Print

 ಮಂಗಳೂರು : ಆರಾಧನಾ ಕಲೆ ದೈವಾರಾಧನೆಗೆ ಸಂಬಂಧಿಸಿದ ಡಾ.ಗಣೇಶ ಅಮೀನ್ ಸಂಕಮಾರ್ ಅವರ ಅಧ್ಯಯನ ಗ್ರಂಥ “ಸಾವಿರದ ಸತ್ಯಗಳು” ದೈವ ಕಟ್ಟುವವರಿಗೆ ಮತ್ತು ಆಧುನಿಕ ರಂಗಭೂಮಿ ಬಳಸುವವರಿಗೆ ಅತ್ಯಂತ ಉಪಯುಕ್ತ ಸಮಾಲೋಚನಾ ಗ್ರಂಥ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದರು.

ಮಂಗಳೂರು ಆಕಾಶವಾಣಿಯ ತುಳು ವಿಭಾಗದ “ಸ್ವರಮಂಟಮೆ” ಪುಸ್ತಕ ಅನಾವರಣದ 23ನೇ ಸಂಚಿಕೆಯ ಕಾರ್ಯಕ್ರಮದಲ್ಲಿ ಕೃತಿ ವಿಮರ್ಶೆ ಮಾಡಿ ಮಾತನಾಡಿದರು. ಆರಾಧನೆ ನುಡಿಗಟ್ಟು, ಪಾರಿ, ಮಧು, ಮದಿಪು, ಬಿರೊ ಹೇಗಿವೆ? ಎಂಬುದನ್ನು ಮುಂದಿನ ತಲೆಮಾರಿಗೆ ತಿಳಿಸುವ ಪ್ರಯತ್ನ ಶ್ಲಾಘನೀಯ. ಹೊಸ ಕಾಲದಲ್ಲಿ ಎಲ್ಲವು ಹೊಸ ರೂಪ ಪಡೆಯುತ್ತಿದೆ. ಜನಪದವು ವೈದಿಕ ರೂಪಾಂತರವಾಗುತ್ತಿರುವ ಸಂದರ್ಭದಲ್ಲಿ ತುಳುವಿನ ಮಣ್ಣಿನ ವಾಸನೆಯ ಶ್ರೀಮಂತಿಕೆಯನ್ನು, ಅಪರೂಪದ ತುಳು ಪಾರಿಭಾಷಿಕ ಪದಬಳಕೆಯನ್ನು ತಿಳಿಸುವ ಅಪೂರ್ವ ಗ್ರಂಥ. ಹಣದ ಮುಂದೆ ಕಲೆ ಅವಸಾನವಾಗುತ್ತಿರುವಾಗ ಈ ಕೃತಿ ಮೂಲಕ ತುಳು ಸಂಸ್ಕøತಿ ಪರಂಪರೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆಂದು ವಿವೇಕ ರೈ ಅಭಿಪ್ರಾಯಪಟ್ಟರು. ಸಂತ ಅಲೋಶಿಯಸ್ ಕಾಲೇಜು ಪ್ರಾಂಶುಪಾಲರಾದ ರೆ.ಫಾ. ಮೆಲ್ವಿನ್ ಮೆಂಡೋನ್ಸಾ ಅನಾವರಣಗೊಳಿಸಿದರು. ಡಾ.ಗಣೇಶ್ ಅಮೀನ್ ಸಂಕಮಾರ್ ನುಡಿಗಟ್ಟು, ಪಾರಿ, ಮದಿಪು ಹೇಳಿ ಕೇಳುಗರಿಗೆ ಜನಪದ ಸವಿಯನ್ನು ಉಣಿಸಿದರು. ಸಾರಂಗ್ ರೇಡಿಯೋ ನಿರ್ದೇಶಕ ಮೆಲ್ವಿನ್ ಪಿಂಟೊ, ಮುಲ್ಕಿಯ ಅಗೋಳಿ ಮಂಜಣ ಜಾನಪದ ಕೇಂದ್ರದ ಚಂದ್ರಶೇಖರ ನಾಣಿಲ್, ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ್ ಮಾತನಾಡಿದರು.
ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಉಷಾಲತಾ ಸರಪಾಡಿ ಸ್ವಾಗತಿಸಿದರು. ತುಳು ವಿಭಾಗದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಕೃತಿ ವಾಚನ ಹಾಗೂ ನಿರೂಪಣೆ ಮಾಡಿದರು. ಮೋಹಿನಿ ವಿಟ್ಲ, ಅಕ್ಷತಾ ರಾಜ್ ಪೆರ್ಲ, ರೇವತಿ ಪ್ರವೀಣ್ ಹಾಗೂ ಮೋಹನ್ ದಾಸ್ ಮರೋಳಿ ಹಾಜರಿದ್ದರು.