Print

ಮುಂಬಯಿ (ಉಪ್ಪಳ), ಫೆ.22: ಸತ್ಕರ್ಮ ಹಾಗೂ ದುಷ್ಕರ್ಮಗಳೆರಡೂ ಜಗತ್ತಿನ ನಿಯಮವಾಗಿದ್ದು, ಇವೆರಡೂ ಚಲನಶೀಲ ಜಗತ್ತಿನ ಲಕ್ಷಣವಾಗಿದೆ. ಆದರೆ ಇವುಗಳ ಸಮತೋಲನ ಧರ್ಮ ಸಮಾಜ ನಿರ್ಮಾಣದ ತಳಹದಿಯಾಗಿದೆ. ಸತ್ಕರ್ಮದ ಪೂರಕ ಬೆಳವಣಿಗೆಗೆ ಆಧ್ಯಾತ್ಮಿಕ ಕಲ್ಪನೆಗೆ ಬೆಲೆ ನೀಡಬೇಕು. ಇದು ಭರತ ಖಂಡದ ಮೂಲ ಪರಂಪರೆ ಆಗಿದ್ದು, ಲೌಕಕತೆಯ ವ್ಯಾಪಕತೆಯ ಮಧ್ಯೆ ಧರ್ಮ ರಕ್ಷಣೆಯನ್ನು ಎತ್ತಿಹಿಡಿಯಲು ಸೋಮಯಾಗದಂತಹ ಮಹಾನ್ ಪರಂಪರೆಯನ್ನು ಮತ್ತೆ ಚಾಲನೆಗೊಳಿಸಿರುವುದು ಈ ಕಾಲಧರ್ಮಕ್ಕೊದಗಿದ ಪುಣ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಪರಮಪೂಜ್ಯ ಶ್ರೀಯೋಗಾನಂದ ಸರಸ್ವತೀ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಅರುಣ ಕೇತಕ ಚಯನ ಪೂರ್ವಕ ನಡೆಯುತ್ತಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಅಂಗವಾಗಿ ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಧ್ಯಾತ್ಮಿಕತೆ ಜಗತ್ತಿನ ಮೂಲ ತಳಹದಿಯಾಗಿದ್ದು, ಆಧ್ಯಾತ್ಮಕತೆಯಿಂದ ನೂರು ವರ್ಷ ನೆಮ್ಮದಿಯಾಗಿ ಕಳೆಯಬಹುದು. ಕತ್ತಲು ಹಾಗೂ ಬೆಳಕು ಎರಡೂ ಶ್ರೇಷ್ಠವಾದುದು. ಧರ್ಮದ ನಡವಳಿಕೆಯ ಮೂಲಕ ಬದುಕನ್ನು ಸಾರ್ಥಕಪಡಿಸುವುದೇ ಮಾನವ ಕುಲಕೋಟಿಯ ಲಕ್ಷ್ಯವಾಗಿದೆ. ಅಂತಹ ಶ್ರದ್ದೆ ಪ್ರತಿಯೊಬ್ಬರಲ್ಲೂ ಸುಪ್ತವಾಗಿರಬೇಕು ಎಂದು ಡಾ.ಹೆಗ್ಗಡೆ ತಿಳಿಸಿದರು.

ಯಾಗ ನಿರ್ವಹಣೆಯ ಹಿಂದೆ ಅಚಲ ಶ್ರದೆ, ಭಕ್ತಿ, ಕಲ್ಪನಾತೀತ ತಪಸ್ಸು ಬೇಕಾಗುತ್ತದೆ. ಇಂತಹ ಮಹಾನ್ ಯತ್ನದ ಮೂಲಕ ಲೋಕಹಿತದ ದೃಷ್ಟಿಯಿಂದ ಮಾಡುತ್ತಿರುವುದು ಸ್ತುತ್ಯರ್ಹ ಎಂದು ತಿಳಿಸಿದ ಅವರು ಧರ್ಮಾಚರಣೆಯಲ್ಲಿ ಅನುಕರಣೆ ಬೇಡ, ಕಾಮನೆಗಳಿಂದಾಚೆಗಿನ ವಿಚಾರವಂತಿಕೆ, ತಿಳುವಳಿಕೆ ಜ್ಞಾನದ ಮೂಲಕ ಆಚಾರದ ಅನುಸರಣೆ ಇದ್ದಾಗ ಸಾರ್ಥಕತೆ ಪಡೆಯಲು ಸಾಧ್ಯ ಎಂದು ತಿಳಿಸಿದರು.

ಭಾರತದ ಯಾಗ-ಯಜ್ಞಾದಿಗಳ ಆಚರಣೆಯ ಹಿಂದಿರುವ ವೈಜ್ಞಾನಿಕ ಸೂಕ್ಷ್ಮಗಳನ್ನು ಅರ್ಥೈಸುವ ಪ್ರಯತ್ನಗಳಾಗಬೇಕು. ಪ್ರಪಂಚದ ಶೇಕಡಾ ಒಂದರಷ್ಟು ಜನರ ಆಧ್ಯಾತ್ಮಿಕತೆಯ ತೊಡಗಿಸುವಿಕೆಯ ಪ್ರಭಾವದಿಂದ ಧನಾತ್ಮಕತೆಯ ಬೆಳವಣಿಗೆಗೆ ಪೂರಕವಾಗಿರು ಬಗ್ಗೆ ಈಗಾಗಲೇ ಸಂಶೋಧಕ ವರದಿ ಬೆಳಕುಚೆಲ್ಲಿದ್ದು, ಇನ್ನಷ್ಟು ಪ್ರಯತ್ನಗಳು ಈ ಹಿನ್ನೆಲೆಯಲ್ಲಿ ಆಗಲಿ ಎಂದು ಅವರು ತಿಳಿಸಿದರು.

ದೇಶದ ಸೈನಿಕರಿಗೆ ಶಕ್ತಿ ನೀಡಬೇಕಾದ ಸ್ಥಿತಿ ಇಂದಿದೆ. ಯಾಗದ ಮೂಲಕ ಆ ಶಕ್ತಿ ರಾಷ್ಟ್ರ ಸಂರಕ್ಷಣೆಯ ಸೈನಿಕರಿಗೆ ನಿಕ್ಷಿಪ್ತವಾಗಲಿ ಎಂದು ಅವರು ತಿಳಿಸಿದರು. ಈ ಸಂದರ್ಭ ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯು ಕಾಸರಗೋಡು ಜಿಲ್ಲೆಗೂ ವಿಸ್ತರಿಸಿರುವುದರ ಬಗ್ಗೆ ಉಲ್ಲೇಖಿಸಿದ ಹೆಗ್ಗಡೆಯವರು, ಕರ್ನಾಟಕದಿಂದ ಕಳಚಲ್ಪಟ್ಟಿರುವ ಗಡಿನಾಡು ತಮ್ಮ ದೃಷ್ಟಿಯಲ್ಲಿ ಈಗಲೂ ಕನ್ನಡದ ನೆಲವಾಗಿದೆ. ಮುಂದೊಂದು ದಿನ ಕರ್ನಾಟಕದೊಂದಿಗೆ ವಿಲೀನವಾಗಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಖಾವಂದರಿಗೆ ಧರ್ಮಚಕ್ರವರ್ತಿ ಬಿರುದು ನೀಡಿ ಗೌರವಿಸಲಾಯಿತು. ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು ಹಾಗೂ ಬಾರ್ಕೂರು ಮಹಾಸಂಸ್ಥಾನದ ಸಂತೋಷ್ ಗುರೂಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

ಗುರುವಾಯೂರು ದೇವಾಲಯದ ತಂತ್ರಿವರ್ಯ ಬ್ರಹ್ಮಶ್ರೀ ಚೇನಾಸ್ ದಿನೇಶನ್ ನಂಬೂದಿರಿಪ್ಪಾಡ್, ಕಟೀಲು ಶ್ರೀಕ್ಷೇತ್ರದ ಅನಂತಪದ್ಮನಾಭ ಆಸ್ರಣ್ಣ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉಪಸ್ಥಿತರಿದ್ದು ಮಾತನಾಡಿದರು.

ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್, ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಸದಾಶಿವ ಶೆಟ್ಟಿ, ಕುಳೂರು ಕನ್ಯಾನ, ಮಧೂರು ಶ್ರೀಕ್ಷೇತ್ರದ ಪುನರ್ ನವೀಕರಣ ಸಮಿತಿ ಕಾರ್ಯದರ್ಶಿ ಜಯದೇವ ಖಂಡಿಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಬೆಂಗಳೂರುನ ಆಕ್ಸ್‍ಫರ್ಡ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿ.ಎಲ್ ನರಸಿಂಹ ರಾಜು, ಸಮಾಜ ಸೇವಕಿ ಸುಶೀಲಮ್ಮ ಬೆಂಗಳೂರು ಅವರನ್ನು ಗೌರವಿಸಲಾಯಿತು. ಅಂತೆಯೇ ವಿವಿಧ ಸಮುದಾಯಗಳ ಪ್ರತಿನಿಧಿಗಳು, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಒಕ್ಕೂಟ ಪ್ರತಿನಿಧಿಗಳು, ಭಜನಾ ಒಕ್ಕೂಟ, ಜಿಲ್ಲಾ ಜನಜಾಗೃತಿ ವೇದಿಕೆ, ಅಖಿಲ ಭಾರತ ತುಳು ಒಕ್ಕೂಟ ಮೊದಲಾದವರು ಸಮಾರಂಭದಲ್ಲಿ ಡಾ| ಹೆಗ್ಗಡೆ ಅವರನ್ನು ಹಾರಾರ್ಪಣೆಗೈದು ಗೌರವಿಸಿದರು.

ಉದ್ಯಮಿ, ಸಮಾಜ ಸೇವಕ ಯಾಗ ಸಮಿತಿ ಗೌರವ ಕಾರ್ಯದರ್ಶಿ ಇ.ಎಸ್ ಮಹಾಬಲೇಶ್ವರ ಭಟ್ ರಷ್ಯಾ ಅವರುಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಪೂರ್ವಕ ಸನ್ಮಾನಿಸಲಾಯಿತು. ಯಾಗ ಸಮಿತಿ ಕಾರ್ಯಾಧ್ಯಕ್ಷರುಗಳಾದ ಡಾ.ಶ್ರೀಧರ ಭಟ್ ಉಪ್ಪಳ, ಮೋನಪ್ಪ ಭಂಡಾರಿ, ಡಾ| ಕೆ.ನಾರಾಯಣ ಸ್ಕ್ಯಾನ್ ಪ್ರಿಂಟರ್ಸ್ ಬೆಂಗಳೂರು, ಉದ್ಯಮಿ ಸಂಜೀವ ಶೆಟ್ಟಿ ತಿಂಬರ ಉಪಸ್ಥಿತರಿದ್ದರು.

ಯಾಗ ಸಮಿತಿ ಕಾರ್ಯಾಧ್ಯಕ್ಷ ಮೋನಪ್ಪ ಭಂಡಾರಿ ಪ್ರಸ್ತಾವನೆಗೈದರು. ನ್ಯಾಯವಾದಿ ಗಂಗಾಧರ ಕೊಂಡೆವೂರು ಸನ್ಮಾನಪತ್ರ ವಾಚಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಎಂ.ಬಿ.ಪುರಾಣಿಕ್ ಸ್ವಾಗತಿಸಿದರು. ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ನಾವರ ವಂದಿಸಿದರು.