ಮುಂಬಯಿ, ಫೆ.18: ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಬಡಗನ್ನೂರು ಇಲ್ಲಿನ ದೇಯಿ ಬೈದ್ಯೆತಿ- ಕೋಟಿ ಚೆನ್ನಯರ ಮೂಲಸ್ಥಾನ ಕ್ಷೇತ್ರ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‍ಲ್ ಇಲ್ಲಿ ಫೆ.24ರಿಂದ ಮಾ.03ರ ತನಕ ನೆರವೇರಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಮಹಾರಾಷ್ಟ್ರದ ಸಮಗ್ರ ಬಿಲ್ಲವ ಬಂಧುಗಳು ಸಕ್ರೀಯರಾಗಿ ಪಾಲ್ಗೊಂಡು ದೇಯಿ ಬೈದ್ಯೆತಿ-ಕೋಟಿ ಚೆನ್ನಯರ ಕೃಪೆಗೆ ಪಾತ್ರರಾಗುವಂತೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷ, ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಜಯ ಸಿ.ಸುವರ್ಣ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್ (ಶ್ರೀ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ), ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಸೋಸಿಯೇಶನ್‍ನ ನಿಕಟಪೂರ್ವಾಧ್ಯಕ್ಷ, ಶ್ರೀ ಗೆಜ್ಜೆಗಿರಿ ಪ್ರವರ್ತಕ ಮಂಡಳಿ ವಿಶ್ವ್ವಸ್ಥ ನಿತ್ಯಾನಂದ ಡಿ.ಕೋಟ್ಯಾನ್ ಈ ಮೂಲಕ ಆಹ್ವಾನಿಸಿದ್ದಾರೆ.

ಐನೂರು ವರ್ಷಗಳ ಹಿಂದೆ ತುಳುನಾಡಿನ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಗೆಜ್ಜೆಗಿರಿ ನಂದನ ಬಿತ್ತ್‍ಲ್ ಕ್ಷೇತ್ರ ಈಗ ಪುನರುತ್ಥಾನ ಗೊಂಡಿದ್ದು, ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿದೆ. ಆ ಪ್ರಯುಕ್ತ ದೇಯಿ ಬೈದ್ಯೆತಿ-ಕೋಟಿ ಚೆನ್ನಯರ ಮೂಲಸ್ಥಾನ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಶಾಸ್ತ್ರೋಕ್ತವಾಗಿ ನೂತನ ಕೊಡಿಮರ ಪ್ರತಿಷ್ಠೆ, ಆದಿದೈವ ಧೂಮಾವತಿ ಮತ್ತು ಸಪರಿವಾರ ದೈವಗಳ ಪುನಃರ್ ಪ್ರತಿಷ್ಠೆ, ಮಹಾಮಾತೆ ದೇಯಿ ಬೈದ್ಯೆತಿ ಸತ್ಯಧರ್ಮ ಚಾವಡಿ, ಗೆಜ್ಜೆಗಿರಿ ಕೋಟಿ ಚೆನ್ನಯರ ಮೂಲಸ್ಥಾನ ಗರಡಿ ಪ್ರತಿಷ್ಠೆ ಮತ್ತು ಗೆಜ್ಜೆಗಿರಿ ಮೂಲಸ್ಥಾನ ಗರಡಿ ನೇಮೋತ್ಸವ ಇತ್ಯಾದಿಗಳೊಂದಿಗೆ ಶ್ರದ್ಧಾಭಕ್ತಿ, ಸಡಗರದೊಂದಿಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಬ್ರಹ್ಮಕಲಶೋತ್ಸವ ಗೆಜ್ಜೆಗಿರಿ ಮುಂಬಯಿ ಸಮಿತಿಯ ಸರ್ವ ಸದಸ್ಯರು ತಿಳಿಸಿದ್ದಾರೆ.

 

 

 

 

ಜಯ ಸಿ.ಸುವರ್ಣ, ವಾಸುದೇವ ಆರ್.ಕೋಟ್ಯಾನ್, ಎಲ್.ವಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ನಿತ್ಯಾನಂದ ಡಿ.ಕೋಟ್ಯಾನ್, ಭಾಸ್ಕರ್ ಎಂ.ಸಾಲ್ಯಾನ್, ಡಾ| ರಾಜಶೇಖರ್ ಆರ್. ಕೋಟ್ಯಾನ್, ಎನ್.ಟಿ ಪೂಜಾರಿ, ಹರೀಶ್ ಜಿ.ಅವಿೂನ್, ಸುರೇಂದ್ರ ಎ.ಪೂಜಾರಿ, ದಿನೇಶ್ ಅವಿೂನ್, ದಯಾನಂದ್ ಆರ್.ಪೂಜಾರಿ, ನಿಲೇಶ್ ಪೂಜಾರಿ ಪಲಿಮಾರು, ಟಿ.ರವೀಂದ್ರ ಪೂಜಾರಿ, ಸುರೇಶ್ ಪೂಜಾರಿ ಥಾಣೆ, ರಮೇಶ್ ಸಾಲ್ಯಾನ್ ಬಜೆಗೋಳಿ ಮತ್ತಿತರ ಬಿಲ್ಲವ ಧುರೀಣರು ಬ್ರಹ್ಮಕಲಶೋತ್ಸವ ಗೆಜ್ಜೆಗಿರಿ ಮುಂಬಯಿ ಸಮಿತಿಯಲ್ಲಿದ್ದು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಫೆ.26ರಂದು ಬೆಳಿಗ್ಗೆ ನೂತನ ಕೊಡಿಮರ ಪ್ರತಿಷ್ಠೆಯಾಗಲಿದೆ. ಇದರ ಬೆನ್ನಲ್ಲೇ ಧೂಮಾವತಿ, ಕುಪ್ಪೆ ಪಂಜುರ್ಲಿ, ಕಲ್ಲಾಲ್ದಾಯ ಮತ್ತು ಕೊರತಿ ದೈವಗಳ ಪುನರ್ ಪ್ರತಿಷ್ಠೆ ನಡೆಯಲಿದೆ. ಫೆ. 27ರಂದು ನಾಗಪ್ರತಿಷ್ಠೆ, ವಾಸ್ತುಹೋಮ ಇತ್ಯಾದಿ ಧಾರ್ಮಿಕ ವಿಧಾನಗಳು ನಡೆಯಲಿವೆ. ಫೆ.28ರಂದು ಬೆಳಿಗ್ಗೆ ಸತ್ಯಧರ್ಮ ಚಾವಡಿ ಮತ್ತು ಮೂಲಸ್ಥಾನ ಗರಡಿಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಫೆ.29ರಂದು ಬೆಳಿಗ್ಗೆ ಧ್ವಜಾರೋಹಣ ನಡೆದು ಧರ್ಮದೈವ ಧೂಮಾವತಿಯ ಹಗಲು ನೇಮೋತ್ಸವ ನಡೆಯಲಿದೆ. ಅದೇ ದಿನ ರಾತ್ರಿ ಪಂಜುರ್ಲಿ ಮತ್ತು ಇತರ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಮಾ.01ರಂದು ರಾತ್ರಿ ಮೂಲಸ್ಥಾನ ಗರಡಿಯಲ್ಲಿ ನೇಮೋತ್ಸವ, ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿ ಬೈದ್ಯೆತಿ ದರ್ಶನ ಸೇವೆ, ತಾಯಿ- ಮಕ್ಕಳ ಭೇಟಿ ನಡೆಯಲಿದೆ. ಮಾ.02ರಂದು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಸತ್ಯಧರ್ಮ ಚಾವಡಿಯಲ್ಲಿ ದೇಯಿ ಬೈದ್ಯೆತಿ ನೇಮೋತ್ಸವ ನಡೆಯಲಿದೆ.

ಅಷ್ಟದಿನಗಳಲ್ಲಿ ದೇವತಾ ಕಾರ್ಯಕ್ರಮಗಳು, ಧಾರ್ಮಿಕ ಸಭಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಮಹೋತ್ಸವ, ಬ್ರಹ್ಮಶ್ರೀ ನಾರಾಯಣ ಗುರು ನೃತ್ಯ ರೂಪಕ, ಸಾಂಸ್ಕೃತಿಕ ವೈಭವ, ದೇಯಿ ಬೈದ್ಯೆತಿ ಕಥಾ ವೈಭವ, ತುಳುನಾಡ ವೈಭವ, ಭಕ್ತಿ ಭಾವಗೀತೆಗಳ ಗುಂಜನ, ಯಕ್ಷ ನಾಟ್ಯ ವೈಭವ, ಭರತ ನಾಟ್ಯ, ಸತ್ಯನಾಭಕ್ತಿ (ಭಕ್ತಿ ಪ್ರಧಾನ ತುಳು ಹಾಸ್ಯ ನಾಟಕ), ಯಕ್ಷ-ಗಾನ-ನಾಟ್ಯ ವೈಭವ, ಅಮರ್ ಬೊಳ್ಳಿಲು (ನೃತ್ಯ ರೂಪಕ), ಭಕ್ತಿ ರಸಮಂಜರಿ, ನಾಟ್ಯಂ ಮಂತ್ರಂ, ಗೆಜ್ಜೆಗಿರಿತ ಬೊಲ್ಪು (ತುಳು ನೃತ್ಯ ರೂಪಕ), ಗೆಜ್ಜೆಗಿರಿಯಲ್ಲಿ ಡಾ| ರಾಜ್ ಕಾರ್ಯಕ್ರಮ ಇತ್ಯಾದಿಗಳ ಮೇಳೈಕೆಗಳೊಂದಿಗೆ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನಡೆಯಲಿದೆ.

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಸಮಿತಿ, ಗೆಜ್ಜೆಗಿರಿ ನಂದನ ಬಿತ್ತ್‍ಲ್ ಧೂಮಾವತಿ ಕರಸೇವಾ ಸಮಿತಿ, ಬ್ರಹ್ಮಕಲಶೋತ್ಸವ ಗೆಜ್ಜೆಗಿರಿ ಮುಂಬಯಿ ಸಮಿತಿ ಮತ್ತು ಸ್ಥಾನೀಯ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಸ್ವಾಗತ,ಆರ್ಥಿಕ, ಹೊರೆಕಾಣಿಕೆ, ಕಾರ್ಯಾಲಯ, ವೇದಿಕೆ, ವೈದಿಕ, ಉಗ್ರಾಣ ಮತ್ತು ಆಹಾರ, ಸಾಂಸ್ಕೃತಿಕ, ವಿದ್ಯುತ್ ಮತ್ತು ದೀಪಾಲಂಕಾರ, ಆರೋಗ್ಯ, ಪ್ರಚಾರ, ಎಲ್‍ಇಡಿ ಪ್ರಸಾರ, ಸ್ವಚ್ಛತಾ, ನೀರಾವರಿ, ಪ್ರಸಾದ ತಯಾರಿ ಮತ್ತು ವಿತರಣಾ, ವಾಹನ ನಿಲುಗಡೆ ಮತ್ತು ಸುವ್ಯವಸ್ಥೆ, ಅಲಂಕಾರ, ಆಮಂತ್ರಣ ಪತ್ರಿಕೆ ಮತ್ತು ಸಮನ್ವಯ, ಉಟೋಪಚಾರ, ಸ್ವಯಂ ಸೇವಕ, ಮಾಧ್ಯಮ, ಸಭಾಂಗಣ ವ್ಯವಸ್ಥೆ, ಮಹಿಳಾ ಸಮಿತಿ ಸೇರಿದಂತೆ ಸುಮಾರು 23 ಉಪಸಮಿತಿಗಳು ಇದೀಗಲೇ ಸಕ್ರೀಯವಾಗಿ ಸೇವೆಯಲ್ಲಿ ತೊಡಗಿಸಿ ಕೊಂಡು ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸುತ್ತಿವೆ.

ಫೆ.25ನೇ ಮಂಗಳವಾರ ಮಧ್ಯಾಹ್ನ 12.00 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ದೇವರ ಮಾರುಗದ್ದೆ ಇಲ್ಲಿಂದ ಮೂಲಸ್ಥಾನಕ್ಕೆ ಭವ್ಯ ಮೆರವಣಿಗೆಯಲ್ಲಿ ಹೊರೆಕಾಣಿಕೆ ನಡೆಯಲಿದ್ದು, ಮಾ.02ರಂದು ನೆರವೇರಿಸಲಾಗುವ ಮಹಾಮಾತೆ ದೇಯಿ ಬೈದ್ಯೆತಿ ನೇಮೋತ್ಸವದಲ್ಲಿ ಭಕ್ತರಿಗೆ ಅಮೃತಬಳ್ಳಿ ಸಮರ್ಪಣೆಗೆ ಅವಕಾಶವಿದೆ ಎಂದೂ ಕ್ಷೇತ್ರದ ವಕ್ತಾರರು ತಿಳಿಸಿದ್ದಾರೆ.

ಗೆಜ್ಜೆಗಿರಿ ಮಾತೆ ದೇಯಿ ಬೈದ್ಯೆತಿಗೆ ಪುನರ್ಜನ್ಮ ನೀಡಿದ ತಾಣ:
ಕೋಟಿ ಚೆನ್ನಯರ ಮೂಲ ಮನೆಯಾದ ಗೆಜ್ಜೆಗಿರಿ ಮಾತೆ ದೇಯಿ ಬೈದ್ಯೆತಿಗೆ ಪುನರ್ಜನ್ಮ ನೀಡಿದ ತಾಣ. ಇದು ಗುರು ಸಾಯನ ಬೈದ್ಯರ ಕರ್ಮಭೂಮಿ. ಈ ಮೂರು ತಲೆಮಾರುಗಳ ಕಾರಣಿಕ ಶಕ್ತಿಗಳ ಆರಾಧನೆ ಗೆಜ್ಜೆಗಿರಿಯಲ್ಲಿ ಐದು ಶತಮಾನಗಳ ಬಳಿಕ ಈಗ ಮೊದಲ ಬಾರಿ ನಡೆಯಲಿದೆ. ಕೋಟಿ ಚೆನ್ನಯರನ್ನು ಆರಾಧಿಸುವ ಸುಮಾರು 247ರಷ್ಟು ಗರಡಿಗಳಿದ್ದು, ಅವೆಲ್ಲದಕ್ಕೂ ಕಲಶಪ್ರಾಯವಾಗಿ ಗೆಜ್ಜೆಗಿರಿ ಮೂಲಸ್ಥಾನ ಗರಡಿ ಮೂಡಿ ಬರಲಿದೆ. ಯಾಕೆಂದರೆ ಇದು ಕೋಟಿ ಚೆನ್ನಯರ ಮೂಲ ಮಣ್ಣು. ಇಲ್ಲಿ ತಾಯಿ ಮತ್ತು ಮಕ್ಕಳ ಸಮಾಗಮ ಆರಾಧನೆ ಕೌಟುಂಬಿಕ ತರವಾಡು ಚೌಕಟ್ಟಿನಲ್ಲಿ ನಡೆಯಲಿದೆ.

ಗೆಜ್ಜೆಗಿರಿ ಕ್ಷೇತ್ರ ಐದು ಶತಮಾನಗಳ ಹಿಂದೆ ಇದು ಪಡುಮಲೆ ಬಲ್ಲಾಳರ ಸಂಸ್ಥಾನವಾಗಿದ್ದು, ಅದರ ವ್ಯಾಪ್ತಿಯಲ್ಲಿ ಬರುವ ಏರಾಜೆ ಬರ್ಕೆ ಎಂಬ ಪ್ರತಿಷ್ಠಿತ ಮನೆತನ ಇದಾಗಿತ್ತು. ಬಲ್ಲಾಳ ಅರಸರಿಗೆ ಸೈನ್ಯ ತಯಾರಿಸಿ ಕೊಡುತ್ತಿದ್ದ ಮನೆತನವಿದು. ಇದೇ ಮನೆ ಗೆಜ್ಜೆಗಿರಿ ನಂದನ ಬಿತ್ತ್‍ಲ್ ಎಂದು ಹೆಸರಾಯಿತು. ಸಾಯನ ಬೈದ್ಯರು ಈ ಅವಳಿ ವೀರರ ಮಾರ್ಗದರ್ಶಕರಾಗಿ, ಗುರುಗಳಾಗಿ ಕಂಗೊಳಿಸಿದವರು. ಅಯೋನಿಜೆಯಾಗಿ ಜನಿಸಿದ ಸುವರ್ಣ ಕೇದಗೆಯನ್ನು ಆಕೆಯ ಸಾಕು ತಂದೆ ಕಾಡಿನಲ್ಲಿ ಬಿಟ್ಟು ಹೋದ ಬಳಿಕ ಸಾಯನ ಬೈದ್ಯರು ಆಕೆಯನ್ನು ತಂಗಿಯಾಗಿ ಸ್ವೀಕರಿಸಿ ತನ್ನ ಗೆಜ್ಜೆಗಿರಿ ಮನೆಗೆ ಕರೆತಂದು ಸಾಕಿದ್ದಲ್ಲದೆ, ದೇಯಿ ಬೈದ್ಯೆತಿ ಎಂಬ ಹೆಸರು ನೀಡಿ, ಪ್ರಸಿದ್ಧ ನಾಟಿ ವೈದ್ಯೆಯಾಗಿ ರೂಪಿಸಿದರು. ಇದೇ ಮಾತೆ ಪಡುಮಲೆ ಬಲ್ಲಾಳನ ದುರಿತ ನಿವಾರಣೆ ಮಾಡಿದರು. ಕರ್ಗಲ್ಲ ತೋಟ ಕಾಂತಣ್ಣ ಬೈದ್ಯರ ಮಡದಿಯಾದ ದೇಯಿ ಮಾತೆ ಮತ್ತೆ ಗೆಜ್ಜೆಗಿರಿ ಮನೆಗೆ ತುಂಬು ಗರ್ಭಿಣಿಯಾಗಿ ಬಂದಿದ್ದರು. ಇಲ್ಲಿರುವಾಗಲೇ ಆಕೆ ಪಡುಮಲೆ ಬಲ್ಲಾಳನ ದುರಿತ ನಿವಾರಣೆಗೆ ತೆರಳಿದ್ದು, ಅರಸ ಗುಣಮುಖನಾಗಿದ್ದು ಕಥಾನಕವಾಗಿದೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಅಕಾಲಿಕ ಮರಣಕ್ಕೆ ತುತ್ತಾದಾಗ ಸಹೋದರ ಸಾಯನ ಬೈದ್ಯರು ತಂಗಿಯ ಕಳೇಬರವನ್ನು ಗೆಜ್ಜೆಗಿರಿಗೆ ತಂದು ದಫನ ಮಾಡುತ್ತಾರೆ. ಆ ಸಮಾಧಿ ಇವತ್ತಿಗೂ ಗೆಜ್ಜೆಗಿರಿಯಲ್ಲಿದ್ದು, ದೇಯಿ ಬೈದ್ಯೆತಿ ಮಹಾಸಮಾಧಿ ಎಂಬ ಹೆಸರು ಪಡೆದುಕೊಂಡಿದೆ. ತಾಯಿಯನ್ನು ಕಳೆದುಕೊಂಡ ಕೋಟಿ ಚೆನ್ನಯರು ಮಾವನ ನೆರಳಲ್ಲಿ ಗೆಜ್ಜೆಗಿರಿಯಲ್ಲೇ ಬೆಳೆದು ಸಕಲ ವಿದ್ಯಾ ಪಾರಂಗತರಾಗಿ, ಕಾರಣಿಕ ಪುರುಷರಾಗಿ ಕಂಗೊಳಿಸಿದರು. ಮಂತ್ರಿ ಬುದ್ಧಿವಂತನ ವಧೆ ಮಾಡಿದ ಬಳಿಕ ಪಂಜ, ಎಣ್ಮೂರಿಗೆ ತೆರಳುವ ಯಮಳರು ಅಪಾರ ಕಾರಣಿಕ, ಶೌರ್ಯ, ಪರಾಕ್ರಮ ತೋರಿಸುತ್ತಾರೆ. ಸತ್ಯ ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡುತ್ತಾರೆ. ಅಂದಿನಿಂದ ಅವರ ಗರಡಿ ಆರಾಧನೆ ಆರಂಭಗೊಂಡಿದೆ.

ಸದ್ಯ ಈ ಕ್ಷೇತ್ರದಲ್ಲಿ ಈ ಹಿಂದೆ ಕೋಟಿ ಚೆನ್ನಯರು, ದೇಯಿ ಬೈದ್ಯೆತಿ ಮತ್ತು ಸಾಯನ ಗುರುಗಳು ಬಾಳಿ ಬದುಕಿದ್ದ ಗೆಜ್ಜೆಗಿರಿಯ ಮೂಲ ಮನೆಯೇ ಇಂದು ಭವ್ಯವಾಗಿ ಪುನರುತ್ಥಾನಗೊಂಡಿದೆ. ಅದನ್ನು ಸತ್ಯಧರ್ಮ ಚಾವಡಿ ಎಂದು ಕರೆಯಲಾಗುತ್ತಿದೆ. ಈ ಚಾವಡಿಯ ಗರ್ಭ ಗುಡಿಯಲ್ಲಿ ದೇಯಿ ಬೈದ್ಯೆತಿಯ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಸತ್ಯಧರ್ಮ ಚಾವಡಿಯೊಳಗೆ ಈಶಾನ್ಯ ಭಾಗದಲ್ಲಿ ಸಾಯನ ಗುರುಗಳ ಗುರುಪೀಠ ಸ್ಥಾಪನೆಯಾಗಲಿದೆ. ಸಾಯನ ಗುರುಗಳ ಹಿರಿಯರ ಕಾಲದಿಂದಲೂ ಈ ಮಣ್ಣಿನಲ್ಲಿ ಆರಾಧನೆ ಪಡೆಯುತ್ತಿದ್ದ ಧರ್ಮದೈವ ಧೂಮಾವತಿ ಮತ್ತು ಕುಪ್ಪೆ ಪಂಜುರ್ಲಿ ದೈವಗಳ ಸಾನಿಧ್ಯ ಪುನರ್ ನಿರ್ಮಾಣ ಗೊಂಡಿದೆ. ಮಹಾಮಾತೆ ದೇಯಿ ಬೈದ್ಯೆತಿಯ ಸಮಾಧಿ ಬನ ರೂಪದಲ್ಲಿ ಸಂರಕ್ಷಣೆಯಾಗುತ್ತಾ ಬಂದಿದ್ದು, ಅದನ್ನೀಗ ಸುಂದರ ಸ್ಮಾರಕವಾಗಿ ಅಭಿವೃದ್ಧಿಪಡಿಸಲಾಗಿದೆ. ಪಡುಮಲೆ ಬಲ್ಲಾಳ ಅರಸನು ಮಾತೆ ದೇಯಿ ಬೈದ್ಯೆತಿಗಾಗಿ ಕಳುಹಿಸಿಕೊಟ್ಟಿದ್ದ ರಾಜ ದಂಡಿಗೆಯನ್ನು ಇರಿಸಿದ್ದ ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆಯನ್ನು ಸುಂದರವಾಗಿ ಮರು ನಿರ್ಮಿಸಲಾಗಿದೆ. ಗೆಜ್ಜೆಗಿರಿ ಶಿಖರಾಗ್ರದಲ್ಲಿ ಕೋಟಿ ಚೆನ್ನಯರ ಮೂಲಸ್ಥಾನ ಗರಡಿ ನಿರ್ಮಾಣವಾಗುತ್ತಿದೆ. ಗರಡಿಗೆ ಅಭಿಮುಖವಾಗಿ ಬೆರ್ಮೆರ್ ಗುಂಡ ತಲೆ ಎತ್ತಿದೆ.

ಇದೀಗ ಮೊದಲ ಬಾರಿ ಗೆಜ್ಜೆಗಿರಿಯಲ್ಲಿ ಮೂಲಸ್ಥಾನ ಗರಡಿ ಮತ್ತು ಮಾತೆಯ ಸತ್ಯಧರ್ಮ ಚಾವಡಿ ನಿರ್ಮಾಣಗೊಂಡಿದೆ. ಈಗಾಗಲೇ ವಿಶ್ವ ಮಟ್ಟದ ಭಕ್ತ ಸಮುದಾಯ ಕ್ಷೇತ್ರಕ್ಕೆ ನೆರವು ನೀಡಿದ್ದು, ಇನ್ನಷ್ಟು ಸಹಾಯ ಅಪೇಕ್ಷಿಸಲಾಗಿದೆ. ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ತನುಮನಧನ ಸಹಾಯ ನೀಡಬೇಕೆಂದು ಕ್ಷೇತ್ರಾಡಳಿತ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಗೆಜ್ಜೆಗಿರಿ ಮುಂಬಯಿ ಸಮಿತಿ ವಿನಂತಿಸಿದೆ. (: ರೋನ್ಸ್ ಬಂಟ್ವಾಳ್)
*******************************************************************************************************

 

Comments powered by CComment

Latest News

Copyright © 2016 - www.bantwaltimes.com. Powered by eCreators

Bantwal Times

Bantwal