About Us       Contact

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಬಿ.ಎಸ್.ಕೆ.ಬಿ. ಎಸೋಸಿಯೇಶನ್ ನ ಸಹಯೋಗದೊಂದಿಗೆ ಶರನ್ನವರಾತ್ರಿಯ ಮಹಾ ನವಮಿಯ ಪರ್ವ ದಿನವಾದ ಗುರುವಾರ (ಅ.18) ದೀಪಾರಾಧನೆಯನ್ನು ಆಶ್ರಯದ ವಿ. ಎಚ್. ಸೋಮೇಶ್ವರ್ ಸಭಾಗೃಹದಲ್ಲಿ ಅತ್ಯಂತ ಸಂಭ್ರಮದಿಂದ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿತು. ವೇದಮೂರ್ತಿ ಶ್ರೀ ಕೃಷ್ಣ ರಾಜ ಉಪಾಧ್ಯಾಯರು, ಶ್ರೀಶ ಉಡುಪ, ರಾಘವೇಂದ್ರ ಭಟ್ ಮತ್ತು ಕೆ.ಶ್ರೀನಿವಾಸ ಭಟ್ ರವಾರ ಸಹಕಾರದೊಂದಿಗೆ ಮಂಡಲ ಮಧ್ಯದಲ್ಲಿ ಶ್ರೀದೇವಿಯನ್ನು ಪ್ರತಿಷ್ಠಾಪಿಸಿ, ಪೂಜಾ ವಿಧಿಗಳನ್ನು ಸಾಂಗವಾಗಿ ನೆರವೇರಿಸಿದರು. ಯಜಮಾನ ಸ್ಥಾನವನ್ನು ಡಾ. ಅರುಣ್ ರಾವ್, ಶೈಲಿನಿ ರಾವ್ ದಂಪತಿ ವಹಿಸಿದ್ದರು. ರಾತ್ರಿ ಮಹಾ ಮಂಗಳಾರತಿಯಾದ ನಂತರ ಶ್ರೀ ಬದ್ರಿನಾರಾಯಣ ಪಿಲಿಂಜೆ ಪರಿವಾರದವರ ಪ್ರಾಯೋಜಕತ್ವದಲ್ಲಿ ಕನ್ನಿಕೆ ಮತ್ತು ಸುವಾಸಿನಿಯರ ಪೂಜೆ ನೆರವೇರಿತು. ಕನ್ನಿಕಾ ಸ್ಥಾನವನ್ನು ಕುಮಾರಿ ಅನುಷ್ಕಾ ಮೇಲ್ಮನೆ ಹಾಗೂ ಮಹಾಕಾಳಿ, ಮಹಾಲಕ್ಷ್ಮೀ, ಮಹಾ ಸರಸ್ವತಿಯ ಸ್ತಾನವನ್ನು ಆಶಾ ರಾವ್, ಶಾರದಾ ಭಟ್ ಮತ್ತು ಕಲ್ಯಾಣಿ ಆರ್ ರಾವ್ ಅಲಂಕರಿಸಿದ್ದರು.


ವೇದಮೂರ್ತಿ ಕೃಷ್ಣ ರಾಜ ಉಪಾಧ್ಯಾಯರು, ನವರಾತ್ರಿಯ ಪರ್ವ ಕಾಲದಲ್ಲಿ ಶ್ರೀ ದುರ್ಗಾ ದೇವಿಯ ಆರಾಧನೆಯಿಂದ ನೆರೆದ ಭಕ್ತರ ಸಮಸ್ತ ಸಂಕಟಗಳ ನಿವಾರಣೆಯಾಗಿ, ಶ್ರೀದೇವಿಯು ಎಲ್ಲರ ಮನೋಭಿಲಾಷೆಗಳನ್ನು ಈಡೇರಿಸಿ, ಗೋಕುಲದಲ್ಲಿ ಶ್ರೀ ಕೃಷ್ಣನ ಪುನರ್ ಪ್ರತಿಷ್ಠೆ ಅತಿ ಶೀಘ್ರವಾಗಿ ಜರಗುವಂತೆ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು. ಸೇವಾರ್ಥಿಗಳಿಗೆ ಹಾಗೂ ನೆರೆದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.


ಇದೇ ಸಂದರ್ಭದಲ್ಲಿ, ಸರಸ್ವತಿ ಪೂಜೆಯ ಅಂಗವಾಗಿ, ಶಾರದಾ ಮಾತೆಯ ಭಾವಚಿತ್ರ ಹಾಗೂ ದಾರ್ಮಿಕ ಗ್ರಂಥಗಳನ್ನು ಇರಿಸಿ, ಗೋಕುಲ ಭಜನಾ ಮಂಡಳಿಯವರ ಹಾಗೂ ವಲಯದ ಭಜನಾ ಮಂಡಳಿಯವರಿಂದ ಸ್ತೋತ್ರ ಪಠನೆ, ಭಜನೆ ನೆರವೇರಿತು. ಶ್ರೀಶ ಉಡುಪರು ಶ್ರೀ ಶಾರದಾ ದೇವಿಗೆ ಮಂಗಳಾರತಿ ಗೈದು, ತೀರ್ಥ ಪ್ರಸಾದ ವಿತರಿಸಿದರು. ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ, ಹಾಗೂ ಬಿ.ಎಸ್.ಕೆ.ಬಿ ಎಸೋಸಿಯೇಶನ್ ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳ ಸಹಿತ ನೂರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal