About Us       Contact

ಉಜಿರೆ: ಡಿಸೆಂಬರ್ 2 ರಿಂದ 6 ರ ವರೆಗೆ ಧರ್ಮಸ್ಥಳದಲ್ಲಿ ನಡೆಯಲಿರುವ ಲಕ್ಷ ದೀಪೋತ್ಸವ ಹಾಗೂ 2019ರ ಫೆಬ್ರವರಿ 9 ರಿಂದ 18ರ ವರೆಗೆ ನಡೆಯುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಅಪೂರ್ವ ಸಂದರ್ಭವಾಗಿದ್ದು ಇಲ್ಲಿಗೆ ಬರುವ ಭಕ್ತಾದಿಗಳಿಗೆ ಉತ್ತಮ ವ್ಯವಸ್ಥೆಯೊಂದಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಜಿಲ್ಲೆಗೆ ಹಾಗೂ ಸರ್ಕಾರಕ್ಕೆ ಸಿಕ್ಕಿದ ಉತ್ತಮ ಅವಕಾಶ ಇದಾಗಿದ್ದು ಎಲ್ಲಾ ಇಲಾಖಾ ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ಬದ್ಧತೆಯಿಂದ ಕಾಲಮಿತಿಯೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.ಅವರು ಧರ್ಮಸ್ಥಳದಲ್ಲಿ “ಶ್ರೀ ಸನ್ನಿಧಿ” ಅತಿಥಿ ಗೃಹದಲ್ಲಿ ಲಕ್ಷ ದೀಪೋತ್ಸವ ಹಾಗೂ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವ ಸಿದ್ಧತೆಗಳ ಬಗ್ಗೆ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

 

ರಸ್ತೆ ಕಾಮಗಾರಿ, ಆರೋಗ್ಯ ಸೇವೆ, ಕುಡಿಯುವ ನೀರು ಸರಬರಾಜು, ಭದ್ರತಾ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ಸ್ವಚ್ಛತೆ, ಸಾರಿಗೆ ಮತ್ತು ಸಂಪರ್ಕ – ಇತ್ಯಾದಿ ಮೂಲಭೂತ ಸೌಲಭ್ಯ ಒದಗಿಸುವ ಬಗ್ಯೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಕಾಲಮಿತಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಚಿವರು ಸಲಹೆ ನೀಡಿದರು.
ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖಾ ಅಧಿಕಾರಿಗಳೊಂದಿಗೆ ರಸ್ತೆ ಕಾಮಗಾರಿ ಹಾಗೂ ಮಂಜೂರಾದ ಅನುದಾನದ ಬಗ್ಯೆ ಮಾಹಿತಿ ಪಡೆದ ಸಚಿವರು ಧರ್ಮಸ್ಥಳಕ್ಕೆ ಸಂಪರ್ಕ ರಸ್ತೆಗಳಾದ ಮೂಡಬಿದ್ರೆ-ವೇಣೂರು-ಉಜಿರೆ ರಸ್ತೆ ಹಾಗೂ ನಾರಾವಿ-ಗುರುವಾಯನಕೆರೆ ರಸ್ತೆ ಮತ್ತು ಪೆರಿಯಶಾಂತಿ –ಧರ್ಮಸ್ಥಳ ರಸ್ತೆ, ಚಾರ್ಮಾಡಿ ಘಾಟಿ ರಸ್ತೆ ದುರಸ್ತಿ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಸರ್ಕಾರಕ್ಕೆ ರಸ್ತೆ ದುರಸ್ತಿ ಬಗ್ಗೆ ರೂ. ಹತ್ತು ಕೋಟಿ ವೆಚ್ಚದ ಪ್ರಸ್ತಾವನೆ ಈಗಾಗಲೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಆದಷ್ಟು ಶೀಘ್ರ ಹಣ ಬಿಡುಗಡೆ ಮಾಡುವಂತೆ ಸಚಿವ ಖಾದರ್ ಲೋಕೋಪಯೋಗಿ ಸಚಿವ ರೇವಣ್ಣ ಹಾಗೂ ಸಚಿವ ಕೃಷ್ಣಭೈರೇ ಗೌಡ ಅವರನ್ನು ಸಭೆಯಲ್ಲಿಯೇ ದೂರವಾಣಿ ಮೂಲಕ ಸಂಪರ್ಕಿಸಿ ಒತ್ತಾಯಿಸಿದರು. ಮಂಗಳವಾರ ಸಂಜೆಯೇ ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖಾ ಅಧಿಕಾರಿಗಳು ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಕಾಮಗಾರಿ ಪ್ರಗತಿ ಹಾಗೂ ಬೇಕಾದ ಅನುದಾನದ ಬಗ್ಯೆ ಸೂಕ್ತ ಮಾಹಿತಿ ನೀಡಬೇಕು ಎಂದು ಸಚಿವರು ಸಲಹೆ ನೀಡಿದರು.ಒಂದು ವಾರದೊಳಗೆ ಜಿಲ್ಲಾಡಳಿತದಿಂದ ಧರ್ಮಸ್ಥಳಕ್ಕೆ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡುವುದಾಗಿ ಸಚಿವ ಖಾದರ್ ಪ್ರಕಟಿಸಿದರು.
ಪೆರಿಯಶಾಂತಿ-ಸೌತಡ್ಕ-ಧರ್ಮಸ್ಥಳ ಸಂಪರ್ಕ ರಸ್ತೆಯನ್ನೂ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು. ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಮಾತನಾಡಿ, ಅಧಿಕಾರಿಗಳು ಸಮರ್ಪಕ ಸಾರಿಗೆ ವ್ಯವಸ್ಥೆ, ಸ್ವಚ್ಛತೆ ಹಾಗೂ ಜನಸಂದಣಿ ನಿರ್ವಹಣೆ ಬಗ್ಗೆ ಗಮನ ಹರಿಸಬೇಕು ಎಂದರು.ಶಾಸಕ ಹರೀಶ್ ಪೂಂಜ ಸಮಾರಂಭದ ಯಶಸ್ವಿಗೆ ಸರ್ವರೂ ಪೂರ್ಣ ಸಹಭಾಗಿತ್ವ ನೀಡಬೇಕು. ತಾನು ಕೂಡಾ ಪೂರ್ಣ ಬೆಂಬಲ ನೀಡಿ ಕ್ಷೇತ್ರದ ಹಾಗೂ ಜಿಲ್ಲೆಯ ಘನತೆ, ಗೌರವ ಕಾಪಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶ್ರೀ ಮಂಜುನಾಥ ಸ್ವಾಮಿಯ ಸಾನ್ನಿಧ್ಯ ಹಾಗೂ ಅನುಗ್ರಹ ಮತ್ತು ಬಹುಮುಖಿ ಸೇವಾ ಕಾರ್ಯಗಳಿಂದಾಗಿ ಧರ್ಮಸ್ಥಳ ಜಾಗತಿಕವಾಗಿ ವಿಶೇಷ ಮನ್ನಣೆ ಪಡೆದಿದೆ. ಸರ್ಕಾರಕ್ಕೆ ಪೂರಕವಾದ ಅನೇಕ ಜನಪರ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಸರ್ವ ಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಜಾತಿ-ಮತ ಭೇದವಿಲ್ಲದೆ ಮಾನವೀಯತೆಯಿಂದ ಸರ್ವರಿಗೂ ಸೇವೆ ನೀಡಲಾಗುತ್ತದೆ ಎಂದು ಹೇಳಿ ಮಹೋತ್ಸವದ ಯಶಸ್ವಿಗೆ ಸರ್ವರ ಸಹಕಾರ ಕೋರಿದರು.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದಿವ್ಯಜ್ಯೋತಿ, ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಸ್ವಾಗತಿಸಿದರು. ಡಾ. ಬಿ. ಯಶೋವರ್ಮ ಧನ್ಯವಾದವಿತ್ತರು.

ಮುಖ್ಯಾಂಶಗಳು:
• ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಚಿವ ಯು.ಟಿ. ಖಾದರ್‍ಗೆ ಈದ್ ಮಿಲಾದ್ ಶುಭಾಶಯ ಸಲ್ಲಿಸಿದರು.
• ಜಿಲ್ಲಾಡಳಿತದಿಂದ ಧರ್ಮಸ್ಥಳಕ್ಕೆ ನೋಡಲ್ ಅಧಿಕಾರಿ ನೇಮಕ
• 2019ರ ಜನವರಿಯಲ್ಲಿ ಎಲ್ಲಾ ದುರಸ್ತಿ ಕಾಮಗಾರಿ ಪೂರ್ಣಗೊಳಿಸಲು ಸಚಿವ ಖಾದರ್ ನಿರ್ದೇಶನ
• ಎಲ್ಲಾ ಅಧಿಕಾರಿಗಳು ಕಾಲಮಿತಿಯಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ಮಾಡಬೇಕು.
• ಧರ್ಮಸ್ಥಳದಲ್ಲಿ ಆಯೋಜಿಸುವ ವಸ್ತು ಪ್ರದರ್ಶನದಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳು ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
• ಧರ್ಮಸ್ಥಳದ ಕೆಲವು ಸೇವಾ ಕಾರ್ಯಗಳನ್ನು ಸರ್ಕಾವೇ ಅನುಸರಿಸುತ್ತಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
• 2019ರ ಜನವರಿ ಪ್ರಥಮ ವಾರದಲ್ಲಿ ಧರ್ಮಸ್ಥಳದಲ್ಲಿ ಇನ್ನೊಂದು ಸಮಲೋಚನಾ ಸಭೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal