Print

 


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಜ.16: ಬೃಹನ್ಮುಯಿಯಲ್ಲಿ ಹೇರ್ ಸ್ಟೈಲೋ ಮೂಲಕ ಸೆಲೆಬ್ರಟಿ ವ್ಯಕ್ತಿಯಾಗಿ ಪ್ರತಿಷ್ಠೆಗೆ ಪಾತರರಾದ ತುಳು-ಕನ್ನಡಿಗ ಡಾ| ಶಿವರಾಮ ಕೆ.ಭಂಡಾರಿ ಅತ್ತೂರು ಆಡಳಿತ್ವದ ಪ್ರಸಿದ್ಧ ಕೇಶ ವಿನ್ಯಾಸ ಸಂಸ್ಥೆ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಇಂದಿಲ್ಲಿ ತ್ರಿದಶಕೋತ್ಸವ ಸಂಭ್ರಮಿಸಿತು.

ಇಂದಿಲ್ಲಿ ಮಂಗಳವಾರ ಸಂಜೆ ಅಂಧೇರಿ ಪೂರ್ವದ ಪೆನಿನ್ಸೂಲಾ ಗ್ರ್ಯಾಂಡ್ ಹೊಟೇಲು ಸಭಾಗೃಹದಲ್ಲಿ ತನ್ನ ಸೇವೆಯ ಸಮೃದ್ಧಿ, ಸಫಲ ಸಿದ್ಧಿಯ ಮೂವತ್ತು ಸಂವತ್ಸರಗಳನ್ನು ಜನನಿದಾತೆ ಗುಲಾಬಿ ಕೃಷ್ಣ ಭಂಡಾರಿ, ಪತ್ನಿ ಅನುಶ್ರೀ ಭಂಡಾರಿ ಮತ್ತು ಮಕ್ಕಳಾದ ಮಾ| ರೋಹಿಲ್ ಭಂಡಾರಿ ಹಾಗೂ ಬೇಬಿ ಆರಾಧ್ಯ ಭಂಡಾರಿ ಅವರನ್ನೊಳಗೊಂಡು ಸರಳವಾಗಿ ಸಂಭ್ರಮಿಸಿತು. ಗುಲಾಬಿ ಕೆ.ಭಂಡಾರಿ ಕುಲದೇವರಾದ ಶ್ರೀ ಕಚ್ಚೂರು ನಾಗೇಶ್ವರ ದೇವರಿಗೆ ಆರತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ಕಾರ್ಯಕ್ರಮದದಲ್ಲಿ ಆಹ್ವಾನಿತರಾಗಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಮೆಗ್ನ ಪಬ್ಲಿಶಿಂಗ್ ಕಂಪೆನಿ ಲಿಮಿಟೆಡ್‍ನ ನಿರ್ದೇಶಕ ಅಶೋಕ್ ಧಮಣ್ಕರ್, ಉದ್ಯಮಿ ಗೋಪಾಲ್ ಶೆಟ್ಟಿ ಮತ್ತು ಜಯಶ್ರೀ ಜಿ.ಶೆಟ್ಟಿ, ಬ್ರೈಟ್ ಪಬ್ಲಿಸಿಟಿ ಸಂಸ್ಥೆಯ ಆಡಳಿತ ನಿರ್ದೇಶಕ ಯೋಗೆಶ್ ಲಕಾನಿ, ಪೆನಿನ್ಸೂಲಾ ಸಮುಹದ ನಿರ್ದೇಶಕ ಸತೀಶ್ ಆರ್.ಶೆಟ್ಟಿ, ತುಳು ಚಿತ್ರರಂಗದ ನಟ, ತೌಳವ ಸೂಪರ್‍ಸ್ಟಾರ್ ಸೌರಭ್ ಸುರೇಶ್ ಭಂಡಾರಿ, ರೋನಿಡಾ ಪ್ರೆಸ್ ವಿೂಡಿಯಾ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕಿ ತಾರಾ ರೋನ್ಸ್ ಬಂಟ್ವಾಳ್ ಮತ್ತಿತರರು ಉಪಸ್ಥಿತರಿದ್ದು ಶುಭ ಕೋರಿದರು.

ನಮ್ಮ ಪೂರ್ವಜರು ಪ್ರದೇಶ, ಸಮುದಾಯಕ್ಕೊಳಪಟ್ಟು ಕುಲಕ್ಕೊಂದು ಕಸಬು ಆಯ್ದು ಬದುಕು ಸಾಗಿಸುತ್ತಿದ್ದು ಅದನ್ನೇ ಪರಂಪರಾಗತವಾಗಿಸಿ ಜೀವನ ನಡೆಸುವ ಸಂಪ್ರದಾಯಸ್ಥಿಕೆ ಇಂದಿಗೂ ಜೀವಂತವಾಗಿದೆ. ಆ ಪಯ್ಕಿ ಕೇಶಕರ್ತನ ವೃತ್ತಿಯನ್ನು ಆಧುನಿಕ ಬದಲಾವಣೆಗೆ ತಕ್ಕಂತೆ ಸಂಯುಕ್ತ (ಕಾರ್ಪೋರೆಟ್ ಲೆವೆಲ್) ಮಟ್ಟದಲ್ಲಿ ಬೆಳೆಸಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ರಚಿಸಿದ ಶಿವಾ'ಸ್ ಸಂಸ್ಥೆಯ ಸಾಧನೆ ಪ್ರಶಂಸನೀಯ. ಅಂದು ಹಳ್ಳಿ ಹುಡುಗನಾಗಿದ್ದು ಇಂದು ವಿಶ್ವಮಾನ್ಯತೆಗೆ ಅರ್ಹರಾದ ಶಿವರಾಮ ಭಂಡಾರಿ ಇಂತಹ ಸಾಧನೆ ಮೆಚ್ಚುವಂತಹದ್ದು. ಆದುದರಿಂದಲೇ ಕುಲವೃತ್ತಿ ಎಂದಿಗೂ ತೃಪ್ತಿದಾಯಕ ಉದ್ಯಮವೇ ಸರಿ.ನೂರಾರು ಕರ್ಮಚಾರಿಗಳನ್ನು ಪರಿವಾರವಾಗಿಸಿ ವಾರ್ಷಿಕೋತ್ಸವ ಸಂಭ್ರಮಿಸುತ್ತಿರುವುದು ಅರ್ಥಪೂರ್ಣ ಎಂದು ಪಾಲೆತ್ತಾಡಿ ಅಭಿಪ್ರಾಯ ಪಟ್ಟರು.

ಗೋಪಾಲ್ ಶೆಟ್ಟಿ ಮಾತನಾಡಿ ನಮ್ಮೂರ ಈ ಶಿವನನ್ನು ಬಾಲ್ಯದಿಂದಲೂ ಕಂಡವನು. ಸರಳ ಸಜ್ಜನಿಕೆ, ಮೃದು ಮತ್ತು ಮಿತಭಾಷಿ ಶಿವರ ಹಗಳಿರುಳ ವೃತ್ತಿನಿಷ್ಠೆಯೇ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದರು.

ಶಿವರಾಮ ಭಂಡಾರಿ ಅವರು ಅಖಂಡ ಭಂಡಾರಿ ಸಮಾಜದ ವಜ್ರವಿದ್ದಂತೆ. ನಿಷ್ಠಾದಾಯಕ ಸೇವಾ ವೈಖರಿ ಆಧುನಿಕ ಜನಾಂಗಕ್ಕೆ ಮಾರ್ಗದರ್ಶರಾಗಿದ್ದಾರೆ ಎಂದು ನಟ ಸೌರಭ್ ತಿಳಿಸಿದರು.

ಶಿವಾ'ಸ್ ಪರಿವಾರದ ರವಿ ಭಂಡಾರಿ, ರಾಘವ ಭಂಡಾರಿ, ರಾಕೇಶ್ ಭಂಡಾರಿ, ನಿರಂಜನ ಭಂಡಾರಿ, ಶ್ವೇತಾ ಭಂಡಾರಿ ಸೇರಿದಂತೆ ಮತ್ತಿ ಶಿವಾ'ಸ್ ಸಂಸ್ಥೆಯ ಪರಿವಾರದ ಬಹುತೇಕ ಸಿಬ್ಬಂದಿಗ ಉಪಸ್ಥಿತರಿದ್ದರು. ವಿವಿಧ ಶಾಖೆಗಳ ಕರ್ಮಚಾರಿಗಳು ಮನಾಕರ್ಷಕ ನೃತ್ಯಗಳನ್ನು ಪ್ರಸ್ತುತ ಪಡಿಸಿ ಮನರಂಜೆ ನೀಡಿದರು. ಶಿವಾ'ಸ್ ಉನ್ನತಾಧಿಕಾರಿ ಸಂಸ್ಥೆಯ ಪೂರ್ವಿ ಖೆಡೆಕರ್ ಸ್ವಾಗತಿಸಿದರು. ಶಿವಾ'ಸ್ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಪ್ರಸ್ತವಿಕ ನುಡಿಗಳನ್ನಾಡಿ ತನ್ನ ಮೂವತ್ತರ ಸೇವೆಗೆ ಸಹಕರಿಸಿದ ಎಲ್ಲಾ ಗ್ರಾಹಕರು, ಹಿತೈಷಿಗಳನ್ನು ಅಭಿವಂದಿಸಿದರು. ಶಿವಾ'ಸ್ ಡೊಂಬಿವಿಲಿ ಶಾಖೆಯ ಸರಿತಾ ಬಂಗೇರ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ನಿರ್ವಾಹಿಸಿ ವಂದಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಧರೆಗುಡ್ಡೆ ನಿವಾಸಿ ಶಿವರಾಮರು ವ್ಯಕ್ತಿತ್ವದಲ್ಲೂ ಬಾಲಿವುಡ್ ವ್ಯಕ್ತಿಯಂತೆ ಕಾಣುತ್ತಿದ್ದು, ಸದಾ ತೆರೆಯ ಮರೆಯಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದು, ಭಂಡಾರಿ ಸೇವಾ ಸಮಿತಿಯ ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.1998ರ ಸಾಲಿನ ಸೆಲೂನ್ ಇಂಟರ್‍ನ್ಯಾಶನಲ್ ಪುರಸ್ಕಾರದಲ್ಲಿ ವಿಶ್ವದ ಖ್ಯಾತ 48 ಪ್ರತಿಷ್ಠಿತ ಕೇಶ ವಿನ್ಯಾಸಗಾರರಲ್ಲಿ ಭಾರತೀಯರಾಗಿ ಶಿವಾಸ್ ಪುರಸ್ಕೃತರಾಗಿದ್ದರು. ಹೇರ್ ಕಟ್ಟಿಂಗ್ ಸಲೂನ್‍ಗೆ ಹೊಸ ಆಯಾಮ ನೀಡಿ ತನ್ನ ಉದ್ಯಮವನ್ನು ಪ್ರೈವೇಟ್ ಲಿಮಿಟೆಡ್ ಆಗಿಸಿ ಶಿವಾಸ್ ಹೇರ್ ಸ್ಟೈಲೋ ಡಿಸೈನರ್ ಮುಖೇನ ಥಾಣೆ, ಜುಹೂ, ಮುಲುಂಡ್, ಅಂಧೇರಿ ಲೊಖಂಡ್‍ವಾಲ, ಅಂಧೇರಿ ಪಶ್ಚಿಮ, ಮಲಾಡ್, ವಾಲ್ಕೇಶ್ವರ್ ಮತ್ತು ಮೂಡಬಿದ್ರೆಯಲ್ಲೂ ವೃತ್ತಿ ನಿರತವಾಗಿದ್ದು, ಅತ್ಯಾಧುನಿಕ, ಸುಸಜ್ಜಿತ ಮಳಿಗೆಯಾಗಿ ಹೆಗ್ಗಳಿಕೆಗೆ ಪಾತ್ರವಾಗಿದೆÉ.