About Us       Contact

 

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಡಿ.02: ಬೃಹನ್ಮುಂಬಯಿ ಇಲ್ಲಿನ ಚೆಂಬೂರು ಛೆಡ್ಡಾ ನಗರದ ಶ್ರೀನಾಗ ಸುಬ್ರಹ್ಮಣ್ಯ ಸನ್ನಿಧಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಇಂದಿಲ್ಲಿ ಸೋಮವಾರ ಶ್ರೀ ಸ್ಕಂದ ಷಷ್ಠಿ ಉತ್ಸವ-2019ನ್ನು ಶ್ರದ್ಧಾಭಕ್ತಿ, ಶಾಸ್ತ್ರೋಕ್ತವಾಗಿ ಆಚರಿಸಲಾಯಿತು. ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನವಾದ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಮಠಾಧೀಶ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶ, ಆಶೀರ್ವಾದಗಳೊಂದಿಗೆ ಹಾಗೂ ಮಠದ ವಿದ್ವಾನ್ ವಿಷ್ಣು ಕಾರಂತ್ ಅವರ ಮುಂದಾಳುತ್ವದಲ್ಲಿ ನೇರವೇರಿಸಲಾದ ವಾರ್ಷಿಕ ಶ್ರೀ ಚಂಪಾ ಷಷ್ಠಿ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ವಿವಿಧ ರೂಪದ ಸೇವೆಗಳೊಂದಿಗೆ ಶ್ರೀ ನಾಗ ಸುಬ್ರಹ್ಮಣ್ಯ ದೇವರಿಗೆ ಪೂಜೆಗಳನ್ನು ನೆರವೇರಿಸಿ ಅನುಗ್ರಹಕ್ಕೆ ಪಾತ್ರರಾದರು.

ಮಠದ ಪುರೋಹಿತರಾದ ವಿದ್ವಾನ್ ನಾರಾವಿ ಗುರುರಾಜ ಭಟ್, ಹೆರ್ಗ ರವೀಂದ್ರ ಭಟ್, ಕೃಷ್ಣರಾಜ ಉಪಾಧ್ಯ, ಶ್ರೀಪ್ರಸಾದ ಭಟ್, ಶ್ರೀಧರ ಭಟ್ ಮತ್ತಿತರರ ಪೌರೋಹಿತ್ಯದಲ್ಲಿ ಬೆಳಿಗ್ಗೆಯಿಂದ ನಿರ್ಮಾಲ್ಯ ವಿಸರ್ಜನೆ, ಅಭಿಷೇಕ, ಸಂತಾನ್ ಸಂಪತ್ತು ಮತ್ತು ಆರೋಗ್ಯ ಪ್ರಾಪ್ತಿಗಾಗಿ ಸಾಮೂಹಿಕ ಆಶ್ಲೇಷಾಬಲಿ, ಸರ್ಪ ದ್ವೇಷ, ಕೋಪ, ಶಾಪ, ಶಾಂತಿಗಾಗಿ ಸರ್ಪಾತ್ರಾಯ ಮಂತ್ರ ಹೋಮ, ಮಹಾಭಿಷೇಕ, ಮಹಾಪೂಜೆ, ಮಂಗಳಾರತಿ, ಭಜನೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮೋಲ್ಲಾಸದಿಂದ ನೆರವೇರಿಸಲ್ಪಟ್ಟಿತು. ರವಿರಾಜ್ ನಕ್ಷತ್ರಿ, ಬಾಲಕೃಷ್ಣ ಭಟ್ ತಂಡವು ರಂಗೋಲಿ ಮೂಲಕ ಶ್ರೀನಾಗ ಸುಬ್ರಹ್ಮಣ್ಯ ದೇವರನ್ನು ರಚಿಸಿ ಭಕ್ತರ ಮನಾಕರ್ಷನೆಗೆ ಪಾತ್ರರಾದರು.

 

 

 

 

 

 

 

 

 

 

 

 

 

 

 

 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ಮಂಡಳಿ ಸೇರಿದಂತೆ ಶ್ರೀ ಸುಬ್ರಹ್ಮಣ್ಯ ಮಠದ ಸ್ಪಂದಕಲಾ ಮಂಡಳಿ, ಗೋಕುಲ ಮತ್ತು ಶ್ರೀಕೃಷ್ಣ ಹರಿಕೃಷ್ಣ ಭಜನಾ ಮಂಡಳಿ, ಭಜನಾ ಮಂಡಳಿ ನವಿಮುಂಬಯಿ ಇವುಗಳು ಭಜನೆಗೈದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಹನಾ ಭಾರದ್ವಾಜ್ ನಿರ್ದೇಶನದಲ್ಲಿ ಕಲಾವಿದೆಯರು ಭರತನಾಟ್ಯ ಪ್ರದರ್ಶಿಸಿದರು.

ಸಂಜೆ ಛೆಡ್ಡಾ ನಗರದ ರಾಜ ಬೀದಿಯಲ್ಲಿ ಹರೀಶ್ ಕೋಟ್ಯಾನ್ ತಂಡದ ಕೊಂಬು, ಕಹಳೆ, ವಾದ್ಯ ಚೆಂಡೆಯ ನೀನಾದಲ್ಲಿ ಅಶೋಕ್ ಕೊಡ್ಯಡ್ಕ ಬಳಗದ ಬೇತಾಳ, ಗೊಂಬೆಯಾಟ, ತುಳುನಾಡಿನ ಗಂಡುಕಲೆ ಯಕ್ಷಗಾನದೊಂದಿಗೆ ಮಠದ ವೈಧಿಕ ವೃಂದದವರ ವೇಷಧಾರಿ, ವೇದ ಘೋಷಗಳೊಂದಿಗೆ ಪಂಚವಾದ್ಯ, ನಾಗಸ್ವರ ವೇದಘೋಷಗಳೊಂದಿಗೆ ಶ್ರೀ ನಾಗದೇವರ ಪಲ್ಲಕ್ಕಿ ಉತ್ಸವ, ತೊಟ್ಟಿಲು ಉತ್ಸವ, ನಡೆಸಲ್ಪಟ್ಟು ಮಂಗಳಾರತಿ, ಪ್ರಸಾದ ವಿನಿಯೋಗ ಇತ್ಯಾದಿ ವಿಧಿವಿಧಾನಗಳೊಂದಿಗೆ ವಾರ್ಷಿಕ ಷಷ್ಠಿ ಮಹೋತ್ಸವ ಆಚರಿಸಲಾಯಿತು.

ಮಹಾನಗರದಲ್ಲಿನ ಅಪಾರ ಸಂಖ್ಯೆಯ ಭಕ್ತಾಧಿಗಳು ಉತ್ಸವದಲ್ಲಿ ಪಾಲ್ಗೊಂಡು ಪ್ರತ್ಯಕ್ಷ ದೇವರಾದ ಶ್ರೀನಾಗ ಸುಬ್ರಹ್ಮಣ್ಯ ದೇವರ ಅನುಗ್ರಹಕ್ಕೆ ಪಾತ್ರರಾದರು. ಉತ್ಸವದ ನಿಮಿತ್ತ ಕಳೆದ ಆದಿತ್ಯವಾರ ಬೆಳಿಗ್ಗೆಯಿಂದ ಪಂಚಾಮೃತ ಅಭಿಷೇಕ, ಗಣಪತಿ ಹೋಮ, ಸ್ಕಂದಮಂತ್ರ ಹೋಮ, ಪವನ ಹೋಮ, ಕೂಷ್ಮಾಂಡ ಹವನ, ಮಹಾಪೂಜೆ, ರಂಗಪೂಜೆ, ಪ್ರಸಾದ ವಿತರಣೆ, ಕನಕ ಸಭಾ ಫರ್‍ಫಾರ್ಮೆನ್ಸ್ ಆರ್ಟ್ ಸೆಂಟರ್ ಮುಂಬಯಿ ಇದರ ಕಲಾವಿದರ ಭರತನಾಟ್ಯ ಪ್ರದರ್ಶನ ಇತ್ಯಾದಿಗಳೊಂದಿಗೆ ವಾರ್ಷಿಕ ಷಷ್ಠಿ ಉತ್ಸವಕ್ಕೆ ಪೂರ್ವಸಿದ್ಧತೆ ನಡೆಸಲಾಗಿತ್ತು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal