About Us       Contact

 

(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಜೂ.30: ವಿದ್ಯೆಯು ಕಲಿತಷ್ಟು ಕಲಿಯುವಂತಹ ಕಲ್ಪವೃಕ್ಷ. ನಾವೆಲ್ಲ ಕನ್ನಡ ಭಾಷೆಯಲ್ಲಿ ಕಲಿತು ಮುಂದೆ ಬಂದವರು. ಹೆಚ್ಚಿನ ವಿದ್ಯೆ ಕಲಿಯ ಬಯಸುವ ವಿದ್ಯಾರ್ಥಿಗಳಿಗೆ ಸಹಕರಿಸುವ ಮನೋಭಾವನೆ ಎಲ್ಲರಲ್ಲೂ ಇರಲಿ. ವಿದ್ಯೆ ಕಲಿತು ದೊಡ್ಡವರಾದಗ ತಮ್ಮ ಮಾತಾಪಿತರನ್ನು ಮರೆಯಬಾರದು ಎಂದು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಕರೆಯಿತ್ತರು.

ಕಳೆದ ಶನಿವಾರ ಪೋವಾಯಿಯ ಮಂತ್ರ ಹೊಟೇಲ್‍ನ ಬ್ಯಾಂಕ್ವೆಟ್ ಹಾಲ್‍ನಲ್ಲಿ ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪಾದೇಶಿಕ ಸಮಿತಿಯು ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಮುಂದಾಳತ್ವದಲ್ಲಿ ಮಹಾನಗರ ಪಾಲಿಕಾ ಕನ್ನಡ ವಿಭಾಗದ ಮಕ್ಕಳಿಗಾಗಿ ಶಾಲಾ ಉಪಕರಣ, ಪರಿಕರಣೆಗಳ ವಿತರಣಾ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿ ಚಂದ್ರಹಾಸ ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತೃಭೂಮಿ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಮಂತ್ರ ಹೊಟೇಲ್‍ನ ಮಾಲಕ ಅಪ್ಪಣ್ಣ ಎಂ.ಶೆಟ್ಟಿ, ಬಂಟರ ಸಂಘ ಮುಂಬಯಿ ಜೊತೆ ಕೋಶಾಧಿಕಾರಿ ಐಕಳ ಗುಣಪಾಲ್ ಶೆಟ್ಟಿ, ಸಂಘದ ಪ್ರಾದೇಶಿಕ ವಲಯಗಳ ಸಮನ್ವಯಕ ಡಾ| ಪ್ರಭಾಕರ್ ಶೆಟ್ಟಿ ಬೋಳ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಡಾ| ಆರ್.ಕೆ ಶೆಟ್ಟಿ ಮಾತನಾಡಿ ಪ್ರಯತ್ನ ಮಾಡಿದರೆ ಏನನ್ನೂ ಸಾಧಿಸಬಹುದು ಎಂಬ ಚಿಂತನೆ ಮಕ್ಕಳು ಚಿಕ್ಕಂದಿನಿಂದಲೇ ಮೈಗೂಡಿಸಿ ಕೊಳ್ಳಬೇಕು. ಸಾಧನೆ ಸಿದ್ಧಿಗೆ ನಮ್ಮ ದೇಶದ ಪ್ರಧಾನಿ ಮಂತ್ರಿ, ಮಾಜಿ ರಾಷ್ಟ್ರಪತಿ ಡಾ| ಅಬ್ದುಲ್ ಕಲಾಂ ಇಂತಹ ಮಹಾನ್ ಪುರುಷರನ್ನು ಆದರ್ಶವಾಗಿಸಿ ಕೊಳ್ಳಬಹುದು. ಶಾಲಾ ಪರಿಕರಗಳನ್ನು ಪಡೆದ ಮಕ್ಕಳು ಸುಶಿಕ್ಷಿತರಾಗಿ ಬೆಳೆದು ಇತರಿಗಾಗಿ ಸಹಾಯ ಮಾಡುವ ಸದ್ಗುಣವನ್ನು ಮೈಗೂಡಿಸಬೇಕು. ಎಲ್ಲಾ ಮಕ್ಕಳಿಗೆ ಸಾಧನೆ ಮಾಡುವ ಒಂದೊಲ್ಲ ಒಂದು ಧೀಶಕ್ತಿ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಿಸುವ ಅಗತ್ಯವಿದೆ ಎಂದು ಮಕ್ಕಳಿಗೆ ಮತ್ತು ಪೋಷಕರಿಗೆ ಕಿವಿಮಾತುಗಳನ್ನಾಡಿದರು.

ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂಡಾ, ಉಪ ಕಾರ್ಯಾಧ್ಯಕ್ಷೆ ಡಾ| ಪೂರ್ಣಿಮಾ ಎಸ್.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್.ಜಿ ಶೆಟ್ಟಿ ಸುಖಾಗಮನ ಬಯಸಿದರು. ಜತೆ ಕಾರ್ಯದರ್ಶಿ ರಮೇಶ್ ಡಿ.ರೈ ಕಯ್ಯಾರು ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ರವಿ ಆರ್.ಶೆಟ್ಟಿ ಅಭಾರ ವ್ಯಕ್ತಪಡಿಸಿದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal