About Us       Contact

ಮಂಗಳೂರು ವಿಶ್ವವಿದ್ಯಾನಿಲಯದ ಘಟಕ - ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗವು ಜನವರಿ ತಿಂಗಳ ಸರಣಿ ಉಪನ್ಯಾಸ ಕಾರ್ಯಕ್ರಮದ ಕೊನೆಯ ಭಾಗವಾಗಿ “ಆರ್.ಎಸ್.ಬಿ. ಬೊಲಿ ಮತ್ತು ಸಂಸ್ಕøತಿ” ಎನ್ನುವ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಿವೊ ಸಚಿತ್ರ ವಾರಪತ್ರಿಕೆ, ಮುಂಬಯಿ ಇದರ ಸಹ-ಸಂಪಾದಕರಾಗಿರುವ ನವೀನ್ ಕುಲಶೇಖರ್‍ರವರು ಮಾತನಾಡಿ ಕೊಂಕಣಿಯು ರುಚಿಕರವಾದ, ಸಿಹಿಯಾದ ಭಾಷೆಯಾಗಿದ್ದು ಚಿಕ್ಕಂದಿನಲ್ಲೇ ಮಕ್ಕಳಿಗೆ ಆಂಗ್ಲ ಮಾಧ್ಯಮದ ಆಸಕ್ತಿಯನ್ನು ಹೆಚ್ಚಿಸುವ ಬದಲು ಕೊಂಕಣಿಯನ್ನು ಓದಿಸುವ ನಿಟ್ಟಿನಲ್ಲಿ ಪೋಷಕರು ಮನಸ್ಸು ಮಾಡಬೇಕು ಎಂದರು. ಇತ್ತೀಚೆಗೆ ಕೊಂಕಣಿ ಪತ್ರಿಕೆ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ರಂಗಮಂದಿರಗಳಲ್ಲಿ ಕೊಂಕಣಿ ನಾಟಕ ನೋಡಲು ಜನರು ಸೇರುತ್ತಿಲ್ಲ. ಪುಸ್ತಕ ಖರೀದಿಸಿ ಓದುವವರಿಲ್ಲ. ಲಿಪಿವಾದದ ಜಗಳಕ್ಕೆ ಮಾತ್ರ ಜನ ಮುಂದಾಗುತ್ತಿದ್ದು ಸಂವಿಧಾನ ನೀಡಿದ ಅವಕಾಶವಾಗಿರುವ ದೇವನಾಗರಿ ಲಿಪಿಯನ್ನು ಬಳಸುವಂತೆ ಕೊಂಕಣಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕರೆಯಿತ್ತರು.

ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಭಾಷಿಣಿ ಶ್ರೀವತ್ಸರವರು ಮಾತನಾಡಿ ಒಂದು ಭಾಷೆಯ ಜನಾಂಗದ ಸಂಸ್ಕøತಿಯು ನಶಿಸಿತೆಂದರೆ ಆ ದೇಶದ ಅಸ್ತಿತ್ವ ಅಪಾಯದಲ್ಲಿದೆ ಎಂದರ್ಥ. ಆ ನಿಟ್ಟಿನಲ್ಲಿ ಕೊಂಕಣಿಗರು ಪೋರ್ಚುಗೀಸರ ಆಕ್ರಮಣಕ್ಕೊಳಗಾದರೂ ಕೊಂಕಣಿ ಭಾಷೆಯನ್ನು ಮುಂದುವರಿಸಿಕೊಂಡು ಬಂದಿರುವದು ಅವರ ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.

ಉಡುಪಿಯ ಶಿರ್ವದ ನಿವೃತ್ತ ಅಧ್ಯಾಪಕರಾದ ಪುಂಡಲೀಕ ಮರಾಠೆ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಜಾಪುರ ಸಾರಸ್ವತರ ಮೂಲ ಮತ್ತು ವಲಸೆ, ಆ ಜನಾಂಗದ ಸಂಸ್ಕøತಿಯ ವೈಶಿಷ್ಟ್ಯತೆಗಳನ್ನು ತಿಳಿಸಿಕೊಟ್ಟರು. ಬಾಲಾವಳಿಕರ ಮತ್ತು ರಾಜಾಪುರ ಸಾರಸ್ವತರು ಒಂದೇ ಆಗಿದ್ದು ಪ್ರದೇಶದ ಹೆಸರಿನಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳುವಂತಾಗಿದೆ ಎಂದರು ಸ್ನಾತಕೋತ್ತರ ಕೊಂಕಣಿ ವಿಭಾಗದ ಸಂಯೋಜಕರಾದ ಡಾ. ಅರವಿಂದ ಶ್ಯಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಮಾಕ್ಷಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕೊಂಕಣಿ ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಯವಂತ ನಾಯಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal