About Us       Contact

 

(ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಬಯಿ (ಬೆಂಗಳೂರು), ನ.೦೨: ಕರ್ನಾಟಕ ರಾಜ್ಯದ ಜನತೆಯು ನಾಡಿನ ೬೪ನೇ ಕನ್ನಡ ರಾಜ್ಯೋತ್ಸವ ಸಂಭ್ರಮಿಸಿದ್ದು ಈ ಶುಭಾವಸರದಲ್ಲಿ ಕರ್ನಾಟಕ ಸರ್ಕಾರವು ತನ್ನ ವಾರ್ಷಿಕ ಪ್ರತಿಷ್ಠಿತ, ಸರ್ವೋತ್ಕಷ್ಟ ಗೌರವ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕಳೆದ ಶುಕ್ರವಾರ ಸಂಜೆ ಮಹಾನಗರದ ರವೀಂದ್ರ ಕಲಾ ಕ್ಷೇತ್ರದ ಸಭಾಗೃಹದಲ್ಲಿ ಹಸ್ತಾಂತರಿಸಿ ಗೌರವಿಸಿತು.

ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಚಿವ ಸಿ.ಟಿ.ರವಿ ಅವರನ್ನೊಳಗೊಂಡು ೨೯ ಕ್ಷೇತ್ರಗಳಲ್ಲಿನ ಸುಮಾರು ೬೪ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-೨೦೧೯ ಪ್ರದಾನಿಸಿ ಗೌರವಿಸಿದ್ದು ಆ ಪೈಕಿ ಉಡುಪಿ ಜಿಲ್ಲೆಯ ಪಡುಬಿದ್ರಿ ಇಲ್ಲಿನ ಕೊರಂಗ್ರಪಾಡಿ ಮನೆತನದ, ಗೋಲ್ಡ್ಫಿಂಚ್ ಹೊಟೇಲು ಮತ್ತು ಎಂಆರ್‌ಜಿ ಸಮೂಹದ ಪ್ರವರ್ತಕ ಕೊರಂಗ್ರಪಾಡಿ ಪ್ರಕಾಶ್ ಎಂ.ಶೆಟ್ಟಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ-೨೦೧೯ನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪ್ರದಾನಿಸಿ ಅಭಿನಂದಿಸಿದರು. ಈ ಶುಭಾವಸರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಸಚಿವ ಸಿ.ಟಿ.ರವಿ, ಸಂಸದ ತೇಜಸ್ವೀ ಸೂರ್ಯ, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಮಾತೃಭೂಮಿ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ಉಪಸ್ಥಿತರಿದ್ದು ಪ್ರಕಾಶ್ ಎಂ.ಶೆಟ್ಟಿ ಇವರನ್ನುಅಭಿನಂದಿಸಿದರು.

 

 

 

ಪ್ರಕಾಶ್ ಎಂ.ಶೆಟ್ಟಿ ಕೊರಂಗ್ರಪಾಡಿ
ಉಡುಪಿ ಜಿಲ್ಲೆಯ ಪಡುಬಿದ್ರಿ ಮೂಲತಃ ಕೊರಂಗ್ರಪಾಡಿ ಮನೆತನದ ಪ್ರಕಾಶ್ ಎಂ.ಶೆಟ್ಟಿ ಅವರು ಕೆ. ಮಾಧವ ಶೆಟ್ಟಿ ಮತ್ತು ರತ್ನಾ ಎಂ.ಶೆಟ್ಟಿ ಸುಪುತ್ರರಾಗಿರುವರು. ತನ್ನ ಕಾಲೇಜು ಶಿಕ್ಷಣ ಪೂರೈಸಿ ಹೊಟೇಲು ಉದ್ಯಮಕ್ಕೆ ನಾಂದಿಯನ್ನಾಡಿದರು. ನಂತರ ಎಂಆರ್‌ಜಿ ಸಮೂಹ ರೂಪಿಸಿ ದೇಶವಿದೇಶಗಳಲ್ಲಿ ಹೊಟೇಲು ಉದ್ಯಮವನ್ನು ಪಸರಿಸಿದರು. ಸರಳ ಸಜ್ಜನಿಕೆಯ, ಅಪಾರ ಶಿಕ್ಷಣ ಪ್ರೇಮವುಳ್ಳ ಪ್ರಕಾಶ್ ಓರ್ವ ಕೊಡುಗೈದಾನಿ ಆಗಿಯೂ ಪರಿಚಯಿತರು.

೧೯೯೭ರಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆಸಲ್ಪಟ್ಟ ೪ನೇ ನೇಶನಲ್ ಗೇಮ್ಸ್ ಮತ್ತು ೧೯೯೯ರಲ್ಲಿ ಮಣಿಪುರಾದಲ್ಲಿ ನಡೆಸಲ್ಪಟ್ಟ ೫ನೇ ನೇಶನಲ್ ಗೇಮ್ಸ್ಗಳ ಆಹಾರವನ್ನು ಪೂರೈಸಿ ಹೊಟೇಲು ಉದ್ಯಮದಲ್ಲಿ ತನ್ನದೇಆದ ಸ್ವಂತಿಕೆಯ ಛಾಪು ಮೂಡಿಸಿ ಕೊಂಡವರಾಗಿದ್ದಾರೆ. ಸದ್ಯ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ, ಟ್ರಸ್ಟೀ, ಪದಾಧಿಕಾರಿಯಾಗಿ ಸೇವಾ ನಿರತರಾಗಿದ್ದಾರೆ. ಬೆಂಗಳೂರು, ಮಂಗಳೂರು, ಡೆಲ್ಲಿ, ಮುಂಬಯಿ, ಗೋವಾ ನಗರಗಳಲ್ಲಿ ಗೋಲ್ಡ್ಫಿಂಚ್ ಹೊಟೇಲುಗಳನ್ನು ಹೊಂದಿರುವ ಇವರು ಪಂಚತಾರಾ ಹೊಟೇಲು, ವಸತಿಗೃಹ, ವ್ಯಾಪಾರ ಸಂಕೀರ್ಣ, ಕಟ್ಟಡ ನಿರ್ಮಾಣ ಸಂಸ್ಥೆಗಳನ್ನು ಮುನ್ನಡೆಸಿ ಸಾವಿರಾರು ಜನರಿಗೆ ಉದ್ಯೋಗ, ಉದ್ಯಮ ಒದಗಿಸಿ ಜನಮಾನ್ಯರಾಗಿದ್ದಾರೆ.

ಹೊಟೇಲ್ ಉದ್ಯಮಶ್ರೀ ಪುರಸ್ಕಾರ, ಭಾರತ್ ಗೌರವ ರತ್ನ ಪುರಸ್ಕಾರ, ಇಂಟರ್‌ನ್ಯಾಷನಲ್ ಗೋಲ್ಡ್ಸ್ಟಾರ್ ಮಿಲಿನಮ್ ಪುರಸ್ಕಾರ, ಬೆಸ್ಟ್ ಇಂಟೆಲ್‌ಕ್ಚುಅಲ್ ಆವಾರ್ಡ್ ಆಫ್ ಕಾರ್ಪೊರೇಟ್ ಲೀಡರ್‌ಶೀಫ್, ರಾಜೀವ್ ಗಾಂಧಿ ಶೀರೋಮನಿ ಪುರಸ್ಕಾರ, ಟಿಪ್ಪುಸುಲ್ತಾನ್ ಪುರಸ್ಕಾರ, ನ್ಯಾಷನಲ್ ಆವಾರ್ಡ್ ಫಾರ್ ಓವರ್ ಆಲ್ ಅಚೀವ್‌ಮೆಂಟ್, ಒಕ್ಕಲಿಗ ರತ್ನ ಪ್ರಶಸ್ತಿ, ತೌಳವ ಶ್ರೀ ಪ್ರಶಸ್ತಿ, ಕರಾವಳಿ ರತ್ನ ಆವಾರ್ಡ್, ನಾಡಪ್ರಭು ಕೆಂಪೇಗೌಡ ಇಂಟರ್‌ನ್ಯಾಷನಲ್ ಆವಾರ್ಡ್ ದುಬಾಯಿಯಲ್ಲಿ ಮತ್ತು ಕರ್ನಾಟಕ ಪ್ರದೇಶ ಹೊಟೇಲ್ ಆ್ಯಂಡ್ ರಿಟರ್ನ್ ಅಸೋಸಿಯೇಶನ್‌ನಿಂದ ಉದ್ಯಮರತ್ನ ಪುರಸ್ಕಾಗಳು ಒಲಿದು ಬಂದಿವೆ. ಪತ್ನಿ ಆಶಾ ಪ್ರಕಾಶ್ ಶೆಟ್ಟಿ, ಸುಪುತ್ರ ಗೌರವ್ ಪ್ರಕಾಶ್ ಶೆಟ್ಟಿಯೊಂದಿಗೆ ಜೀವನ ನಡೆಸುತ್ತಿರುವ ಇವರು ಸದಾ ಸಮಾಜಮುಖಿ ಚಿಂತನೆಯ ಇವರು ಸರಳ, ಸಜ್ಜನಿಕೆ ಮತ್ತು ಸೌಮ್ಯ ಸ್ವಾಭಾವದವರಾಗಿದ್ದು ಜಾತಿಮತ ಬೇಧವಿಲ್ಲದೆ ತೆರೆಮರೆಯಲ್ಲಿದ್ದೇ ಆರೋಗ್ಯ ಮತ್ತು ಶೈಕ್ಷಣಿಕ ಸೇವೆಗೆ ಪ್ರೋತ್ಸಾಹಿಸುತ್ತಿದ್ದಾರೆ. ಬಂಟರ ಸಂಘ ಮುಂಬಯಿ ಸಂಸ್ಥೆಯ ನಿಕಟವರ್ತಿಯಾಗಿರುವ ಪ್ರಕಾಶ್ ಶೆಟ್ಟಿ ಅವರು ಬಂಟರ ಸಂಘ ಮುಂಬಯಿ ತನ್ನ ಶಿಕ್ಷಣ ಮತ್ತು ಸಮಾಜ ಕಲ್ಯಾಣಾಭಿವೃದ್ಧಿ ಸಮಿತಿಯು ವಾರ್ಷಿಕವಾಗಿ ನಡೆಸುವ ಸಂಘದ ಬೃಹತ್ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಲ್ಲೋರ್ವರಾಗಿದ್ದಾರೆ. ಪತ್ನಿ ಆಶಾ ಪ್ರಕಾಶ್ ಶೆಟ್ಟಿ ಮತ್ತು ಸುಪುತ್ರ ಗೌರವ್ ಪ್ರಕಾಶ್ ಶೆಟ್ಟಿ ಇವರ ಕುಟುಂಬವಾಗಿದೆ.

ಗಣ್ಯರ ಅಭಿನಂದನೆ-ಶುಭಾರೈಕೆ:
`ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-೨೦೧೯' ಪುರಸ್ಕತ ಪ್ರಕಾಶ್ ಶೆಟ್ಟಿ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಮತ್ತು ಸರ್ವ ಪದಾಧಿಕಾರಿಗಳು, ಸಂಸದ ಗೋಪಾಲ ಸಿ.ಶೆಟ್ಟಿ, ಜವಾಬ್ ಅಧ್ಯಕ್ಷ ಸಿಎ| ಐ.ಆರ್ ಶೆಟ್ಟಿ, ಆಲ್‌ಕಾರ್ಗೋ ಸಮೂಹದ ಶಶಿಕಿರಣ್ ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ, ಬಿ.ವಿವೇಕ್ ಶೆಟ್ಟಿ, ಬೋಳ ರಘುರಾಮ ಕೆ.ಶೆಟ್ಟಿ, ಸಿಎ| ಶಂಕರ್ ಬಿ.ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ಡಾ| ಶಂಕರ್ ಶೆಟ್ಟಿ ವಿರಾರ್, ಸುಧಾಕರ್ ಎಸ್.ಹೆಗ್ಡೆ, (ತುಂಗಾ ಹೊಟೇಲು ಸಮೂಹ), ಜಯರಾಮ ಎನ್.ಶೆಟ್ಟಿ (ರಿಜೇನ್ಸಿ ಸಮೂಹ), ಡಾ| ಆರ್.ಕೆ ಶೆಟ್ಟಿ (ಎಲ್‌ಐಸಿ), ಮಹೇಶ್ ಎಸ್.ಶೆಟ್ಟಿ, ಉಳ್ತೂರು ಮೋಹನ್‌ದಾಸ್ ಶೆಟ್ಟಿ ಸೇರಿದಂತೆ ನೂರಾರು ಗಣ್ಯರು ಅಭಿನಂದಿಸಿ ಶುಭಾರೈಸಿದ್ದಾರೆ.

 

 

 

 

 

 

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal