About Us       Contact

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಆ.06: ಕಣ್ಣಿನ ಅಕ್ಷಿಪಟದ ಮೊದಲ ಚಿತ್ರವೇ ಜನನಿದಾತೆಯಾಗಿದ್ದು, ತಾಯಿಗೆ ಮಕ್ಕಳ ಸಾಧನೆಕ್ಕಿಂತ ದೊಡ್ಡಸ್ತಿಕೆ ಮತ್ತೊಂದಿಲ್ಲ ಆದುದರಿಂದಲೇ ಭಾರತೀಯರಿಗೆ ಮಾತೃ ಸಂಸ್ಕೃತಿಯೇ ಪ್ರಧಾನವಾದದು. ದೃಷ್ಟಿಯಲ್ಲೂ ಮೊದಲಾಗಿ ನಾಲಗೆಯಲ್ಲೂ ಪ್ರಥಮವಾಗಿ ಉಚ್ಚರಿಸಲ್ಪಡುವ ತಾಯಿ ಮಕ್ಕಳಿಗೆ ನಿದ್ರೆ ಕೊಟ್ಟು ತಾನು ನಿದ್ರೆ ಕಳೆದು ಮಕ್ಕಳನ್ನು ಸಾಕುವ ದೇವತಾಸ್ವರೂಪಿ ಆಗಿದ್ದಾಳೆ ಇಂತಹ ಮಾತೆಯೇ ಹಿಂದೂ ಸಮಾಜದ ಮೊದಲ ದೇವತೆಯೇ ಸರಿ ಎಂದು ಆರ್‍ಎಸ್‍ಎಸ್ ಧುರೀಣ, ಶ್ರೀ ರಾಮ ವಿದ್ಯಾ ಕೇಂದ್ರ ಟ್ರಸ್ಟ್ (ರಿ.) ಕಲ್ಲಡ್ಕ ಇದರ ಸಂಚಾಲಕ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ನುಡಿದರು.

ರಾಷ್ಟ್ರದ ಪ್ರತಿಷ್ಠಿತ ಕ್ಯಾಟರಿಂಗ್ ಸರ್ವಿಸ್‍ಗಳಲ್ಲಿ ಒಂದೆಣಿಸಿದ ಶಶಿ ಕೇಟರಿಂಗ್ ಸರ್ವಿಸ್‍ನ ಮಾಲಿಕ, ಹೆಸರಾಂತ ಉದ್ಯಮಿ, ಕೊಡುಗೈದಾನಿ, ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಗುಜರಾತ್ ರಾಜ್ಯ ಘಟಕದ ಪ್ರಧಾನ ಸಂಘಟಕ ಶಶಿಧರ ಬಿ.ಶೆಟ್ಟಿ (ಗುರುವಾಯನಕೆರೆ ಬೆಳ್ತಂಗಡಿ) ಇವರ ಶಶಿ ಶೆಟ್ಟಿ ಅಭಿಮಾನಿ ಬಳಗವು ಕಳೆದ ಮಂಗಳವಾರ ರಾತ್ರಿ ಗುಜರಾತ್ ರಾಜ್ಯದ ಬರೋಡಾ ಭಯ್ಲಿ ಇಲ್ಲಿನ ಶಕ್ತಿ ಗ್ರೀನ್ಸ್‍ನ ಪ್ರಿಮಿಯರ್ ಬಾಂಕ್ವೇಟ್ ಸಭಾಗೃಹದಲ್ಲಿ ಆಯೋಜಿಸಿದ್ದ ಶಶಿಧರ ಬಿ.ಶೆಟ್ಟಿ ಸ್ವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಡಾ| ಪ್ರಭಾಕರ್ ಭಟ್ ಮಾತನಾಡಿದರು. ಶಶಿ ಮಾತೃಶ್ರೀ ಕಾಶಿ ಶೆಟ್ಟಿ ಕುವೆಟ್ಟು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿದರು.

ದುಡ್ಡು, ಗದ್ದುಗೆ, ಸ್ಥಾನಮಾನ, ಹೆಸರಿನ ಆಶೆ ಯಾವುದನ್ನೂ ಬಯಸದೆ ಒಟ್ಟು ಸಮಾಜದ ಹಿತವನ್ನೇ ಆಶಿಸುತ್ತಾ ಒಟ್ಟಾರೆ ಮಾನವೀಯ ಧರ್ಮದಲ್ಲೇ ಬಾಳುತ್ತಾ ಲಕ್ಷಾಂತರ ಬಾಳಿಗೆ ಪ್ರೇರಕಶಕ್ತಿಯಾದರೂ ಬಾಲ್ಯವಸ್ಥೆಯ ಕಷ್ಟದ ಕಾಲವನ್ನು ನೆನಪಿಸಿ ಇಂದಿಗೂ ತಾಯಿಯನ್ನು ದೇವತೆಯನ್ನಾಗಿಸಿ ಸಾಧನಾ ಸಾರ್ಥಕ ಜೀವನಕ್ಕೆ ಆದರ್ಶರಾದ ಶಶಿಧರ್ ಬಿ.ಶೆಟ್ಟಿ ಅವರ ಜೀವನಶೈಲಿಯು ಅಖಂಡ ಸಮಾಜಕ್ಕೆ ಪ್ರೇರಕ. ಬಲುದೂರ ಸಾರಿಯುತ್ತಿರುವ ಭಾರತೀಯ ಸಂಸ್ಕೃತಿಯನ್ನು ಸಾಮೀಪ್ಯಕ್ಕೆ ಸೆಳೆಯುವ, ಮೂಲಕ್ಕೆ ತರುವ ವಿಶೇಷ ಕಾರ್ಯಕ್ರಮ ಇದಾಗಿದ್ದು, ಮಾತೃ ಪ್ರಧಾನ ಕಾರ್ಯಕ್ರಮವೇ ಸರಿ. ಮಕ್ಕಳ ಜೀವನದ ಯಶಸ್ಸೇ ಪ್ರತೀಯೋರ್ವ ಮಾತೆಯ ವಿಜಯ ಆಗಿರುತ್ತದೆ. ಸಿನೇಮಾ ತಾರೆಯರಿಕ್ಕಿಂತ ದೊಡ್ಡ ಆದರ್ಶ ವ್ಯಕ್ತಿತ್ವ ಶಶಿಧರ ಶೆಟ್ಟಿ ಆಗಿದ್ದು ಭವಿಷ್ಯತ್ತಿನ ಪೀಳಿಗೆ ಇದು ಆದರ್ಶ. ಭಾರತವು ತ್ಯಾಗ ಸೇವಾ ಜೀವನಕ್ಕೆ ಪ್ರಧಾನವಾಗಿದ್ದು ತ್ಯಾಗ ಸೇವಿತ ಸಂಕೇತ ಮನುಕುಲವನ್ನು ಜೀವಂತವಾಗಿಸುತ್ತಿದೆ ಅನ್ನುವುದನ್ನು ಶಶಿ ತೋರಿಸಿದ್ದಾರೆ. ಇಂತಹ ಶಶಿ ಶುಕ್ಲ ಪಕ್ಷದ ಚಂದ್ರನಂತೆ ಬೆಳಗುತ್ತಿರಲಿ ಎಂದೂ ಡಾ| ಭಟ್ ಶುಭಾರೈಸಿದರು.

ಅತಿಥಿ ಅಭ್ಯಾಗತರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಾಗರ್ ರತ್ನ ಹೊಟೇಲು ಸಮೂಹದ ಪ್ರವರ್ತಕ, ಬಿಲ್ಲವ ಅಸೋಸಿಯೇಶನ್ ದೆಹಲಿ ಅಧ್ಯಕ್ಷ ಜಯರಾಮ್ ಬನಾನ್, ಆಳ್ವಾ'ಸ್ ಶೈಕ್ಷಣಿಕ ಸಮೂಹ ಮೂಡಬಿದ್ರೆ ಕಾರ್ಯಾಧ್ಯಕ್ಷ ಡಾ| ಎಂ.ಮೋಹನ್ ಆಳ್ವ, ಭವಾನಿ ಫೌಂಡೇಶನ್ ನವಿಮುಂಬಯಿ ಸಂಸ್ಥಾಪಕ ಅಧ್ಯಕ್ಷ ಚೆಲ್ಲಡ್ಕ ಕೆ.ಡಿ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ದಯಾನಂದ ಬೋಂಟ್ರಾ, ಜಯರಾಮ ಶೆಟ್ಟಿ ಸುರತ್ಕಲ್, ಪ್ರಮೀಳಾ ಶಶಿಧರ್ ಶೆಟ್ಟಿ, ಕು| ಸೃಷ್ಟಿ ಎಸ್.ಶೆಟ್ಟಿ, ಮಾ| ಸೌರ್ಯ ಎಸ್.ಶೆಟ್ಟಿ, ಅಭಿಮಾನಿ ಬಳಗದ ಪ್ರಶಾಂತ್ ಹೆಗ್ಡೆ, ವಿಶಾಲ್ ಶಾಂತಾ, ಜಿನರಾಜ ಪೂಜಾರಿ, ಮದನ್‍ಕುಮಾರ್ ಮೂಡಿಗೆರೆ ವೇದಿಕೆಯಲ್ಲಿ ದ್ದರು.

ಐಕಳ ಮಾತನಾಡಿ ಈ ಕಾಲದಲ್ಲಿ ಕಾಣಸಿಗದ ಅತ್ಯಾಧ್ಬುತ ಕಾರ್ಯಕ್ರಮ ಇದಾಗಿದೆ. ಇದು ಮಾಡಿದ ಕರ್ಮದ ಫಲ ಅಂತೆಣಿಸಿದ್ದೇನೆ. ಇಂತಹ ಅಮ್ಮನನ್ನು ಪಡೆದವರೇ ಭಾಗ್ಯವಂತರು. ಮಾತೃಪಿತೃರ ಋಣ ಪೂರೈಸುವುದರಿಂದಲೇ ಮಾನವ ಜೀವನ ಪರಿಪೂರ್ಣವಾಗಲು ಸಾಧ್ಯ. ಸುಮ್ಮನೆ ಯಾರಿಗೂ ಅಭಿಮಾನಿ ಬಳಗ ಹುಟ್ಟದು. ಇಂತಹ ಅಭಿಮಾನಿ ಬಳಗವು ಆಡಂಬರದ ಆಚರಣೆಕ್ಕಿಂತ ಆದರ್ಶದ ಆಚರಣೆಗೆ ಪಾತ್ರವಾಗಿರುವುದು ಶ್ಲಾಘನೀಯ ಎಂದರು.

ಉನ್ನತ ವಿದ್ಯಾಭ್ಯಾಸವಿಲ್ಲದೆ ಇಷ್ಟೊಂದು ಮಟ್ಟದ ಸಾಧನೆಗೈದ ನಮ್ಮೂರು ಹುಡುಗ ಶಶಿಧರ್ ಬದುಕು ವಿಸ್ಮಯವೇ ಸರಿ. ಸೇವೆಯಿಂದಲೇ ಸಾರ್ವಜನಿಕ ವ್ಯಕ್ತಿಯಾಗಿ ಗುರುತಿಸಿ ಕೊಂಡಿರುವ ಕಾರಣ ಸಾರ್ವಜನಿಕವಾಗಿಯೇ ಗುಟ್ಟಾಗಿ ಸನ್ಮಾನಕ್ಕೆ ಪಾತ್ರವಾಗುವ ಭಾಗ್ಯ ಕೆಲವರಿಗೆ ಮಾತ್ರ ಸಿಗುವುದು. ಇವರಿಂದ ಸಾರ್ಥಕ ಬದುಕಿನ ಮತ್ತಷ್ಟು ಪಾಠ ಕಲಿಯುವಂತಾಯಿತು ಎಂದು ಮೋಹನ್ ಆಳ್ವ ಅಭಿಪ್ರಾಯಪಟ್ಟರು.

ಕೆ.ಡಿ ಶೆಟ್ಟಿ ಮಾತನಾಡಿ ಶಶಿಧರ್ ತುಂಬಿದ ಕೊಡಪಾನದಂತಿದ್ದು ಅವರದ್ದು ನಿಜಾರ್ಥದ ಸೇವೆ ಮೆಚ್ಚುವಂತಹದ್ದು. ಮನುಷ್ಯನಿಗೆ ದೊಡ್ಡಸ್ಥಿಕೆ ಸ್ಥಿರವಲ್ಲ ಆದರೆ ಬದುಕಿನುದ್ದಕ್ಕೂ ಗಳಿಸಿದ ಪರರ ಪ್ರೀತಿ ಮಾತ್ರ ಸ್ಥಿರವಾದುದು. ಮಾನವೀಯತೆಯ ಶ್ರೀಮಂತಿಕೆಗೆ ಇಂತಹ ಸನ್ಮಾನ ಶಾಶ್ವತವಾದುದು ಎಂದರು.

ಹರೀಶ್ ಪೂಂಜ ಮಾತನಾಡಿ ಶಶಿ ಅಣ್ಣನ ಸ್ಫೂರ್ತಿಯೇ ನನ್ನ ಈ ಮಟ್ಟದ ಬೆಳವಣಿಗೆಗೆ ಪ್ರೇರಣೆಯಾಗಿದೆ. ತಾಯಿಯನ್ನು ದೇವರೂಪದಲ್ಲಿ ಕಾಣುವ ಸಹೃದಯಿ ಶಶಿ ತುಳುನಾಡ ಸಮಾಜದ ಮುತ್ತು ಇದ್ದಂತೆ ಎಂದರು.

ಮಾತೃದೇವೋಭವ, ಪಿತೃದೇವೋಭವ, ಅತಿಥಿ ದೇವೋಭವ ಅನ್ನುವುದನ್ನೇ ಮೈಗೂಡಿಸಿರುವ ನಾನು ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ ಬದುಕನ್ನು ರೂಪಿಸಿದವನು. ವಿನಯತಾಭಾವದ ನಡತೆಯೇ ನನ್ನ ಇಷ್ಟೆಲ್ಲಾ ಅಳಿಲ ಸೇವೆಗೆ ಕಾರಣ ಆಗಿರಬಹುದು. ಜನನಿದಾತೆಯ ಆಶೀರ್ವಾದದಿಂದಲೇ ಇಂತಹ ಪುಣ್ಯತೆ ಸಾಧ್ಯವಾದರೆ, ಪ್ರತಿಯೊಬ್ಬರೂ ಪ್ರತಿಯಾಗಿ ನೀಡಿದ ಒಲವು-ವಾತ್ಸಲ್ಯವೇ ನನ್ನ ಬಾಳಿಗೆ ಶಕ್ತಿ ತುಂಬಿದೆ ಎಂದು ಶಶಿಧರ್ ಶೆಟ್ಟಿ ಸನ್ಮಾನಕ್ಕೆ ಉತ್ತರಿಸಿದರು.

ಜಯರಾಮ ಶೆಟ್ಟಿ ಅವರೂ ಶಶಿಧರ ಶೆಟ್ಟಿ ಅವರ ಸಾಮರಸ್ಯದ ಬಾಳು, ಜೀವನಶೈಲಿ ಬಣ್ಣಿಸಿ ಶುಭಾರೈಸಿದರು. ಶಶಿಧರ್ ಜನನಿದಾತೆಯ ಪಾದಪೂಜೆ ನೆರವೇರಿಸಿದರು.

ಅಭಿಮಾನಿ ಬಳಗದ ವಿಶಾಲ್ ಶಾಂತಾ ಸ್ವಾಗತಿಸಿದರು. ದಯಾನಂದ ಬೋಂಟ್ರಾ ಪ್ರಾರ್ಥನೆಗೈದರು. ಕರ್ನೂರು ಮೋಹನ್ ರೈ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಎಸ್.ಹೆಗ್ಡೆ ಕೌಡೂರು ಪ್ರಸ್ತವನೆಗೈದ ವಂದಿಸಿದರು. ಕಾರ್ಯಕ್ರಮದಲ್ಲಿ ಶಶಿಧರ ಶೆಟ್ಟಿ ಜೀವನ ಚಿತ್ರಣದ ಸಾಕ್ಷ ್ಯ ಚಿತ್ರ ಪ್ರದರ್ಶಿಸಲಾಗಿದ್ದು, ಮನೋರಂಜನಾ ಕಾರ್ಯಕ್ರಮವಾಗಿ ಪ್ರಶಂಸ ತಂಡವು ತುಳು ಹಾಸ್ಯ ಪ್ರಹಸನ ಪ್ರಸ್ತುತ ಪಡಿಸಿತು.

 ತಾಯಿಮಗನ ಅವಿನಾಭಾವ ಸಂಬಂಧ ಕಂಡು ಕಣ್ಣೀರಿತ್ತ ಗಣ್ಯರು:
ಸ್ವರ್ಣ ಜನ್ಮೋತ್ಸವದ ದಿನ ದೇವಸ್ಥಾನಕ್ಕೆ ಹೋಗುವ ಮುನ್ನ ತಾಯಿಯ ಪಾದಪೂಜೆ ಮಾಡಿಸಿ ಕೊಳ್ಳಬೇಕೆನ್ನುವ ಆಶಯಹೊತ್ತ ಶಶಿಧರ್‍ಗೆ ಏನೋ ಕಾರಣ ಹೇಳಿ ನಿಲ್ಲಿಸಿದ್ದರೂ, ಅದೇ ಚಿಂತೆಯಲ್ಲಿದ್ದನ್ನು ಅರಿತ ಅಭಿಮಾನಿ ಬಳಗವು ತಾಯಿಯನ್ನೇ ಗುಟ್ಟಾಗಿ ಬರೋಡಾಕ್ಕೆ ಕರೆಸಿ ವೇದಿಯಲ್ಲೇ ರಾಣಿಮರ್ಯಾದಸ್ಥ ಸ್ಥಾನವನ್ನಿತ್ತು ಶೋಭಿಸಿದ್ದರು. ಇದನ್ನು ಕಂಡ ಶಶಿಧರ್ ಜನನಿದಾತೆಗೆ ಸಾಷ್ಟಾಂಗವಾಗಿ ನಮಿಸಿ ವಿಶೇಷ ರೀತಿಯಲ್ಲಿ ಪಾದುಕಪೂಜೆ ನೆರವೇರಿಸಿದರು. ತಾಯಿಯನ್ನು ದೇವರಂತೆ ಕಾಣುತ್ತಿದ್ದ ಮಗನ ಪೂಜ್ಯನೀಯ ಭಾವನೆ, ತಾಯಿಮಗನ ಅವಿನಾಭಾವ ಸಂಬಂಧ ಕಂಡ ಗಣ್ಯರೂ ಅಪ್ರತೀಮ ವಾತ್ಸಲ್ಯವನ್ನು ಕಂಡು ಕಣ್ಣೀರಿತ್ತರು.

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal