About Us       Contact

ಮುಂಬಯಿ, ಜು.16 , 2018 : ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಇದೇ ಜು.28 ರಿಂದ ಜು.30ರ ಮೂರು ದಿನಗಳಲ್ಲಿ ಮುಂಬಯಿ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಅಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಮೊಕ್ಕ ಹೂಡಲಿದ್ದಾರೆ ಎಂದು ಮಠದ ಪ್ರಧಾನ ಶಾಖಾಧಿಕಾರಿ ರಾಮದಾಸ ಉಪಾಧ್ಯಾಯ ರೆಂಜಾಳ ತಿಳಿಸಿದ್ದಾರೆ.

ತಮ್ಮ ಐತಿಹಾಸಿಕ ಐದನೇ ಪರ್ಯಾಯ ಪೂರೈಸಿ ಇದೇ ಮೊದಲ ಬಾರಿಗೆ ಮಹಾನಗರ ಮುಂಬಯಿಗೆ ಆಗಮಿಸಲಿರುವ ಶ್ರೀಗಳನ್ನು ಜು.28ರ ಶನಿವಾರ ಸಂಜೆ 5.00 ಗಂಟೆಗೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಿಂದ ಭವ್ಯ ಶೋಭಾಯಾತ್ರೆಯೊಂದಿಗೆ ಭಕ್ತಿಪೂರ್ವಕವಾಗಿ ಬರಮಾಡಿ ಕೊಳ್ಳಲಾಗುವುದು. ಬಳಿಕ 6.00 ಗಂಟೆಗೆ ಶ್ರೀ ಪೇಜಾವರ ಮಠದ ಶಾಖೆಯಲ್ಲಿ ಶ್ರೀ ಪೇಜಾವರ ಕಿರಿಯಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಮಾರ್ಗದರ್ಶನ, ಮುಂಬಯಿಯಲ್ಲಿನ ತುಳು-ಕನ್ನಡಿಗರ, ಕರ್ನಾಟಕ ಜನತೆಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಮಹಾಪೌರ (ಮೇಯರ್) ಪೆÇ್ರ. ವಿಶ್ವನಾಥ್ ಮಹಾದೇಶ್ವರ್ ಹಾಗೂ ಗಣ್ಯಾಧಿಗಣ್ಯರ ಉಪಸ್ಥಿತಿಯಲ್ಲಿ ವಿಶ್ವೇಶತೀರ್ಥ ಶ್ರೀಗಳಿಗೆ ರಜಕ ತುಲಭಾರ ಸೇವೆ, ಸಾರ್ವಜನಿಕ ಸನ್ಮಾನ ನಡೆಸಲಾಗುವುದು.

ಶ್ರೀಪಾದದ ಬೃಹತ್ ಯೋಜನೆಯಲ್ಲಿ ಒಂದಾದ ಮಧ್ವಚಾರ್ಯರ ಜನ್ಮಸ್ಥಳ ಕುಂಜಾರುಗಿರಿ ಪಾದಕ ಕ್ಷೇತ್ರದಲ್ಲಿ ಇಂಜಿನೀಯರಿಂಗ್ ಕಾಲೇಜು ನಿರ್ಮಾಣ ಮತ್ತು ಬೆಂಗಳೂರು ಮಾರ್ಥಾಹಳ್ಳಿಯಲ್ಲಿ ಸುಮಾರು ಮೂರು ಎಕ್ರೆ ಸ್ಥಳದಲ್ಲಿ ರೂಪಿಸುವ ಕೃಷ್ಣ ಸೇವಾಶ್ರಮದ ಮಲ್ಟಿ ಸ್ಪೆಶಲಿಟಿ ಆಸ್ಪತ್ರೆಗೆ ರಜಕ ತುಲಭಾರ ಸೇವೆಯ ಕೊಡುಗೆ ಶ್ರೀಗಳು ವಿನಿಯೋಗಿಸಲಿದ್ದಾರೆ.

ಜು.29ರ ಭಾನುವಾರ ಮತ್ತು ಜು.30ರ ಸೋಮವಾರ ಈ ಎರಡು ದಿನಗಳಲ್ಲಿ ಶ್ರೀಪಾದರು ಮಠದಲ್ಲೇ ಇರಲಿದ್ದು ಅಂದು ಭಕ್ತಾಭಿಮಾನಿಗಳ ದರ್ಶನ, ಪಟ್ಟದ ದೇವರಾದ ಶ್ರೀ ರಾಮವಿಠಲ ದೇವರ ಮಹಾಪೂಜೆ, ತೀರ್ಥಪ್ರಸಾದ, ಆಶೀರ್ವಚನ ನಡೆಸಲಿದ್ದಾರೆ. ಸೋಮವಾರ ಸಂಜೆ ಮತ್ತೆ ಶ್ರೀಗಳು ಬೆಂಗಳೂರುಗೆ ನಿರ್ಗಮಿಸಲಿದ್ದಾರೆ ಎಂದು ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್, ನಿರಂಜನ್ ಗೋಗ್ಟೆ ಈ ಮೂಲಕ ತಿಳಿಸಿದ್ದಾರೆ.

ನಾಡಿನ ಸಮಸ್ತ ಭಕ್ತಾಭಿಮಾನಿಗಳು ಶ್ರೀಗಳ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗುವಂತೆ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿ ಹಾಗೂ ಪೇಜಾವರ ಮಠ ಮುಂಬಯಿ ಪರವಾಗಿ ರಾಮದಾಸ ಉಪಾಧ್ಯಾಯ ಈ ಮೂಲಕ ವಿನಂತಿಸಿದ್ದಾರೆ. ಅಧಿಕ ಮಾಹಿತಿಗಾಗಿ ಪೇಜಾವರ ಮಠದ ದೂರವಾಣಿ 26126614 ಯಾ 9892697670 ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಕೋರಲಾಗಿದೆ.

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal