About Us       Contact

 

ಮಂಗಳೂರು : ಜಮಾಅತ್ ಪರಿಸರದಲ್ಲಿ ಇರುವ ಬಡ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಿಗೆ ಮದುವೆಯಾಗಲು ಸಹಾಯ ಮಾಡುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆ. ಇಂತಹ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ದ.ಕ ಜಿಲ್ಲಾ ಸಂಯುಕ್ತ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು. ಅವರು ರಿಫಾಯಿಯ್ಯಾ ದಫ್ಫ್ ಕಮಿಟಿ ಪಕ್ಕಲಡ್ಕ ಇದರ 14ನೇ ವಾರ್ಷಿಕೋತ್ಸವದ ಪ್ರಯುಕ್ತ ಬಜಾಲ್ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ಅಯೋಜಿಸಿದ 2 ಜೋಡಿಯ ಸರಳ ವಿವಾಹ ಕಾರ್ಯಕ್ರಮದ ನಿಖಾಹ್ ನೆರವೇರಿಸಿ ಮಾತನಾಡಿದರು. ಪ್ರತಿಯೊಂದು ಜಮಾಅತ್‍ಗಳಲ್ಲಿ ಸಂಘ ಸಂಸ್ಥೆಗಳ ಸಹಕಾರದಿಂದ ಬಡ ಹೆಣ್ಣು ಮಕ್ಕಳ ವಿವಾಹ ಮಾಡುವ ಜವಾಬ್ದಾರಿ ವಹಿಸಿದಾಗ , ಬಡ ಹೆತ್ತವರು ಮದುವೆ ಸಹಾಯಕ್ಕಾಗಿ ಬೇಡುವ ಪರಿಸ್ಥಿತಿ ದೂರವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಇಹ್ಸಾನ್ ಕರ್ನಾಟಕ ಕನ್‍ವೀನರ್ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಮಾತನಾಡಿ, ರಿಫಾಯಿಯ್ಯಾ ದಫ್ಫ್ ಕಮಿಟಿ 14 ವರ್ಷಗಳಿಂದ ಉತ್ತಮ ಸಮಾಜಸೇವೆ ಮಾಡುತ್ತಾ ಬಂದಿದೆ. ಇಂತಹ ಸಮಾಜಮುಖಿ ಸಂಘಟನೆಗಳು ಪ್ರತಿ ಊರಿನಲ್ಲಿ ಅಗತ್ಯವಿದೆ. ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಕಮಿಟಿ ಇತರೆ ಸಂಘಟನೆಗಳಿಗೆ ಮಾದರಿ ಎಂದರು.

ದ.ಕ ಜಿಲ್ಲಾ ಸಂಯುಕ್ತ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಸಿಹಾಬುದ್ದೀನ್ ತಂಙಳ್ ತಲಕ್ಕಿ ನಿಖಾಹ್ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಅಬ್ದುಲ್ ಜಬ್ಬಾರ್ ಮಿತ್ತಬೈಲ್ ಉಸ್ತಾದ್ ಇವರ ಹೆಸರಿನಲ್ಲಿ ತಹಲ್ಲೀಲ್ ಸರ್ಮಾಪಿಸಲಾಯಿತು. ರಿಫಾಯಿಯ್ಯಾ ದಫ್ಫ್ ಕಮಿಟಿಯ ಅಧ್ಯಕ್ಷ ಝೈನುದ್ಧೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ದ.ಕ ಜಿಲ್ಲಾ ಸಂಯುಕ್ತ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ತಾಜುಲ್ ಉಲಮಾ ಎಜ್ಯುಕೇಶನ್ ಅಧ್ಯಕ್ಷ ಸಿಹಾಬುದ್ದೀನ್ ತಂಙಳ್ ತಲಕ್ಕಿ ಹಾಗೂ ಮಾಜಿ ಕಾರ್ಪೋರೇಟ್ ವಿಶ್ವನಾಥ್ ಸೇವಾದಳ ಪಕ್ಕಲಡ್ಕ, ರಿಫಾಯಿಯ್ಯಾ ದಫ್ಫ್ ಕಮಿಟಿಯ ಅಧ್ಯಕ್ಷ ಝೈನುದ್ಧೀನ್ ರವರನ್ನು ಸನ್ಮಾನಿಸಲಾಯಿತು.

ಈ ವೇಳೆ ಈಸಾ ಕೋಯ ತಂಙಳ್ ಎಕ್ಕೂರು, ಅಸ್ಸುಫ್ಸ ಫೌಂಡೇಶನ್ ನ ಅಧ್ಯಕ್ಷ ಮುಹಮ್ಮದ್ ರಶೀದ್ ಸಅದಿ, ಉಮರ್ ಸಖಾಫಿ ಕಲ್ಮಿಂಜೆ, ಯೂಸುಫ್ ಕಾಮಿಲ್ ಸಖಾಫಿ ಬನಾರಿ, ಪಕ್ಕಲಡ್ಕ ಮದ್ರಸ ಮುಹಲ್ಲೀಂಗಳಾದ ಹಾರಿಸ್ ಅಶ್ರಫಿ, ಮುಹಿಯ್ಯುದ್ದೀನ್ ಮುಸ್ಲಿಯಾರ್, ದ.ಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಸ್ಥಳೀಯ ಕಾರ್ಪೋರೇಟರ್ ಟಿ.ಪ್ರವೀಣ್ ಚಂದ್ರ ಆಳ್ವ, ಶಾಫಿ ನರ್ಸಿಂಗ್ ಹೋಮ್ ನ ನಿರ್ದೇಶಕ ಡಾ.ಝೈನುದ್ಧೀನ್, ಅಬೂಬಕ್ಕರ್ ಎಂ.ಡಿ, ಮುಹೀಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಹಾಜಿ ಕೆ.ಎಂ.ಪಿ, ಪಕ್ಕಲಡ್ಕ ದರ್ಗಾ ಸಮಿತಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಹಾಜಿ, ಮುಹೀಯದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್, ಅನ್ವರ್ ಎಸ್.ಎ.ಎಸ್, ರಿಫಾಯಿಯ್ಯಾ ದಫ್ಫ್ ಕಮಿಟಿಯ ಸಂಚಾಲಕ ನೂರುದ್ದೀನ್, ಕಾರ್ಯದರ್ಶಿ ಸಬೀರ್ ಅಹ್ಮದ್, ಕೋಶಾಧಿಕಾರಿ ಯಕೂಬ್, ಸದಸ್ಯರಾದ ಮಜೀದ್ ಸಅದಿ, ಹುಸೈನ್, ಮೊಹಮ್ಮದ್ ಇರ್ಫಾನ್, ಇನ್ಸಾರ್, ಮುಹಿನುದ್ದೀನ್ ಉಪಸ್ಥಿತರಿದ್ದರು.

ಇರ್ಷಾದ್ ಕೋಡಿ ಕಾರ್ಯಕ್ರಮ ನಿರೂಪಿಸಿದರು. ಪಕ್ಕಲಡ್ಕ ಮದ್ರಸ ಸದರ್ ಮುಹಲ್ಲೀಂ ಮುಹಮ್ಮದ್ ಅನ್ವರ್ ಅಝ್ಹ್‍ರಿ ಸ್ವಾಗತಿಸಿದರು. ರಿಫಾಯಿಯ್ಯಾ ದಫ್ಫ್ ಕಮಿಟಿಯ ಮುಹಮ್ಮದ್ ಅನೀಸ್ ವಂದಿಸಿದರು.

ಊಟ ಬಡಿಸಿದ ಯುವಕಾಂಗ್ರೆಸ್ ಅಧ್ಯಕ್ಷ !
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಸಮಾರಂಭದಲ್ಲಿ ಭಾಗವಹಿಸಿದ್ದ ವಧುವರರ ಸಂಂಬಂಧಿಕರು ಹಾಗೂ ಹೆತ್ತವರಿಗೆ ಊಟವನ್ನು ಬಡಿಸುವ ಮೂಲಕ ಸಮಾಜಮುಖಿ ಕಾರ್ಯಕ್ರಮದಲ್ಲಿ ಕೈ ಜೋಡಿಸಿದರು. ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈ, ಕೊನೆವರೆಗೂ ಕುಳಿತು ಬಳಿಕ ನೇರ ಊಟದ ಛತ್ರಕ್ಕೆ ತೆರಳಿದ್ದಾರೆ. ಅಲ್ಲಿ ಬಡಿಸುವ ಬಫೆ ವ್ಯವಸ್ಥೆಯಲ್ಲಿ ತಾನೂ ನಿಂತು ಬಂದಿದ್ದ ಎಲ್ಲಾ ಅತಿಥಿಗಳಿಗೆ ಕೊನೆವರೆಗೂ ನಿಂತು ಊಟ ಬಡಿಸುವ ಕಾರ್ಯದಲ್ಲಿ ಕೈಜೋಡಿಸಿದರು. ಇದು ಸಂಘಟನೆ ಸದಸ್ಯರ ಕಾರ್ಯಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿತು. ಬಳಿಕ ಮಾತನಾಡಿ ` ಆಧುನಿಕ ಸಮಯದಲ್ಲಿ ಯಾರಿಗೂ ಪುರುಸೊತ್ತಿಲ್ಲ. ಅದರ ನಡುವೆಯೂ ಯುವಕರು ಸಂಘಟಿತರಾಗಿ ಬಡವರ ಕಣ್ಣೀರು ಒರೆಸುವ ಕಾರ್ಯ ಶ್ಲಾಘನೀಯ. ಇದು ಅನ್ಯ ಸಮುದಾಯ, ಸಂಘಟನೆಯವರಿಗೆ ಮಾದರಿಯಾದ ಕಾರ್ಯಕ್ರಮ. ಇವರ ಜೊತೆಗೆ ಕಿಂಚಿತ್ತಾದರೂ ಕೈಜೋಡಿಸುವುದು ಮಹತ್ತರ ಕಾರ್ಯ' ಎಂದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal