ಧೆ ಮತ್ತು ಪುರುಷರಿಗಾಗಿ ಚರ್ಚಾಸ್ಪರ್ಧೆ ಸೇರಿದಂತೆ ಇತರ ಸ್ಪರ್ಧೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಅಂತೆಯೇ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಮತ್ತು ಪದಾಧಿಕಾರಿಗಳು ಶಾಲಾ ವಿದ್ಯಾರ್ಥಿಗಳಿಗೆ ಧರ್ಮಾರ್ಥವಾಗಿ ಪುಸ್ತಕಗಳನ್ನು ವಿತರಿಸಿ ದಾನಿಗಳನ್ನು ಗೌರವಿಸಿದರು ಮತ್ತು ಸ್ಪರ್ಧಾ ವಿಜೇತರಿಗೆ ಪಾರಿತೋಷಕ ನೀಡಿ ಅಭಿನಂದಿಸಿದರು.

ಸಂಘದ ಉಪಾಧ್ಯಕ್ಷ ಕೃಷ್ಣ ಕುಮಾರ್ ಬಂಗೇರ, ಗೌ| ಪ್ರ| ಕಾರ್ಯದರ್ಶಿ ಅನುಸೂಯ ಕೆಲ್ಲಪುತ್ತಿಗೆ, ಗೌರವ ಕೋಶಾಧಿಕಾರಿ ಭಾಸ್ಕರ್ ಸಫಲಿಗ, ಯುವ ವಿಭಾಗಧ್ಯಕ್ಷ ರವಿಕಾಂತ್ ಸಫಲಿಗ, ಮಹಿಳಾ ವಿಭಾಗದ ಕೋಶಾಧಿಕಾರಿ ಸುಲೋಚನಾ ಸಫಲಿಗ ವೇದಿಕೆಯಲ್ಲಿದ್ದು ಸಾಫಲ್ಯ ಮಾಸಿಕದ ಸಂಪಾದಕಿ ಡಾ| ಜಿ.ಪಿ ಕುಸುಮಾ ಮತ್ತು ಯುವ ಪ್ರತಿಭೆ ಕು| ಸಂಜನಾ ಕುಂಜತ್ತೂರು ಇವರು ವಾಕ್ಚಾತುರ್ಯ ಸ್ಪರ್ಧೆ, ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಕಲಾವಿದ ಮೋಹನ್‍ದಾಸ್ ಸಫಲಿಗ ಮತ್ತು ಆರ್ಟ್‍ಝೋನ್ ಸಂಸ್ಥೆಯ ರೇಶ್ಮಾ ಆಚಾರ್ಯ ಇವರು ಭಿತ್ತಿಪತ್ರ ಸ್ಪರ್ಧೆ ಹಾಗೂ ಗೀತಾ ಶಿಪ್ಪಿಂಗ್ ಸಂಸ್ಥೆಯ ಗೀತಾ ವಾಮನ್ ಸಫಲಿಗ ಮತ್ತು ಮಹಿಳಾ ಉದ್ಯಮಿ ವಿಜಯಾ ಸದಾನಂದ ಬಂಗೇರ ಅವರು ಅಡುಗೆ ತೀರ್ಪುಗಾರರಾಗಿದ್ದು ಸ್ಪರ್ಧೆಗಳನ್ನು ನಡೆಸಿದರು.

ಮಹಿಳಾ ಸದಸ್ಯೆಯರು ಪ್ರಾರ್ಥನೆಯನ್ನಾಡಿದರು. ಮಹಿಳಾ ಉಪಾಧ್ಯಕ್ಷೆ ವಿಮಲಾ ಬಂಗೇರಾ, ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಲಾವತಿ ಪುತ್ರನ್ ಸ್ಪರ್ಧಾ ತೀರ್ಪುಗಾರರನ್ನು ಪರಿಚಯಿಸಿದರು. ಮಾ| ಆರವ್ ಸುವರ್ಣ ಮತ್ತು ಧ್ರುವ್ ಪುತ್ರನ್ ಆಟಿಕಳಂಜ ಹಾಡನೊಂದಿಗೆ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಹರ್ಷದ್ ಸಫಲಿಗ ಮತ್ತು ದಿವ್ಯಾ ಸಾಫಲ್ಯ ಸ್ಪರ್ಧೆಗಳನ್ನು ನಡೆಸಿದರು. ಕಾರ್ಯದರ್ಶಿ ಕಲಾ ಬಂಗೇರ ವಂದನಾರ್ಪಣೆಗೈದರು.ಅಪಾರ ಸಂಖ್ಯೆಯ ಸಾಫಲ್ಯ ಬಂಧುಗಳು, ನೂರಾರು ಮಹಿಳೆಯರು ಪಾಲ್ಗೊಂಡು ಆಟಿಯ ತಿನಿಸುಗಳನ್ನು ಸವಿದು ಕಾರ್ಯಕ್ರಮ ಸಂಭ್ರಮಿಸಿದರು.

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal